ADVERTISEMENT

ಶೈಕ್ಷಣಿಕ ರಂಗಭೂಮಿಗಿಲ್ಲ ಆದ್ಯತೆ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2025, 16:33 IST
Last Updated 7 ಜನವರಿ 2025, 16:33 IST
ಮೈಸೂರಿನ ಹಾರ್ಡ್ವಿಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ‘ಶಿಕ್ಷಣದಲ್ಲಿ ರಂಗಭೂಮಿಯ ಪ್ರಾಮುಖ್ಯತೆ’ ಕುರಿತ ಸಂವಾದದಲ್ಲಿ ರಜನೀಶ್ ಬಿಷ್ತ್‌, ಜನಾರ್ಧನ್, ಪ್ರಸನ್ನ, ಚಲುವರಾಜು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ಹಾರ್ಡ್ವಿಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ‘ಶಿಕ್ಷಣದಲ್ಲಿ ರಂಗಭೂಮಿಯ ಪ್ರಾಮುಖ್ಯತೆ’ ಕುರಿತ ಸಂವಾದದಲ್ಲಿ ರಜನೀಶ್ ಬಿಷ್ತ್‌, ಜನಾರ್ಧನ್, ಪ್ರಸನ್ನ, ಚಲುವರಾಜು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಶೈಕ್ಷಣಿಕ ರಂಗಭೂಮಿಯನ್ನು ಬೆಳೆಸಬೇಕಿದ್ದ ಸರ್ಕಾರಗಳು ಸತ್ತುಹೋಗಿವೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅಥವಾ ನರೇಂದ್ರ ಮೋದಿ ಸರ್ಕಾರ ಎಂಬ ಭೇದವಿಲ್ಲ. ಎಲ್ಲರೂ ಒಂದೇ ರೀತಿ ವರ್ತಿಸುತ್ತಿದ್ದಾರೆ’ ಎಂದು ರಂಗಕರ್ಮಿ ಪ್ರಸನ್ನ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಹಾರ್ಡ್ವಿಕ್ ಪಿಯು ಕಾಲೇಜು ಆವರಣದ ಭಾರತೀಯ ಶೈಕ್ಷಣಿಕ‌ ರಂಗಭೂಮಿ ಸಂಸ್ಥೆಯಲ್ಲಿ ಮಂಗಳವಾರ ನಡೆದ ‘ಶಿಕ್ಷಣದಲ್ಲಿ ರಂಗಭೂಮಿಯ ಪ್ರಾಮುಖ್ಯತೆ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಕರ ಲಭ್ಯತೆಯೇ ಇಲ್ಲ. ಶಾಲೆಗಳಲ್ಲಿ ರಂಗ ಶಿಕ್ಷಣ ಅಗತ್ಯದ ಬಗ್ಗೆ ನಾವು ಮಾಡಿದ ಮನವಿಗಳೆಲ್ಲವೂ ವ್ಯರ್ಥವಾಗಿವೆ. ಇಂದು ಪೋಷಕರೇ ನಮ್ಮ ಏಕಮಾತ್ರ ಭರವಸೆಯಾಗಿದ್ದು, ಮಕ್ಕಳಲ್ಲಿ ಕನ್ನಡ ಪ್ರೇಮವಾಗಲಿ, ರಂಗಭೂಮಿ ಆಸಕ್ತಿಯನ್ನಾಗಲಿ ಅವರಿಂದ ಮಾತ್ರ ಬೆಳೆಸಲು ಸಾಧ್ಯ. ರಂಗಭೂಮಿ ಮಕ್ಕಳ ಮನಸ್ಸನ್ನು ಮುದಗೊಳಿಸುವ ವೇದಿಕೆ’ ಎಂದರು.

