ADVERTISEMENT

‘ಭಾರತೀಯರ ಮೇಲಿನ ಕ್ರೌರ್ಯ’

ಪೌರತ್ವ (ತಿದ್ದುಪಡಿ) ಕಾಯ್ದೆ ದುರದೃಷ್ಟಕರ: ರಾಜಮೋಹನ ಗಾಂಧಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 19:45 IST
Last Updated 21 ಡಿಸೆಂಬರ್ 2019, 19:45 IST
ಹಿರಿಯ ಪತ್ರಕರ್ತ ರಾಜಮೋಹನ ಗಾಂಧಿ
ಹಿರಿಯ ಪತ್ರಕರ್ತ ರಾಜಮೋಹನ ಗಾಂಧಿ   

ಮೈಸೂರು: ‘ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಸಾಂವಿಧಾನಿಕ ಮಾತ್ರವಲ್ಲದೆ, ಈ ದೇಶದ ಜನರ ಮೇಲೆ ಸರ್ಕಾರ ನಡೆಸಿರುವ ಕ್ರೌರ್ಯ‘ ಎಂದು ಗಾಂಧೀಜಿ ಅವರ ಮೊಮ್ಮಗ ಹಾಗೂ ಹಿರಿಯ ಪತ್ರಕರ್ತ ರಾಜಮೋಹನ ಗಾಂಧಿ ಟೀಕಿಸಿದರು.

ಗಾಂಧಿ ವಿಚಾರ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ‘ಮಾಧ್ಯಮ: ಪ್ರಜಾಸತ್ತೆ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾವು ಭಾರತೀಯರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಪೌರತ್ವ ಸಾಬೀತುಪಡಿಸಬೇಕು ಎನ್ನುವುದರಲ್ಲಿ ಅರ್ಥವಿಲ್ಲ. ಇದಕ್ಕೆ ನನ್ನ ವಿರೋಧವಿದೆ. ಇಂತಹ ಕಾಯ್ದೆ ಹೇರಿರುವುದು ದುರದೃಷ್ಟಕರ’ ಎಂದರು.

ADVERTISEMENT

‘ಗಾಂಧೀಜಿ 1907–08 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎನ್‌ಆರ್‌ಸಿಯಂತಹ ಕಾಯ್ದೆಯ ವಿರುದ್ಧವೇ ತಮ್ಮ ಮೊದಲ ಸತ್ಯಾಗ್ರಹ ನಡೆಸಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಭಾರತೀಯರು ಅಲ್ಲಿ ತಮ್ಮ ಪೌರತ್ವ ನೋಂದಣಿ ಮಾಡಬೇಕಾಗಿತ್ತು. ಗಾಂಧೀಜಿ ಅದನ್ನು ವಿರೋಧಿಸಿದ್ದರು’ ಎಂದು ಹೇಳಿದರು.

ಎನ್‌ಆರ್‌ಸಿಯಿಂದ ಅಸ್ಸಾಂನಲ್ಲಿ ಲಕ್ಷಾಂತರ ಮಂದಿ ತಮ್ಮ ಪೌರತ್ವ ಸಾಬೀತುಪಡಿಸಲು ಅಪಾರ ಹಣ ಹಾಗೂ ಸಮಯ ವ್ಯಯಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಆ ಕಷ್ಟವನ್ನು ದೇಶದ ಎಲ್ಲರ ಜನರ ಮೇಲೆ ಹೇರಲು ಸರ್ಕಾರ ಮುಂದಾಗಿರುವುದು ಖೇದಕರ ಎಂದರು.

ಜನರ ಭಿನ್ನಾಭಿಪ್ರಾಯವನ್ನು ವಿರೋಧಿಸುವ ಯಾವುದೇ ಸರ್ಕಾರ ದೀರ್ಘ ಅವಧಿಯವರೆಗೆ ಅಧಿಕಾರದಲ್ಲಿ ಉಳಿಯದು. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಮತ್ತು ಟೀಕಿಸುವ ಹಕ್ಕು ಜನರಿಗೆ ಇರಬೇಕು. ಆ ಹಕ್ಕನ್ನು ಕಸಿಯುವ ಸರ್ಕಾರದ ಪ್ರಯತ್ನಕ್ಕೆ ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ವಿರೋಧ ವ್ಯಕ್ತವಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.