ADVERTISEMENT

ಹಿರಿಕ್ಯಾತನಹಳ್ಳಿ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 13:02 IST
Last Updated 10 ಏಪ್ರಿಲ್ 2025, 13:02 IST
ಹುಣಸೂರು ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾ.ಪಂ. ಸದಸ್ಯರು ಅಧ್ಯಕ್ಷೆ ರುಕ್ಮಿಣಿ ವಿರುದ್ಧ ಮಂಡಿಸಿದ್ದ ಅವಿಶ್ವಾಸದಲ್ಲಿ ಗೆಲುವು ಕಂಡ ಸದಸ್ಯರು ಸಂತೋಷ ಹಂಚಿ ಕೊಂಡರು
ಹುಣಸೂರು ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾ.ಪಂ. ಸದಸ್ಯರು ಅಧ್ಯಕ್ಷೆ ರುಕ್ಮಿಣಿ ವಿರುದ್ಧ ಮಂಡಿಸಿದ್ದ ಅವಿಶ್ವಾಸದಲ್ಲಿ ಗೆಲುವು ಕಂಡ ಸದಸ್ಯರು ಸಂತೋಷ ಹಂಚಿ ಕೊಂಡರು   

ಹುಣಸೂರು: ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ವಿರುದ್ಧ ಬುಧವಾರ ಮೂರನೇ ಬಾರಿಗೆ ಮಂಡಿಸಿದ ಅವಿಶ್ವಾಸಕ್ಕೆ ಗೆಲುವು ಸಿಕ್ಕಿತು.

ಗ್ರಾಮ ಪಂಚಾಯಿತಿಯ ಒಟ್ಟು 16 ಸದಸ್ಯರಲ್ಲಿ 12 ಸದಸ್ಯರು ಅಧ್ಯಕ್ಷೆ ರುಕ್ಮಿಣಿ ವಿರುದ್ಧ ಅವಿಶ್ವಾಸ ಮಂಡಿಸಿದ್ದರು. ಈ ಸಂಬಂಧ ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ಕರೆದಿದ್ದ ಸಭೆಯಲ್ಲಿ ಅಧ್ಯಕ್ಷೆ ರುಕ್ಮಿಣಿ ಸೇರಿದಂತೆ ಮೂವರು ಸಭೆಗೆ ಗೈರು ಹಾಜರಾಗಿದ್ದು, ಇವರ ವಿರುದ್ಧ ಧ್ವನಿ ಎತ್ತಿದ್ದ 12 ಸದಸ್ಯರು ಹಾಜರಿದ್ದು ತಮ್ಮ ಅವಿಶ್ವಾಸ ವ್ಯಕ್ತಪಡಿಸಿದರು.

ತಡೆ: ಈ ಹಿಂದೆ ಪಂಚಾಯಿತಿ ಸದಸ್ಯರು ಹಾಲಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ಮಂಡಿಸಲು ಕೋರಿ ಉಪವಿಭಾಗಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಅಧ್ಯಕ್ಷೆ ರುಕ್ಮಿಣಿ ಡಿ.16 ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಈ ಸಂಬಂಧ ಸದಸ್ಯರು ನ್ಯಾಯಾಲಯದಲ್ಲಿ ವಾದ ಮಂಡಿಸಿದ ಬಳಿಕ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿ ಅವಿಶ್ವಾಸ ಮಂಡನೆ ಸಭೆಗೆ ಅನುಮತಿ ನೀಡಿತ್ತು.

ADVERTISEMENT

ಈ ಆದೇಶದ ಮೇಲೆ ಚುನಾವಣಾಧಿಕಾರಿ ಫೆ.25ಕ್ಕೆ ಚುನಾವಣೆ ನಡೆಸಲು ಕ್ರಮವಹಿಸಿದ್ದರು. ಈ ಕ್ರಮದ ಮೇಲೂ ಅಧ್ಯಕ್ಷೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ನ್ಯಾಯಾಲಯ ವಿಚಾರಣೆ ನಡೆಸಿದ ಬಳಿಕ 30 ದಿನದೊಳಗೆ ಅವಿಶ್ವಾಸ ಮಂಡನೆ ಸಭೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುವಂತೆ ಸೂಚಿಸಿತ್ತು. ನ್ಯಾಯಾಲಯದ ಆದೇಶದಂತೆ ಉಪವಿಭಾಗಾಧಿಕಾರಿ ವಿಜಯಕುಮಾರ್ ಏ.9ರಂದು ಅವಿಶ್ವಾಸ ಸಭೆ ನಡೆಸಿದರು. ಸಭೆಯಲ್ಲಿ 16 ಸದಸ್ಯರಲ್ಲಿ 12 ಮಂದಿ ಹಾಜರಿದ್ದು ಅಧ್ಯಕ್ಷೆ ರುಕ್ಮಿಣಿ ವಿರುದ್ಧ ಅವಿಶ್ವಾಸ ಮಂಡಿಸಿ ಮೇಲುಗೈ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.