
ಪಿರಿಯಾಪಟ್ಟಣ: ‘ಮೂರು ವರ್ಷಗಳಲ್ಲಿ ಏನನ್ನೂ ಸಾಧಿಸದ ಕಾಂಗ್ರೆಸ್ ಸರ್ಕಾರ ಯಾವ ಪುರುಷಾರ್ಥಕ್ಕೆ ಹಾವೇರಿಯಲ್ಲಿ ಸಾಧನೆಯ ಸಮಾವೇಶ ಮಾಡಿದೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ಪಟ್ಟಣದಲ್ಲಿ ಬುಧವಾರ ನಡೆದ ‘ಜನರೊಂದಿಗೆ ಜನತಾದಳ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ‘ರಾಜ್ಯ ಸರ್ಕಾರ ₹5 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡುವ ಮೂಲಕ ಹಿಂದಿನ ಎಲ್ಲಾ ಸರ್ಕಾರಗಳ ದಾಖಲೆಗಳನ್ನು ಮುಗಿದಿರುವುದೇ ದೊಡ್ಡ ಸಾಧನೆ’ ಎಂದು ಲೇವಡಿ ಮಾಡಿದರು.
‘ಉಪಚುನಾವಣೆಯಲ್ಲಿ ನಾನು ಕಾರ್ಯಕರ್ತರ ಒತ್ತಾಯಕ್ಕೆ ಕಟ್ಟುಬಿದ್ದು ಸ್ಪರ್ಧಿಸಿದ್ದೆ, ಆದರೆ ಡಿ.ಕೆ. ಶಿವಕುಮಾರ್ ನಾನೇ ಸೋಲಿಸಿದೆ ಎಂದು ಎಲ್ಲೆಡೆ ಹೇಳಿಕೊಂಡು ತಿರುಗುತ್ತಿದ್ದಾರೆ. ರಾಜಕೀಯದಲ್ಲಿ ನಾನು ಮಗೂ ಅಲ್ಲ ಎಲ್ಲಾ ಪಟ್ಟುಗಳನ್ನು ಕಲಿತಿದ್ದೇನೆ. ಮುಂದಿನ ಚುನಾವಣೆಗಳಲ್ಲಿ ನಾನು ಸಹ ನನ್ನ ಶಕ್ತಿಯನ್ನು ತೋರಿಸಲಿದ್ದೇನೆ’ ಎಂದು ತಿಳಿಸಿದರು.
‘ಪ್ರಾದೇಶಿಕ ಪಕ್ಷವೊಂದು ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವುದು ಸಣ್ಣ ಸಾಧನೆ ಅಲ್ಲ. ಇದಕ್ಕೆ ಕಾರ್ಯಕರ್ತರ ದೊಡ್ಡಪಡೆಯೇ ಕಾರಣವಾಗಿದೆ. 2028ರ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು ಆಗ ಮಾತ್ರ ರೈತರಿಗೆ ಒಳಿತಾಗಲು ಸಾಧ್ಯ’ ಎಂದರು.
‘ಮುಂದಿನ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದ್ದು, ಇದನ್ನು ಪಕ್ಷ ಹಾಗೂ ನಾನು ಗಂಭೀರವಾಗಿ ಪರಿಗಣಿಸಿ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ಕೊಡಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.
‘ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿರುವ ಮಾಜಿ ಶಾಸಕ ಕೆ. ಮಹದೇವ್ ಹಾಗೂ ಯುವಕರನ್ನು ಸಂಘಟಿಸುತ್ತಿರುವ ಅವರ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಅವರ ನಡುವೆ ಇರುವ ವೈಮನಸನ್ನು 15 ದಿನಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬಗೆಹರಿಸಿ ಮುಂದಿನ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸಲಾಗುವುದು’ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಮಾತನಾಡಿ, ‘ಮುಂದಿನ ಚುನಾವಣೆಯನ್ನು ಕೆ.ಮಹದೇವ್ ಅವರ ನಾಯಕತ್ವದಲ್ಲಿ ಎದುರಿಸಲಾಗುತ್ತದೆ. ಕುಮಾರಣ್ಣ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ತಾತ್ಕಾಲಿಕ ಲಾಭವಿದ್ದರೂ, ಹಾಲಿನಿಂದ ಆಲ್ಕೋಹಾಲ್‌ವರೆಗೂ ಬೆಲೆ ಏರಿಕೆಯಿಂದ ಜನ ಸಂಕಷ್ಟದಲ್ಲಿದ್ದಾರೆ’ ಎಂದರು.
ಮಾಜಿ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ‘ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ವಿಪರೀತ ಕಿರುಕುಳ ನೀಡಲಾಗುತ್ತಿದೆ, ನನ್ನ ಜೊತೆ ಫೋಟೋ ತೆಗೆಸಿಕೊಂಡಿರುವ ಸರ್ಕಾರಿ ಶಿಕ್ಷಕರಿಗೆ ಮೂರು ಬಾರಿ ಅಮಾನತು ಮಾಡಲಾಗಿದೆ’ ಎಂದು ಆರೋಪಿಸಿದರು.
ಮೈಸೂರು ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಅಶ್ವಿನ್ ಕುಮಾರ್, ನಗರ ಘಟಕದ ಅಧ್ಯಕ್ಷ ಎಸ್‌ಬಿಎಂ ಮಂಜು, ವಿಧಾನ ಪರಿಷತ್ ಸದಸ್ಯರಾದ ಮಂಜೇಗೌಡ, ವಿವೇಕಾನಂದ, ಮಾಜಿ ಮೇಯರ್ ರವಿಕುಮಾರ್, ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಗಗನ್, ಎಸ್.ರಾಮು, ರವಿ, ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಜೆ. ಎಸ್.ನಾಗರಾಜ್, ರಾಮಚಂದ್ರ ಹಾಜರಿದ್ದರು.
ಎಚ್.ಡಿ. ಕುಮಾರಸ್ವಾಮಿ ಅವರು ಜಾತಿ ಮತ ನೋಡದೆ 26 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ರೈತರ ಪರ ಕೆಲಸ ಮಾಡುವ ಮುಖ್ಯಮಂತ್ರಿಗಳ ಸಾಲಿನಲ್ಲಿ ಮೊದಲಿಗರು ಕುಮಾರಣ್ಣಜಿ.ಡಿ.ಹರೀಶ್ ಗೌಡ ಶಾಸಕ
ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ರೈತರ ಸಮಸ್ಯೆ ಬಗೆಹರಿಯುತ್ತದೆ. 2028ರಲ್ಲಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕುಕೆ.ಮಹದೇವ್ ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.