ADVERTISEMENT

ಕನಿಷ್ಠ ಬೆಂಬಲ ಬೆಲೆ ಹಿಂಪಡೆಯುವುದಿಲ್ಲ: ಸಚಿವ ಡಿ.ವಿ.ಸದಾನಂದಗೌಡ

ಬೀದಿ ನಾಟಕಕ್ಕೆ ಕಾಂಗ್ರೆಸ್‌ನವರು ಪ್ರಸಿದ್ಧಿ: ಕೇಂದ್ರ ಸಚಿವ ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 3:53 IST
Last Updated 9 ಅಕ್ಟೋಬರ್ 2020, 3:53 IST
ಡಿ.ವಿ. ಸದಾನಂದಗೌಡ
ಡಿ.ವಿ. ಸದಾನಂದಗೌಡ   

ಮೈಸೂರು: ‘ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹಿಂಪಡೆಯುವುದಿಲ್ಲ. ಅಂಥ ಯಾವುದೇ ಅಂಶ ಮಸೂದೆಯಲ್ಲಿ ಇಲ್ಲ. ಭವಿಷ್ಯದಲ್ಲೂ ಆ ರೀತಿ ಮಾಡುವುದಿಲ್ಲ. ಇನ್ನುಮುಂದೆ ಹಂಗಾಮಿಗೆ ಮುಂಚೆಯೇ ಕನಿಷ್ಠ ಬೆಂಬಲ ಬೆಲೆ ಘೋಷಣೆ ಆಗಲಿದೆ’ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

‘ಈ ವಿಚಾರದಲ್ಲಿ ಕಾಂಗ್ರೆಸ್‌ನವರು ಹಸಿ ಸುಳ್ಳನ್ನು ರೈತ ಸಮುದಾಯದಲ್ಲಿ ಹರಡುತ್ತಿದ್ದಾರೆ. ಕನಿಷ್ಠ ಬೆಂಬಲ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಒಂದು ಲೋಪ ತೋರಿಸಲಿ. ಅವರು ಹೇಳಿದ ಹಾಗೆ ಕೇಳುತ್ತೇನೆ. ಈ ಪಕ್ಷದವರುಬೀದಿ ನಾಟಕಕ್ಕೆ ಬಹಳ ಪ್ರಸಿದ್ಧಿ ಹೊಂದಿದ್ದಾರೆ. ‌ಮೊಸರಿನಲ್ಲಿ ಕಲ್ಲು ಹುಡುಕುತ್ತಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ಕಾಂಗ್ರೆಸ್‌ನವರಿಗೆ ಮರೆವಿನ ಸಮಸ್ಯೆ ಕಾಡುತ್ತಿದ್ದು, ನಿನ್ನೆ ಹೇಳಿದ್ದು ಇಂದು ನೆನಪಿರುವುದಿಲ್ಲ. 2012ರಲ್ಲಿ ಕಪಿಲ್‌ ಸಿಬಲ್‌ ಇದೇ ವಿಚಾರದ ಪರವಾಗಿ ಸಂಸತ್‌ನಲ್ಲಿ ಮಾತನಾಡಿದ್ದರು. ಈಗ ಏಕೆ ವಿರೋಧಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

ರೈತರು ತಾವು ಬೆಳೆದ ಬೆಳೆಯನ್ನುಎಪಿಎಂಸಿಯಲ್ಲೂ ಮಾರಾಟ ಮಾಡಬಹುದು, ದೇಶದ ಯಾವುದೇ ಭಾಗದಲ್ಲಿ ಮಾರಬಹುದು. ರೈತರ ಮನೆ ಬಾಗಿಲಿನಿಂದ ಅತ್ಯಂತ ಹೆಚ್ಚು ಧಾರಣೆಗೆ ಖರೀದಿ ಮಾಡುವ ವಾತಾವರಣವನ್ನೂ ಸೃಷ್ಟಿಸಲಿದ್ದೇವೆ. ಎಪಿಎಂಸಿ ಮಂಡಿಗಳೂ ಮುಂದುವರಿಯಲಿವೆ.ರೈತರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದಲೇ ಬೆಂಬಲ ಬೆಲೆ ಪ್ರಕಟಿಸಲಾಗುತ್ತಿದೆ. ಭತ್ತ ಹಾಗೂ ಗೋಧಿಗೆ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ ಎಂದರು.

