ADVERTISEMENT

News Paper Distributers Day | ಪತ್ರಿಕಾ ವಿತರಕರ ದಿನಾಚರಣೆ: ಸಮಯಪಾಲನೆಯೇ ಕಾಯಕ

ಎಚ್‌.ಕೆ. ಸುಧೀರ್‌ಕುಮಾರ್
Published 4 ಸೆಪ್ಟೆಂಬರ್ 2025, 2:47 IST
Last Updated 4 ಸೆಪ್ಟೆಂಬರ್ 2025, 2:47 IST
   

ಮೈಸೂರು: ಬೆಳಿಗ್ಗೆ ಎದ್ದೊಡನೆ ಮನೆ ಎದುರಿನ ಜಗಲಿಯಲ್ಲಿ ದಿನಪತ್ರಿಕೆ ಬಂದಿದೆಯೇ ಎಂದು ಗಮನಿಸುವುದು ಹಲವರ ದಿನಚರಿ. 10 ನಿಮಿಷ ತಡವಾದರಂತೂ ಮನೆ ಹಿರಿಯರ ಚಡಪಡಿಕೆ ಹೇಳತೀರದು.

ಅವರ ಈ ದಿನಚರಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ದಿನಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರು ಜನರ ಜೀವನದಲ್ಲಿ ಬೆರೆತುಹೋಗಿದ್ದಾರೆ. ಚಳಿ, ಮಳೆಯನ್ನೂ ಲೆಕ್ಕಿಸದೇ ಕಾಯಕ ನಿರ್ವಹಿಸುತ್ತಾ ಹಲವರ ಸ್ನೇಹಕ್ಕೂ ಪಾತ್ರರಾಗಿದ್ದಾರೆ.

ಇಂದಿಗೂ ಸೈಕಲ್‌ ಸವಾರಿ:

ನಗರದ ಅಶೋಕಪುರಂ ನಿವಾಸಿ, 66 ವರ್ಷದ ಜಯರಾಮ ಅವರು ಇಂದಿಗೂ ಸೈಕಲ್‌ ಸವಾರಿ ಮಾಡುತ್ತಲೇ ಪತ್ರಿಕೆಗಳನ್ನು ಹಂಚುತ್ತಾರೆ. ಸರಸ್ವತಿಪುರಂ, ಕುವೆಂಪುನಗರ, ಟಿ.ಕೆ.ಲೇಔಟ್‌, ರಾಮಕೃಷ್ಣನಗರ ಬಡವಾಣೆಗಳಲ್ಲಿ ಸಂಚರಿಸುವ ಅವರು, ಹಲವು ಸುಂದರ ನೆನಪುಗಳನ್ನು ಕಾಪಿಟ್ಟುಕೊಂಡಿದ್ದಾರೆ.

ADVERTISEMENT

‘25 ವರ್ಷಗಳ ಹಿಂದೆ ಇಲ್ಲಿನ ಕೆ.ಆರ್‌.ವೃತ್ತಲ್ಲಿ ಬೆಳಿಗ್ಗೆ 4ರ ಹೊತ್ತಿಗೆ ವಿತರಕರ ಸೈಕಲ್‌ಗಳ ಜಾತ್ರೆಯೇ ನಡೆಯುತ್ತಿತ್ತು. ಆಗ ಎಲ್ಲರೂ ಅಲ್ಲಿಂದಲೇ ಪತ್ರಿಕೆಗಳನ್ನು ಕೊಂಡೊಯ್ಯುತ್ತಿದ್ದರು. ಬೆಳಿಗ್ಗೆಯೇ ವಿಪರೀತ ಹುಮ್ಮಸ್ಸಿನೊಂದಿಗೆ ಕೆಲಸಕ್ಕೆ ತೆರಳುತ್ತಿದ್ದೆವು. ಅಲ್ಲಿ ಹೋಗಿ ಸೇರಿದರೆ ಏನೋ ಸಂಭ್ರಮ ಆವರಿಸುತ್ತಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ.

‘ಆಗ ಕಂಡಷ್ಟು ಆದಾಯ ಈಗ ಕಾಣಲು ಸಾಧ್ಯವಾಗುತ್ತಿಲ್ಲ. ಇದೇ ವೃತ್ತಿಯಲ್ಲಿನ ಪರಿಶ್ರಮದಿಂದ ಸ್ವಂತ ಮನೆಯನ್ನೂ ನಿರ್ಮಿಸಿಕೊಂಡಿದ್ದು ‘ಪತ್ರಿಕೆ ಕೃಪೆ’ ಎಂದು ಹೆಸರಿಟ್ಟಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು.

ಪಿಯು ಓದುತ್ತಿದ್ದಾಗಲೇ ವಿತರಕ: 

ತಿ.ನರಸೀಪುರದ ಎಸ್‌.ಬಿ.ಪ್ರಕಾಶ್‌ ಪಿಯು ಓದುತ್ತಿದ್ದಾಗಲೇ ಪತ್ರಿಕೆ ವಿತರಣೆ ಇಳಿದವರು. ಓದು ಮುಗಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಇದನ್ನೇ ವೃತ್ತಿ ಮಾಡಿಕೊಂಡು ವಿತರಣೆಯೊಂದಿಗೆ ಪತ್ರಿಕೆಗಳ ಎಜೆನ್ಸಿಯನ್ನೂ ಪಡೆದು ಜೀವನ ಕಟ್ಟಿಕೊಂಡವರು. 

‘ನನ್ನದು 30 ವರ್ಷದ ಸಾರ್ಥಕ ವೃತ್ತಿ ಬದುಕು ಎಂದು ಹೆಮ್ಮೆಯಿಂದ ಹೇಳುವ ಅವರು ಸಹಾಯಕರೂ ಬಾರದಿದ್ದಾಗ ದಿನಪತ್ರಿಕೆ ಹಂಚಲು ತೆರಳುತ್ತಾರೆ. ‘ಪ್ರಜಾವಾಣಿ’ ಪತ್ರಿಕೆ ಬದಲು ಬೇರೆ ಪತ್ರಿಕೆಗಳು ತಲುಪಿದರೇ ಓದುಗರು ನಿರಂತರವಾಗಿ ಫೋನ್‌ ಮಾಡಿ ಎಚ್ಚರಿಸುತ್ತಾರೆ. ಗುಣಮಟ್ಟದ ಪತ್ರಿಕೆಗಳ ಓದುಗರೇ ನಮ್ಮ ಆಧಾರ. ಇಂದು ಅಂಥ ಓದುಗರೇ ಕಡಿಮೆಯಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.