
ಹುಣಸೂರು: ‘ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹಲವು ಯೋಜನೆಗಳು ಜಾರಿಯಲ್ಲಿದ್ದು, ಓಝೋನ್ ಪದರ ರಕ್ಷಣೆ, ಶಬ್ದ ಮಾಲಿನ್ಯ ನಿಯಂತ್ರಣವೂ ಅತಿ ಮುಖ್ಯ’ ಎಂದು ಗಾವಡಗೆರೆ ಹೋಬಳಿ ಮುಳ್ಳೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವಸಂತಕುಮಾರ್ ಹೇಳಿದರು.
ತಾಲ್ಲೂಕಿನ ಅತ್ತಿಗುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಕೋ ಕ್ಲಬ್‌ನಿಂದ ಸೋಮವಾರ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮ, ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಪರಿಸರ ಮಾಲಿನ್ಯದಿಂದ ವಾತಾವರಣದ ಮೇಲೆ ದುಷ್ಪರಿಣಾಮ ಬೀರುತ್ತದೆ, ಇದನ್ನು ನಿಯಂತ್ರಿಸಲು ಹಸಿರು ಹೊದಿಕೆ ನಿರ್ಮಿಸಿ ಓಝೋನ್‌ನಲ್ಲಿ ಉಂಟಾಗಬಹುದಾದ ಅಪಾಯವನ್ನು ನಿಯಂತ್ರಿಸಬಹುದು. ರಸ್ತೆಯಲ್ಲಿ ಚಲಿಸುವ ವಾಹನಗಳಿಂದ ಅನಗತ್ಯವಾಗಿ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಚಾಲಕರಿಗೆ ವಿವಿಧ ಮಾಲಿನ್ಯ ಕುರಿತು ಜಾಗೃತಿ ಅಗತ್ಯವಿದೆ’ ಎಂದರು.
‘ಪರಿಸರದಲ್ಲಿ ಮಾನವರು ಮಾತ್ರ ಬದುಕುತ್ತಿಲ್ಲ, ನಮ್ಮೊಂದಿಗೆ ಪಕ್ಷಿ, ಪ್ರಾಣಿ, ಜಲಚರಗಳು ಸೇರಿದಂತೆ ಅನೇಕ ಜೀವಿಗಳು ಬದುಕುತ್ತಿದ್ದು ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಹೆಗಲಿಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಯಮುನಾ, ಸದಸ್ಯರಾದ ನಟರಾಜು, ಆಶಾ, ಚಂದ್ರೇಗೌಡ, ಇಂದ್ರೇಗೌಡ, ಮರೀಗೌಡ, ಸ್ವಾಮಿಗೌಡ, ಮುಖ್ಯಶಿಕ್ಷಕಿ ಶೋಭಾ, ಶ್ರೀರಾಮು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.