ದುರದೃಷ್ಟವಶಾತ್‌ ರೈತರು ಇಷ್ಟು ದಿನ ಕಾನೂನಿನ ಕದಂಬ ಭಾವುಗಳಲ್ಲಿ ಸಿಲುಕಿಕೊಂಡಿದ್ದರು. ಹಿಂದೆ ನಮಗೆ ಬೇಕಾದ ಆಹಾರ ದೇಶದಲ್ಲಿ ಸಿಗುತ್ತಿರಲಿಲ್ಲ. ಇಷ್ಟಾದರೂ ಕಾಂಗ್ರೆಸ್‌ನವರು ಕಾನೂನು ತಿದ್ದುಪಡಿ ಮಾಡಿರಲಿಲ್ಲ. ಕಾನೂನನ್ನು ಪರಿವರ್ತನೆ ಮಾಡದಿದ್ದರೆ ರೈತರನ್ನು ರಕ್ಷಿಸಲು ಆಗುವುದಿಲ್ಲ ಎಂದು ತಿಳಿಸಿದರು.

‘ಕಳೆದ ಆರು ವರ್ಷಗಳಲ್ಲಿ ರಸಗೊಬ್ಬರಕ್ಕೆ ಎಲ್ಲೂ ತೊಂದರೆ ಆಗಿಲ್ಲ. ಕೋವಿಡ್‌ ನಡುವೆಯೂ ಕಳೆದ ಬಾರಿಗಿಂತ ಶೇ 35ರಷ್ಟು ಹೆಚ್ಚು ರಸಗೊಬ್ಬರ ಪೂರೈಸಲಾಗಿದೆ. ಕೃತಕ ಅಭಾವ ಸೃಷ್ಟಿಯನ್ನು ನಿಲ್ಲಿಸಲಾಗಿದೆ. 148 ವ್ಯಾಪಾರಿಗಳ ಪರವಾನಗಿ ರದ್ದುಪಡಿಸಿ ಇಡೀ ದೇಶಕ್ಕೆ ಸಂದೇಶ ರವಾನಿಸಲಾಗಿದೆ’ ಎಂದು ನುಡಿದರು.

ರಾಜಕೀಯ ಉದ್ದೇಶ ಹಾಗೂ ಪ್ರಚೋದನೆಯಿಂದ ಕೆಲ ರೈತರ ಮುಖಂಡರು ಬೀದಿಗಿಳಿದಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಪ್ರತಾಪಸಿಂಹ, ಶಾಸಕ ಎಲ್‌.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಬಿಜೆಪಿ ನಗರ ಅಧ್ಯಕ್ಷ ಶ್ರೀವತ್ಸ ಇದ್ದರು.

ನಮಗೂ ಶಕ್ತಿ ಇದೆ

ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ಬಳಿಕ ಒಕ್ಕಲಿಗ ಸಮುದಾಯದವರು ಒಂದುಗೂಡುತ್ತಿದ್ದಾರೆ ಎಂಬ ವಿಚಾರಕ್ಕೆ ಸದಾನಂದಗೌಡ ಪ್ರತಿಕ್ರಿಯಿಸಿ, ‘ನಮ್ಮಲ್ಲೂ ವಿಧಾನಸಭೆಯಿಂದ ಲೋಕಸಭೆವರೆಗೆ ಒಕ್ಕಲಿಗರ ಪ್ರಾಬ್ಯಲ್ಯವಿದೆ. ಹೀಗಾಗಿ, ನಮಗೂ ಶಕ್ತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.