
ಹುಣಸೂರು ತಾಲ್ಲೂಕಿನ ನೆಲ್ಲೂರುಪಾಲ ಗ್ರಾಮದಲ್ಲಿರುವ ಗಿರಿಜನ ಆಶ್ರಮ ಶಾಲೆ
ಹುಣಸೂರು: ಮೂಲ ಆದಿವಾಸಿ ಸಮುದಾಯದ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಆಯ್ದ ಆಶ್ರಮ ಶಾಲೆಗಳನ್ನು ಮೇಲ್ದರ್ಜೇಗೇರಿಸಿ 12ನೇ ತರಗತಿವರಗೆ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ.
ಈ ಯೋಜನೆಯಡಿ ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕಿನ ತಲಾ ಒಂದೊಂದು ಆಶ್ರಮ ಶಾಲೆಗಳನ್ನು ಆಯ್ಕೆ ಮಾಡಿದ್ದು, ಹುಣಸೂರು ತಾಲ್ಲೂಕಿನ ನೆಲ್ಲೂರು ಪಾಲ ಆಶ್ರಮ ಶಾಲೆಯೂ ಒಂದು. ಈ ಶಾಲೆಗಳನ್ನು ₹ 25 ಕೋಟಿ ಅನುದಾನದಲ್ಲಿ ಶಾಲೆಗಳನ್ನು ಉನ್ನತೀಕರಿಸಿ 1ರಿಂದ 12ನೇ ತರಗತಿವರೆಗೆ ಗಿರಿಜನರ ಮಕ್ಕಳಿಗೆ ಶಿಕ್ಷಣ ದೊರಕಿಸಲು ಯೋಜಿಸಲಾಗಿದೆ.
ನೆಲ್ಲೂರುಪಾಲ ಆಶ್ರಮ ಶಾಲೆಯನ್ನು ಮೇಲ್ದರ್ಜೆಗೇರಿಸಿ ತಾಲ್ಲೂಕಿನ 31 ಹಾಡಿಗಳ ಮಕ್ಕಳಿಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು ಆಯ್ಕೆ ಮಾಡಲಾಗಿದೆ. ಈ ಶಾಲೆಯಲ್ಲಿ 8ನೇ ತರಗತಿವರಗೆ 320 ವಿದ್ಯಾರ್ಥಿಗಳು ಕಲಿಯುತ್ತಿದ್ದು, 2025–26 ಸಾಲಿನಲ್ಲಿ 9ನೇ ತರಗತಿಯಲ್ಲಿ 19, 2026-27ನೇ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ನಂತರದಲ್ಲಿ ಪಿಯುಸಿ ವಿಭಾಗ ಆರಂಭವಾಗಲಿದೆ’ ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿ ಗಂಗಾಧರ್ ಎಲ್. ತಿಳಿಸಿದರು.
ದಿ.ನಿಜಲಿಂಗಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತಾಲ್ಲೂಕಿನ ಯಶೋಧಪುರ ಗ್ರಾಮದ ಯಶೋಧ ದಾಸಪ್ಪ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದರು. ಆಗ ಗಿರಿಜನರ ಶೈಕ್ಷಣಿಕ ವ್ಯವಸ್ಥೆಗೆ ಆಶ್ರಮ ಶಾಲೆ ತೆರೆದಿದ್ದು ಅದರಲ್ಲಿ ನೆಲ್ಲೂರುಪಾಲ ಆಶ್ರಯ ಶಾಲೆಯೂ ಒಂದಾಗಿದೆ.
‘ದುರ್ಬಲ ಬುಡಕಟ್ಟು ಸಮುದಾಯದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಸರ್ಕಾರ ಆರಂಭಿಸಿರುವ ಪಿಯು ಶಿಕ್ಷಣ ಗಿರಿಜನ ಮಕ್ಕಳಿಗೆ ಸಕರಾತ್ಮಕವಾಗಿದೆ. ಈ ಯೋಜನೆ ಕಟ್ಟಡ ನಿರ್ಮಾಣಕ್ಕೆ ಸೀಮಿತಗೊಳ್ಳದೆ ಗುಣಮಟ್ಟದ ಉಪನ್ಯಾಸಕರನ್ನು ನಿಯೋಜಿಸಿ ಮಕ್ಕಳಲ್ಲಿ ಓದಿನ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವಂತಾಗಬೇಕು. 8ನೇ ತರಗತಿ ನಂತರದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ತಗ್ಗಿಸಲು ಸಹಕಾರಿಯಾಗುವ ನಿರೀಕ್ಷೆ ಇದೆ’ ಎಂದು ‘ಡೀಡ್’ ಸಂಸ್ಥೆ ನಿರ್ದೇಶಕ ಶ್ರೀಕಾಂತ್ ಮಾಹಿತಿ ನೀಡಿದರು.
ಸರ್ಕಾರ ಆಶ್ರಮ ಶಾಲೆ ಉನ್ನತೀಕರಿಸಿ ಗಿರಿಜನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸ್ಪಂದಿಸಿರುವುದು ನಮಗೆ ಸಹಕಾರಿ ಆಗಲಿದೆನಿಕಿತಾ 8ನೇ ತರಗತಿ ವಿದ್ಯಾರ್ಥಿನಿ ನಾಗಾಪುರ ಆಶ್ರಮ ಶಾಲೆ
ಏನೇನು ಇರಲಿವೆ ?
ಈ ಶಾಲೆ ಮೇಲ್ದರ್ಜೆಗೇರಿದ ಬಳಿಕ 12 ಸಿಬ್ಬಂದಿ ವಸತಿಗೃಹ ಕೌಂಪೌಂಡ್ ಒಳ ಮತ್ತು ಹೊರಾಂಗಣ ಕ್ರೀಡಾಂಗಣ ಹೆಚ್ಚುವರಿ 5 ಕೊಠಡಿಗಳು ಕುಡಿಯುವ ನೀರಿನ ವ್ಯವಸ್ಥೆ 200 ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿನಿಲಯ ಸೋಪಾನಕಟ್ಟೆ ಹೈಟೆಕ್ ಶೌಚಾಲಯ ಇ-ಶಿಕ್ಷಣ ಉದ್ಯಾನ ಇರಲಿವೆ.
‘ನಾಯಕ ಸಮುದಾಯಕ್ಕೆ ಅನುಕೂಲ’
‘ಗಿರಿಜನ ಮಕ್ಕಳನ್ನೇ ಕೇಂದ್ರೀಕೃತವಾಗಿ ಇಟ್ಟುಕೊಂಡು ಸರ್ಕಾರ 12ನೇ ತರಗತಿವರಗಿನ ಆಶ್ರಮ ಶಾಲೆಯನ್ನು ಹಾಡಿಗಳ ವ್ಯಾಪ್ತಿಯಲ್ಲಿ ತೆರೆದಿದ್ದರೆ ಸೋಲಿಗ ಎರವ ಬೆಟ್ಟಕುರುಬ ಜೇನುಕುರುಬ ಸಮುದಾಯದ ಮಕ್ಕಳಿಗೆ ಹೆಚ್ಚಿನ ಲಾಭವಾಗುತ್ತಿತ್ತು. ಈಗ ನಾಯಕ ಸಮುದಾಯಕ್ಕೆ ಹೆಚ್ಚಿನ ಲಾಭ ಸಿಗಲಿದೆ’ ಎಂದು ಡೀಡ್ ಸಂಸ್ಥೆ ನಿರ್ದೇಶಕ ಎಸ್.ಶ್ರೀಕಾಂತ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.