ADVERTISEMENT

ಮೈಸೂರು: ನೆಬೆ ಸಮ್ಮಿಲನ; ನೆನಪುಗಳ ಅನಾವರಣ

‌ಮಹಾರಾಜ ಕಾಲೇಜು: 40 ವರ್ಷ ಹಿಂದಿನ ವಿದ್ಯಾರ್ಥಿಗಳ ಸಭೆ, ರಂಗಭೂಮಿ ಸಕ್ರಿಯಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 3:05 IST
Last Updated 9 ಫೆಬ್ರುವರಿ 2026, 3:05 IST
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನೆಳಲು ಬೆಳಕು ತಂಡ ಆಯೋಜಿಸಿದ್ದ ‘ನೆಬೆ–40’ ಸಮ್ಮಿಲನ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಆಡಳಿತಾಧಿಕಾರಿ ಎಸ್.ಟಿ.ರಾಮಚಂದ್ರ ಉದ್ಘಾಟಿಸಿದರು. ಶಶಿಧರ್ ಭಾರೀಗಾಟ್, ಎನ್‌.ವಿ.ವಾಸುದೇವ ಶರ್ಮಾ, ಪ್ರೊ.ಡಿ.ವಿಜಯಲಕ್ಷ್ಮಿ ಹಾಜರಿದ್ದರು   –ಪ್ರಜಾವಾಣಿ ಚಿತ್ರ
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನೆಳಲು ಬೆಳಕು ತಂಡ ಆಯೋಜಿಸಿದ್ದ ‘ನೆಬೆ–40’ ಸಮ್ಮಿಲನ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಆಡಳಿತಾಧಿಕಾರಿ ಎಸ್.ಟಿ.ರಾಮಚಂದ್ರ ಉದ್ಘಾಟಿಸಿದರು. ಶಶಿಧರ್ ಭಾರೀಗಾಟ್, ಎನ್‌.ವಿ.ವಾಸುದೇವ ಶರ್ಮಾ, ಪ್ರೊ.ಡಿ.ವಿಜಯಲಕ್ಷ್ಮಿ ಹಾಜರಿದ್ದರು   –ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಮಹಾರಾಜ ಕಾಲೇಜಿನಲ್ಲಿ ಭಾನುವಾರ ನೆಳಲು ಬೆಳಕು(ನೆಬೆ) ತಂಡದಿಂದ ನಡೆದ ನೆಬೆ–40 ಸಮ್ಮಿಲನ ಕಾರ್ಯಕ್ರಮವು ಹಳೇ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ಕಾರಣವಾಯಿತು. ಮಧುರ ನೆನಪುಗಳು ಅನಾವರಣಗೊಂಡವು.

40 ವರ್ಷಗಳ ಹಿಂದೆ ಕಾಲೇಜಿನಲ್ಲಿ ನಾಟಕ ಅಭ್ಯಾಸ, ಪ್ರದರ್ಶನ, ಸ್ಪರ್ಧೆ ಮುಂತಾದ ಚಟುವಟಿಕೆಗೆಂದು ಸ್ಥಾಪನೆಗೊಂಡ ‘ನೆಬೆ’ಯ ಮೂಲಕ ತಮ್ಮ ಜೀವನದ ಮೇಲೆ ಬೀರಿದ ಪ್ರಭಾವವನ್ನು ಅನೇಕರು ಸ್ಮರಿಸಿದರು. ವೈಯಕ್ತಿಕ ಬೆಳವಣಿಗೆಗೆ ದೊರೆತ ಸಹಕಾರವನ್ನು ಸ್ಮರಿಸಿದರು. ಕಾಲೇಜು ರಂಗಭೂಮಿಯನ್ನು ಮತ್ತೆ ಸಕ್ರಿಯಗೊಳಿಸಬೇಕು ಎಂದು ತೀರ್ಮಾನಿಸಿದರು.

ರಂಗಕರ್ಮಿ ಶಶಿಧರ್ ಭಾರೀಗಾಟ್ ಮಾತನಾಡಿ, ‘ಕಾಲೇಜಿನ ಅನೇಕರನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ‘ನೆಬೆ’ ಪ್ರಭಾವಿಸಿದೆ. ಆಪ್ತ ಭಾವವನ್ನು ನೀಡಿದೆ. ಇಂದಿನ ಮಕ್ಕಳಿಗೂ ಇಂಥ ಚಟುವಟಿಕೆ ದೊರೆಯಬೇಕು. ನಾವೆಲ್ಲರೂ ಇದನ್ನು ಕಾರ್ಯಗತಗೊಳಿಸಬೇಕು’ ಎಂದರು.

