ADVERTISEMENT

ಗೋಷ್ಠಿಯ ಅಧ್ಯಕ್ಷತೆ ವಹಿಸಲ್ಲ: ನಿರ್ದೇಶಕರಿಗೆ ಬಹಿರಂಗ ಪತ್ರ ಬರೆದ ಪ.ಮಲ್ಲೇಶ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 12:47 IST
Last Updated 14 ಫೆಬ್ರುವರಿ 2020, 12:47 IST
ಪ.ಮಲ್ಲೇಶ್‌
ಪ.ಮಲ್ಲೇಶ್‌   

ಮೈಸೂರು: ಮೈಸೂರು ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಫೆ.16ರಂದು ನಡೆಯಲಿರುವ ವಿಚಾರ ಸಂಕಿರಣದ ಗೋಷ್ಠಿಯೊಂದರ ಅಧ್ಯಕ್ಷತೆ ವಹಿಸಲ್ಲ ಎಂದು ಸಮಾಜವಾದಿ ಪ.ಮಲ್ಲೇಶ್‌ ತಿಳಿಸಿದ್ದಾರೆ.

ನಾಟಕೋತ್ಸವಕ್ಕೆ ಚಾಲನೆ ಸಿಕ್ಕ ಶುಕ್ರವಾರವೇ ಮಲ್ಲೇಶ್‌, ರಂಗಾಯಣದ ನಿರ್ದೇಶಕರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದು, ಭಾಗವಹಿಸದಿರುವ ಕಾರಣವನ್ನು ಅದರಲ್ಲಿ ಉಲ್ಲೇಖಿಸಿದ್ದಾರೆ.

‘ಗಾಂಧಿ ಪಥದ ಮೊದಲ ಗೋಷ್ಠಿಯ ಅಧ್ಯಕ್ಷ ಸ್ಥಾನ ವಹಿಸಲು ಒಪ್ಪಿದೆ. ಒಪ್ಪಿದ ಮೇಲೆ ಬರಬೇಕು. ಆದರೆ ಬರುತ್ತಿಲ್ಲ. ಕಾರಣ, ನೀವೊಬ್ಬರು ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಣ್ಣು ಮಗಳೊಬ್ಬಳನ್ನು ನಿರ್ದೇಶಕರಾಗಿ ಮುಂದುವರೆಸಲಿಲ್ಲ ಈ ಸರ್ಕಾರ. ಇದು ರಾಜಕೀಯ. ಇದಕ್ಕೆ ಮೌನಸಮ್ಮತಿ ಕೊಡುತ್ತಿರುವವರು ‘ಸಮುದಾಯ’ದವರು.

ADVERTISEMENT

ಆದರೆ, ಗಾಂಧಿ ಪಥದ ಹೆಸರಿನಲ್ಲಿ ನೀವು ರಾಜಕೀಯ ಮಾಡಬೇಕಾಗಿರಲಿಲ್ಲ. ಈ ಸಂದರ್ಭದಲ್ಲಿ ಟಿಪ್ಪುವಿನ ವಿಷಯ ಪ್ರಸ್ತಾಪಿಸಿದ್ದು ಸುತರಾಂ ತಪ್ಪು. ಹೇಳಿ ಕೇಳಿ ಟಿಪ್ಪು ರಾಜಕೀಯ ಗಾಳಕ್ಕೆ ಸಿಕ್ಕಿಕೊಂಡಿದ್ದಾನೆ. ಗಾಂಧಿಪಥದ ಹೆಸರಿನಲ್ಲಿ ನೀವು ಗಾಂಧಿ ಮತ್ತು ಗೋಡ್ಸೆಯನ್ನು ತರುತ್ತೀರ? ನಿಮಗೆ ಪ್ರಜ್ಞೆ ಇರಬೇಕಿತ್ತು. ರಾಜ್ಯ ಸರ್ಕಾರ ಟಿಪ್ಪುವನ್ನು ಪಠ್ಯಪುಸ್ತಕದಿಂದಲೇ ಕಿತ್ತೊಗೆಯುವ ಹುನ್ನಾರದಲ್ಲಿದೆ. ಈ ಮಂತ್ರಿವರೇಣ್ಯನಿಗೆ ಡಾ.ಚಿದಾನಂದಮೂರ್ತಿ ಬದುಕಿರಬೇಕಿತ್ತು.

ಇನ್ನು, ‘ಜನ್ನಿ, ನನ್ನ ಗೆಳೆಯ, ಕುಡುಕ. ಆದರೆ, ಗಾಂಧೀಜಿ ಕುಡುಕರಲ್ಲ’ ಎಂಬ ನಿಮ್ಮ ನುಡಿಮುತ್ತು. ಮಾನ್ಯರೆ, ರಂಗಾಯಣ ಕಟ್ಟಿದ ಕಲಾತಪಸ್ವಿ ಬಿ.ವಿ.ಕಾರಂತ್ ಎಂತಹ ಕುಡುಕ. ನಿಮ್ಮ ಸುತ್ತಮುತ್ತ ಇರುವವರು ಯಾವ ಗುಂಪಿನ ಕುಡುಕರು. ಬಿ.ವಿ.ಕಾರಂತರು ಗಾಂಧಿಯನ್ನು ಕುಡಿದಿದ್ದರು, ನೆನಪಿರಲಿ.

ಮೈಸೂರಿನ ರಂಗಾಯಣಕ್ಕೆ ಸಾಕಷ್ಟು ನಿರ್ದೇಶಕರು ಆಗಿದ್ದಾರೆ. ಅದಕ್ಕೊಂದು ಚರಿತ್ರೆಯಿದೆ. ಇದುವರೆವಿಗೂ ಯಾವೊಬ್ಬ ಹಾಲಿ ನಿರ್ದೇಶಕ ಮತ್ತೊಬ್ಬ ಮಾಜಿ ನಿರ್ದೇಶಕರ ಬಗ್ಗೆ ಇಷ್ಟೊಂದು ಕ್ಷುಲ್ಲಕವಾಗಿ ಮಾತನಾಡಿರಲಿಲ್ಲ. ಮಾನ್ಯರೆ, ನಿಮ್ಮ ನಾಲಗೆ ನಿಮ್ಮ ಕುಲ ಯಾವುದು ಎಂದು ಪ್ರಚಾರ ಮಾಡಿಬಿಟ್ಟಿತು. ಈ ಕಾರಣಗಳಿಂದಾಗಿ ನಾನು ಸಭೆಗೆ ಗೈರುಹಾಜರಾಗುತ್ತಿದ್ದೇನೆ’ ಎಂಬ ಒಕ್ಕಣೆ ಪತ್ರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.