ADVERTISEMENT

ಬೀರಿಹುಂಡಿಯಲ್ಲಿ ಅನೈರ್ಮಲ್ಯ ತಾಂಡವ

ಕೋಳಿ ಅಂಗಡಿಗಳ ತ್ಯಾಜ್ಯದಿಂದ ಜನರು ಹೈರಾಣು, ಸ್ವಚ್ಛತೆಗೆ ಆಗ್ರಹಿಸಿದ ಜನರು, ಶೌಚಾಲಯ ಬಳಕೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 11:27 IST
Last Updated 17 ಮಾರ್ಚ್ 2020, 11:27 IST
ಬೀರಿಹುಂಡಿ ಸರ್ಕಾರಿ ಆಸ್ಪತ್ರೆಯ ಮುಂದೆ ಕೊಳೆತ ಚರಂಡಿಯ ನೀರು ಗುಂಡಿಯಲ್ಲಿ ಶೇಖರಣೆಯಾಗಿರುವುದು
ಬೀರಿಹುಂಡಿ ಸರ್ಕಾರಿ ಆಸ್ಪತ್ರೆಯ ಮುಂದೆ ಕೊಳೆತ ಚರಂಡಿಯ ನೀರು ಗುಂಡಿಯಲ್ಲಿ ಶೇಖರಣೆಯಾಗಿರುವುದು   

ಜಯಪುರ: ಹೋಬಳಿ ವ್ಯಾಪ್ತಿಯ ಬೀರಿಹುಂಡಿ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿಯೇ ಕೋಳಿ ಅಂಗಡಿಗಳವರು ತ್ಯಾಜ್ಯವನ್ನು ಸುರಿಯುತ್ತಿದ್ದು, ದುರ್ವಾಸನೆ ಹೊರ ಹೊಮ್ಮುತ್ತಿದೆ. ಚರಂಡಿ, ಮೋರಿಗಳು ಕೊಳೆತ ತ್ಯಾಜ್ಯಗಳಿಂದ ತುಂಬಿ ಹೋಗಿವೆ. ಸೊಳ್ಳೆ ಮತ್ತು ನೊಣಗಳ ಕಾಲ ವಿಪರೀತವಾಗಿ, ಜನರು ಹಲವು ಕಾಯಿಲೆಗಳಿಂದ ಬಳಲುವಂತಾಗಿದೆ.

ಪ್ರಾಥಮಿಕ ಶಾಲೆಯ ಮುಂದೆ ಚರಂಡಿಗಳು ಕಟ್ಟಿಕೊಂಡಿವೆ. ಶಾಲಾ ಕಾಂಪೌಂಡ್ ಕುಸಿದಿದ್ದು, ಕಿಡಿಗೇಡಿಗಳು ರಾತ್ರಿ ವೇಳೆ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಶಾಲೆಯ ಶಿಕ್ಷಕರು ಆರೋಪಿಸುತ್ತಾರೆ.

ADVERTISEMENT

ಬೀರಿಹುಂಡಿ ಗ್ರಾಮ ಪಂಚಾಯಿತಿಯ ಅವರಣದಲ್ಲಿಯೇ ರಾಶಿ ರಾಶಿ ಕಸ ಬಿದ್ದಿದ್ದು, ಅನೈರ್ಮಲ್ಯತೆಗೆ ಹಿಡಿದ ಕನ್ನಡಿಯಂತಿದೆ. ಗ್ರಾಮದಲ್ಲಿ ಶೌಚಾಲಯದ ಬಳಕೆ ತೀರಾ ಕಡಿಮೆಯಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಮಲ, ಮೂತ್ರಗಳ ಚಿತ್ರಣವನ್ನು ಕಾಣಬಹುದು.

ಗ್ರಾಮದಲ್ಲಿ ಸುಮಾರು ಎರಡುವರೆ ಸಾವಿರ ಜನರು ವಾಸಿಸುತ್ತಿದ್ದು, ಬಹುತೇಕ ರಸ್ತೆ, ಚರಂಡಿಗಳನ್ನು ದುರಸ್ತಿಯಾಗಿಲ್ಲ. ಚರಂಡಿಗಳ ನೀರೆಲ್ಲವೂ ರಸ್ತೆಯಲ್ಲಿಯೇ ಹರಿದು ಗ್ರಾಮದ ವಾತಾವರಣ ಹದಗೆಟ್ಟಿದೆ. ಬೇಸಿಗೆ ಕಾಲ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.

ಬೀರಿಹುಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಳ್ಳೇಗೌಡ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಸ್ಥಳೀಯವಾಗಿ ಯಾವುದೇ ಸಮಸ್ಯೆಗಳೂ ಗ್ರಾಮದಲ್ಲಿ ಇಲ್ಲ. ಎಲ್ಲವನ್ನು ಸ್ವಚ್ಛಗೊಳಿಸಿದ್ದೇವೆ. ಬೇಕಾದರೆ ನೀವೇ ಹೋಗಿ ನೋಡಿಕೊಳ್ಳಿ’ ಎಂದು ತಿಳಿಸಿದರು.

ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು ಪ್ರತಿ 3 ದಿನಗಳಿಗೊಮ್ಮೆ ನೀರನ್ನು ಬಿಡಲಾಗುತ್ತಿದೆ. ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿರುವಂತಹ ಸನ್ನಿವೇಶವನ್ನು ಗ್ರಾಮದವರಾದ ರವಿಗೌಡ, ಮಾದೇಗೌಡ, ಸೌಭಾಗ್ಯವತಿ ಮೊದಲಾದವರು ದೂರುತ್ತಾರೆ.

ಬೀರಿಹುಂಡಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋಳಿ ಫಾರಂಗಳಿದ್ದು ಅವುಗಳಿಂದ ಬೀದಿನಾಯಿಗಳ ಕಾಟ ಮತ್ತು ನೊಣಗಳ ಕಾಟ ಹೆಚ್ಚಾಗಿದೆ. ಅಸಮರ್ಪಕ ನಿರ್ವಹಣೆಯನ್ನು ಮಾಡುವ ಕೋಳಿ ಫಾರಂಗಳ ಪರವಾನಗಿಗಳನ್ನು ರದ್ದು ಮಾಡುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಮತಾ ಅವರು ಸಾಕಷ್ಟು ಬಾರಿ ಜಿಲ್ಲಾ ಆರೋಗ್ಯ ಇಲಾಖೆಗೆ, ಗ್ರಾಮ ಪಂಚಾಯಿತಿಗೆ, ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕೂಡಲೇ ಗ್ರಾಮದಲ್ಲಿ ನೈರ್ಮಲ್ಯಯುತ ವಾತಾವರಣ ಕಲ್ಪಿಸಬೇಕು. ತ್ಯಾಜ್ಯದ ರಾಶಿಯನ್ನು ವಿಲೇವಾರಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.