ADVERTISEMENT

ಎನ್‌.ವಿ.ವಾಸುದೇವ ಶರ್ಮಾ ಮಾತನಾಡಿ, ‘ನಮ್ಮ ಪರಿಚಯ ಇರುವುದೇ ಮಹಾರಾಜ ಕಾಲೇಜಿನ ಮೂಲಕ, ನಮಗೆ ದೊರೆತ ಅನುಭವವನ್ನು ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳಿಗೂ ದೊರಕಿಸಬೇಕಿದೆ. ನಾಟಕ ಚಟುವಟಿಕೆಯಲ್ಲಿ ಅವರನ್ನು ತೊಡಗಿಸಲು ಪ್ರಯತ್ನಿಸಬೇಕಿದೆ’ ಎಂದರು.

ಮಹಾರಾಜ ಕಾಲೇಜು ಆಡಳಿತಾಧಿಕಾರಿ ಪ್ರೊ.ಎಸ್.ಟಿ. ರಾಮಚಂದ್ರ ಮಾತನಾಡಿ, ‘ಸಮಾಜವನ್ನು ತಿದ್ದುವಲ್ಲಿ ಸಾಂಸ್ಕೃತಿಕ ಸಂಘಟನೆಗಳ ಕೊಡುಗೆ ಅಪಾರ. ನೆಬೆ ಅಂಥ ಕೆಲಸ ಮಾಡಿತ್ತು. ಇಂದು ಅಂತರ ಕಾಲೇಜು ಸ್ಪರ್ಧೆಗಳಿಗೆ ಹೋಗಲು ವಿದ್ಯಾರ್ಥಿಗಳೇ ದೊರೆಯುತ್ತಿಲ್ಲ. ಅಗತ್ಯ ಮಾರ್ಗದರ್ಶನ ನೀಡಲು ನೆಬೆ ಸದಸ್ಯರು ಮುಂದಾಗಬೇಕು.‌ ಕಾಲೇಜಿನಿಂದ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ವಿಜಯಲಕ್ಷ್ಮಿ, ‘ಆಸಕ್ತ ವಿದ್ಯಾರ್ಥಿಗಳು ಈಗಲೂ ಇದ್ದು, ಸೂಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರಲ್ಲಿ ಉತ್ಸಾಹ ಮೂಡಿಸಬಹುದು’ ಎಂದರು.

ರಂಗಕರ್ಮಿ ಎಚ್‌.ಎಸ್‌.ಉಮೇಶ್‌ ಅವರು, ‘ಕಾಲೇಜು ರಂಗಭೂಮಿಯ ಪ್ರಾಮುಖ್ಯತೆ ಮತ್ತು ವೈಶಿಷ್ಟ್ಯ’ ಕುರಿತು ಮಾತನಾಡಿದರು.

ಒಡನಾಡಿ ಸಂಸ್ಥೆಯ ಮಕ್ಕಳು ಪ್ರದರ್ಶಿಸಿದ ಸೌಹಾರ್ದ, ಶಾಂತಿ ಹಾಗೂ ಸಹಬಾಳ್ವೆ ತೋರುವ ರಂಗರೂಪಕವು ಗಮನ ಸೆಳೆಯಿತು.

ಜಯಚಂದ್ರರಾಜೇ ಅರಸು, ಎ.ಎಂ.ಶಿವಸ್ವಾಮಿ, ಬಿಂದು ಪಟೇಲ್‌, ಪರಶಿವಮೂರ್ತಿ, ಲೋಕೇಶ್‌ ಮೊಸಳೆ, ಬಿ.ಎನ್‌.ನಿಜಲಿಂಗಪ್ಪ, ವಸುಧಾ, ವಾಸಂತಿ ಬಹಾದ್ದೂರ್, ಚಲುವರಾಜ್, ಸಾವಿತ್ರಿ ಶಾಸ್ತ್ರಿ, ಸುಜಾತ ಭಾಸ್ಕರ್‌, ಶಿವಶಂಕರ್‌ ಮೊದಲಾದವರು ತಮ್ಮ ಅನುಭವ ಹಂಚಿಕೊಂಡರು. ಹಾಡು, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.