
ಪಾಂಡವಪುರ: ತಾಲ್ಲೂಕಿನ ಬನಘಟ್ಟ ಬಳಿ ಇರುವ ವಿಶ್ವೇಶ್ವರಯ್ಯ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಹೊಸ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ಸಂಜೆ ವೀಕ್ಷಿಸಿದರು.
ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ತುಮಕೂರು ವಿಭಾಗದ ಇಇ ನರೇಂದ್ರ ಮಾತನಾಡಿ, ಹೊಸ ಸೇತುವೆಯನ್ನು ರಸ್ತೆ ಸಚಿವಾಲಯದ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿದಾಗ, ಸೇತುವೆ ನಿರ್ಮಾಣದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ಪ್ರಾಧಿಕಾರಕ್ಕೆ ನೋಟಿಸ್ ನೀಡಿತು. ಬಳಿಕ ಸೇತುವೆ ನಿರ್ಮಿಸಲು ಗುತ್ತಿಗೆ ಪಡೆದಿದ್ದ ಬಾಲಾಜಿ ಕನ್ಸ್‌ಟ್ರಕ್ಷನ್ ಅವರಿಗೆ ಪ್ರಾಧಿಕಾರವು ನೋಟಿಸ್ ನೀಡಿತು. ಇದನ್ನು ಪ್ರಶ್ನಿಸಿ ಗುತ್ತಿಗೆದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತೆರವುಗೊಳಿಸಲು ಪ್ರಾಧಿಕಾರವು ಕ್ರಮವಹಿಸಿದೆ ಎಂದರು.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಹಳೆಯ ಸೇತುವೆಯು ತುಂಬ ಕಿರಿದಾಗಿರುವುದರಿಂದ ಆಗಾಗ್ಗೆ ಅಪಘಾತಗಳು ನಡೆಯುತ್ತಲೇ ಇವೆ. ಇದನ್ನು ತಪ್ಪಿಸಲು ಕ್ರಮವಹಿಸಿ ಎಂದು ಒತ್ತಾಯಿಸಿದರು.
ಪೊಲೀಸ್ ಇನ್‌ಸ್ಪೆಪೆಕ್ಟರ್ ಶರತ್ ಕುಮಾರ್ ಮಾತನಾಡಿ, ಬನಘಟ್ಟ ಬಳಿಯ ರಸ್ತೆಯಲ್ಲಿ ಅಫಘಾತಗಳು ಹೆಚ್ಚುತ್ತಿವೆ. ಹೊಸ ಸೇತುವೆ ಸಂಚಾರಕ್ಕೆ ಅನುವು ಮಾಡಿಕೊಡುವ ತನಕ ಸೇತುವೆಯ ಪಕ್ಕದಲ್ಲಿರುವ ರಸ್ತೆಯನ್ನಾದರೂ ಸರಿಪಡಿಸಿ, ಅನಾಹುತ ತಪ್ಪಿಸಿ ಎಂದು ಸಲಹೆ ನೀಡಿದರು.
ಅಪಘಾತ ತಡೆಯಲು ಕ್ರಮ: ಹೊಸ ಸೇತುವೆಯ ಸಮಸ್ಯೆ ಇತ್ಯರ್ಥವಾಗುವ ತನಕ ಹಳೆಯ ಸೇತುವೆ ಮೂಲಕ ಹಾದು ಹೋಗುವ ರಸ್ತೆಯ ವಿಸ್ತರಣೆ ಮಾಡಿ, ಅಗತ್ಯವಾಗುವ ಕಡೆ ಉಬ್ಬುಗಳನ್ನು ನಿರ್ಮಿಸಿ, ಮತ್ತಷ್ಟು ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಈಗಾಗಲೇ ಹಳೆ ಸೇತುವೆಗೆ ತಡೆಗೋಡೆ ನಿರ್ಮಿಸಿ, ಉಬ್ಬುಗಳನ್ನು ಹಾಗೂ ಸೂಚನಾ ಫಲಕಗಳನ್ನು ಹಾಕಿ ಕ್ರಮವಹಿಸಲಾಗಿದೆ. ಅಪಘಾತಗಳು ಸಂಭವಿಸದಂತೆ ಎಲ್ಲ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ಇಇ ನರೇಂದ್ರ ಭರವಸೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬೆಳ್ಳೂರು ವ್ಯಾಪ್ತಿಯ ಎಇಇ ಉಜ್ಜೈನ್ ಕೊಪ್ಪ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಉಮೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.