ADVERTISEMENT

ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಅನಗತ್ಯ: ಪ್ರಮೋದಾದೇವಿ 

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 8:58 IST
Last Updated 6 ಏಪ್ರಿಲ್ 2022, 8:58 IST
   

ಮೈಸೂರು: ‘ಮೈಸೂರು ನಗರದಿಂದ ಚಾಮುಂಡಿಬೆಟ್ಟಕ್ಕೆ ವಾಹನದಲ್ಲಿ ತೆರಳಲು 25 ನಿಮಿಷ ಸಾಕು. ಹೀಗಾಗಿ, ರೋಪ್‌ ವೇ ನಿರ್ಮಿಸುವ ಅಗತ್ಯವಿಲ್ಲ’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಪ್ರತಿಪಾದಿಸಿದರು.

‘ಬೆಟ್ಟದ ಮೇಲೆ ಟೌನ್‌ಶಿಪ್‌ ನಿರ್ಮಾಣಕ್ಕೆ ಕೈಹಾಕಿದಂತಿದೆ. ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ತೊಂದರೆಯಾಗುತ್ತದೆ. ಈಗಾಗಲೇ ಬೆಟ್ಟಕ್ಕೆ ಬಹಳಷ್ಟು ಧಕ್ಕೆ ಉಂಟಾಗಿದೆ. ಈಗಿರುವುದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಬೆಟ್ಟವು ಧಾರ್ಮಿಕ ಕ್ಷೇತ್ರವಾಗಿಯೇ ಉಳಿಯಬೇಕು’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಕೆಲಸ ಮಾಡಬೇಕು. ಆದರೆ, ಆ ರೀತಿ ಯಾವುದೇ ಅಧ್ಯಯನ ನಡೆಸಿಲ್ಲ. ಭಕ್ತಾದಿಗಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲಿ; ಆದರೆ, ನಗರ ‍ಪ್ರದೇಶದ ರೀತಿ ಮಳಿಗೆ ನಿರ್ಮಿಸಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ದೇಗುಲದ ಸಿಬ್ಬಂದಿ ಹಾಗೂ ಮೂಲ ನಿವಾಸಿಗಳು ಮಾತ್ರ ಬೆಟ್ಟದಲ್ಲಿ ವಾಸಿಸಬೇಕು’ ಎಂದರು.

ADVERTISEMENT

ರಾಜೇಂದ್ರ ವಿಲಾಸ ಅರಮನೆ ನವೀಕರಣ: ‘ಚಾಮುಂಡಿಬೆಟ್ಟದಲ್ಲಿರುವ ರಾಜೇಂದ್ರ ವಿಲಾಸ ಅರಮನೆ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಹೋಟೆಲ್‌ ಆಗಿ ಮುಂದುವರಿಸಲಾಗುವುದು. ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸಿಗರ ಬಳಕೆಗೆ ಮುಕ್ತಗೊಳಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.