ADVERTISEMENT

ಮೈಸೂರು: ನೆಫ್ರೋ ಯುರಾಲಜಿ ಆಸ್ಪತ್ರೆ; ನಾಳೆ ಶಿಲಾನ್ಯಾಸ

100 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣ: ವಿವಿಧ ಜಿಲ್ಲೆಗಳ ಜನರಿಗೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 4:08 IST
Last Updated 18 ಜುಲೈ 2025, 4:08 IST
ನೆಫ್ರೋ ಯುರಾಲಜಿ ಆಸ್ಪತ್ರೆಯ ನೂತನ ಕಟ್ಟಡದ ಮಾದರಿ
ನೆಫ್ರೋ ಯುರಾಲಜಿ ಆಸ್ಪತ್ರೆಯ ನೂತನ ಕಟ್ಟಡದ ಮಾದರಿ   

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಯ ಪಿಕೆಟಿಬಿ ಆವರಣದಲ್ಲಿ ನೆಫ್ರೋ ಯುರಾಲಜಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 19ರಂದು ಶಂಕುಸ್ಥಾಪನೆ ನೆರವೇರಿಸಲಿದ್ದು, ನಗರದ ಆರೋಗ್ಯ ಕ್ಷೇತ್ರದಲ್ಲಿ ಈ ಘಟಕವು ಮೈಲಿಗಲ್ಲಾಗಲಿದೆ.

ಮೈಸೂರಿನ ನೆಫ್ರೋ ಯುರಾಲಜಿ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯಕ್ಕೆ ಉನ್ನತೀಕರಿಸಿ 2024–25ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅದರಂತೆ ₹117.71 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ತಲೆ ಎತ್ತುತ್ತಿದೆ. ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಹಿಂಭಾಗ ಇದಕ್ಕಾಗಿ 1 ಎಕರೆಯಷ್ಟು ಜಾಗ ನೀಡಲಾಗಿದೆ.

ಬಹುದಿನಗಳ ಕನಸು: ನೆಫ್ರೋ ಯುರಾಲಜಿ ಸಂಸ್ಥೆಯು ಸರ್ಕಾರದ ನೆರವಿನೊಂದಿಗೆ ನಡೆಯುತ್ತಿರುವ ಸ್ವಾಯತ್ತ ಸಂಸ್ಥೆ. ಮೂತ್ರಪಿಂಡ ಹಾಗೂ ಮೂತ್ರಕೋಶ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಈ ಸಂಸ್ಥೆಯು ಮುಂಚೂಣಿಯಲ್ಲಿದೆ. 2007ರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದರ ಮೊದಲ ಘಟಕ ಆರಂಭವಾಯಿತು.

ADVERTISEMENT

2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಮೈಸೂರಿನಲ್ಲಿ ನೆಫ್ರೋ ಯುರಾಲಜಿ ಆಸ್ಪತ್ರೆ ಸ್ಥಾಪನೆಗೆ ಸೂಚಿಸಿದ್ದರು. 2018ರಲ್ಲಿ ಕೆ.ಆರ್.ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ 60 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಾರ್ಯಾರಂಭ ಮಾಡಿದ್ದು, ಈವರೆಗೆ ಮೈಸೂರು ಹಾಗೂ ಸುತ್ತಲಿನ ಜಿಲ್ಲೆಗಳ ಲಕ್ಷಾಂತರ ರೋಗಿಗಳಿಗೆ ಸೇವೆ ನೀಡಿದೆ.

‘ಮೈಸೂರು ಘಟಕದಲ್ಲಿ ಈವರೆಗೆ 94 ಸಾವಿರ ಮಂದಿ ಡಯಾಲಿಸಿಸ್‌ ಚಿಕಿತ್ಸೆ ಪಡೆದಿದ್ದು, 69 ಸಾವಿರ ಮಂದಿ ಹೊರರೋಗಿಗಳಾಗಿ ಹಾಗೂ 7336 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 6431 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ’ ಎನ್ನುತ್ತಾರೆ ಆಸ್ಪತ್ರೆಯ ಮೈಸೂರು ಶಾಖೆ ಮುಖ್ಯಸ್ಥ ಡಾ.ಜೆ.ಬಿ.ನರೇಂದ್ರ.

100 ಹಾಸಿಗೆ ಸಾಮರ್ಥ್ಯದ ಆರು ಅಂತಸ್ತಿನ ಹೊಸ ಕಟ್ಟಡದಲ್ಲಿ ರೋಗಿಗಳ ಆರೈಕೆಗೆ ಬೇಕಾದ ಸಕಲ ಸೌಲಭ್ಯಗಳು ಇರಲಿವೆ. ಇದರಿಂದ ಸುತ್ತಲಿನ 5–6 ಜಿಲ್ಲೆಗಳ ಜನರಿಗೆ ಅನುಕೂಲ ಆಗಲಿದೆ.
– ಡಾ.ಜೆ.ಬಿ.ನರೇಂದ್ರ, ಮುಖ್ಯಸ್ಥ ನೆಫ್ರೋ ಯುರಾಜಲಿ ಆಸ್ಪತ್ರೆ ಮೈಸೂರು

ಏನೇನಿದೆ ಹೊಸ ಕಟ್ಟಡದಲ್ಲಿ?

ನೆಲಮಹಡಿ ಹಾಗೂ ಆರು ಅಂತಸ್ತುಗಳನ್ನು ಒಳಗೊಂಡ ಹೊಸ ಕಟ್ಟಡವು ಹೈಟೆಕ್‌ ಮಾದರಿ ಚಿಕಿತ್ಸಾ ಸೌಲಭ್ಯಗಳನ್ನು ಒಳಗೊಳ್ಳಲಿದೆ. 50 ಹಾಸಿಗೆ ಸಾಮರ್ಥ್ಯದ ಡಯಾಲಿಸಿಸ್‌ ಘಟಕ 20 ಹಾಸಿಗೆಯ ತೀವ್ರ ನಿಗಾ ಘಟಕ 4 ಕೊಠಡಿಗಳ ಮಾಡ್ಯುಲರ್ ಶಸ್ತ್ರಚಿಕಿತ್ಸಾ ವಿಭಾಗ ದೊಡ್ಡ ಸಭಾಂಗಣ ಡಿಜಿಟಲ್ ಗ್ರಂಥಾಲಯ ಮೊದಲಾದ ಸೌಲಭ್ಯಗಳು ಇಲ್ಲಿರಲಿವೆ. ಜೊತೆಗೆ ವಾಹನ ನಿಲ್ದಾಣ ವಿಶಾಲವಾದ ವಿಶ್ರಾಂತಿ ಧಾಮವೂ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.