ADVERTISEMENT

‘ತ್ರಿಭಾಷಾ ಸೂತ್ರ ಇಂದು ದೇಶವನ್ನು ಒಡೆಯುವ ಸ್ಥಿತಿಗೆ ಕಾರಣವಾಗುತ್ತಿದೆ. ಮಕ್ಕಳಿಗೆ ಅನಗತ್ಯ ಹೊರೆಯಾಗುತ್ತಿದೆ. ಹಿಂದಿಯನ್ನೇ ಸಂಪರ್ಕ ಭಾಷೆ ಎಂದು ಹೇರುವುದು, ಕಲಿಕೆ ಅವಧಿಯಲ್ಲಿ ಕನ್ನಡದಂತೆ ಹಿಂದಿಯನ್ನೂ ಕಲಿಸು ಎಂಬುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ದೆಹಲಿಯ ರಂಗಭೂಮಿ ನಿರ್ದೇಶಕ ರಜನೀಶ್‌ ಬಿಷ್ತ್‌ ಮಾತನಾಡಿ, ‘ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ರೋಬೊಟ್ ಮಾಡುವಲ್ಲಿ ಶ್ರಮವಹಿಸುತ್ತಿದೆ. ಸಮಾಜದೊಂದಿಗೆ ಸಂಪರ್ಕ ಸಾಧಿಸಲು ಅವರನ್ನು ಸಿದ್ಧಗೊಳಿಸುತ್ತಿಲ್ಲ. ರಂಗಭೂಮಿ ಮಕ್ಕಳಿಂದ ನಾಟಕ ಮಾಡಿಸುವ ವ್ಯವಸ್ಥೆಯಲ್ಲ. ಅವರ ವ್ಯಕ್ತಿತ್ವ ಬೆಳೆಸಿ, ಸಮಾಜದೊಂದಿಗೆ ಬೆರೆಸುವ ಶಿಕ್ಷಣ. ಮಕ್ಕಳು ನಮಗಿಂತ ಉತ್ತಮರಾಗಿದ್ದು, ಅನುಭವಕ್ಕೆ ಅವಕಾಶ ನೀಡಬೇಕು’ ಎಂದು ಪ್ರತಿಪಾದಿಸಿದರು.

ಚಿತ್ರಕಲಾವಿದ ಚಲುವರಾಜು ಮಾತನಾಡಿ, ‘ಶಾಲೆಗಳಲ್ಲಿ ಗಣಿತ, ವಿಜ್ಞಾನಕ್ಕೆ ಆದ್ಯತೆ ನೀಡಲಾಗುತ್ತದೆ. ಇದಕ್ಕೆ ಪೋಷಕರ ಒತ್ತಾಯವೂ ಮುಖ್ಯ ಕಾರಣ. ಆದರೆ, ಮಕ್ಕಳ ಮನದಲ್ಲಿ ಇರುವ ಭಾವನೆಗೆ, ಅವರ ಕೌಶಲಕ್ಕೆ ವೇದಿಕೆ ನೀಡುವ ವ್ಯವಸ್ಥೆಯನ್ನು ಚಿತ್ರ ಮತ್ತು ರಂಗ ಕಲೆಗಳು ನೀಡುತ್ತವೆ’ ಎಂದರು.

‘ನಾಟಕ ಅರಿವಿನ ಕಲಿಕೆ’

‘ಶಿಕ್ಷಣದಲ್ಲಿ ನಾಟಕವು ವ್ಯಕ್ತಿತ್ವ ಬೆಳವಣಿಗೆಗೆ ಪ್ರಬಲ ಮಾರ್ಗವಾಗಿ ಒದಗಿ ಬರುತ್ತದೆ. ಹೊಸ ಹೊಸ ಅನುಭವಕ್ಕೆ ಕಾರಣವಾಗುತ್ತದೆ’ ಎಂದು ಅರಿವು ವಿದ್ಯಾಸಂಸ್ಥೆ ಕಾರ್ಯದರ್ಶಿ ಜನಾರ್ಧನ್‌ ಅಭಿಪ್ರಾಯಪಟ್ಟರು. ‘ಮಕ್ಕಳು ಮನರಂಜನೆ ಭಾಗವಾಗಿ ನಾಟಕ ಮಾಡಬೇಕು ವೇದಿಕೆಯಲ್ಲಿ ಪ್ರದರ್ಶನ ನೀಡಬೇಕು ಎನ್ನುವುದೇ ಅಂತಿಮವಲ್ಲ. ನಾಟಕದ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಆ ಮೂಲಕ ಜಗತ್ತನ್ನು ಅರಿಯುವುದೇ ಉತ್ತಮ ಶಿಕ್ಷಣ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.