ADVERTISEMENT

ಕೆ.ಆರ್.ನಗರ | ನರೇಗಾ ಹೆಸರು ಬದಲಾವಣೆ; ಬಡವರಿಗೆ ತೊಂದರೆ: ಡಾ.ಎಚ್.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 3:14 IST
Last Updated 21 ಜನವರಿ 2026, 3:14 IST
ಕೆ.ಆರ್.ನಗರ ತಾಲ್ಲೂಕಿನ ಹಂಪಾಪುರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶಾಸಕ ಡಿ.ರವಿಶಂಕರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಗ್ರಾ.ಪಂ ಅಧ್ಯಕ್ಷೆ ವಿದ್ಯಾ ನಾರಾಯಣಶೆಟ್ಟಿ ಭಾಗವಹಿಸಿದ್ದರು
ಕೆ.ಆರ್.ನಗರ ತಾಲ್ಲೂಕಿನ ಹಂಪಾಪುರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶಾಸಕ ಡಿ.ರವಿಶಂಕರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಗ್ರಾ.ಪಂ ಅಧ್ಯಕ್ಷೆ ವಿದ್ಯಾ ನಾರಾಯಣಶೆಟ್ಟಿ ಭಾಗವಹಿಸಿದ್ದರು   

ಕೆ.ಆರ್.ನಗರ: ‘ಮಹಾತ್ಮ ಗಾಂಧಿ ಹೆಸರಿನಲ್ಲಿದ್ದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ತೆಗೆದು ‘ವಿಬಿ– ಜಿ ರಾಮ್ ಜಿ’ ಎಂಬ ಹೆಸರನ್ನು ಕೇಂದ್ರ ಸರ್ಕಾರ ಇಟ್ಟಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆ ಆಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ತಾಲ್ಲೂಕಿನ ಹಂಪಾಪುರ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ನಡೆದ ₹40 ಲಕ್ಷ ಮೊತ್ತದ ಗ್ರಾ.ಪಂ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು. ‘ಕೇಂದ್ರ ಸರ್ಕಾರದ ‘ವಿಬಿ– ಜಿ ರಾಮ್ ಜಿ’ ಮಸೂದೆಯನ್ನು ಪ್ರತಿಯೊಬ್ಬರೂ ವಿರೋಧಿಸಬೇಕು’ ಎಂದರು.

‘ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶ ಉದ್ಧಾರ ಆಗುತ್ತದೆ ಎಂದು ಗಾಂಧೀಜಿ ಹೆಳಿದ್ದರು. ಆದ್ದರಿಂದ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ರಾಜಕೀಯ ಮತ್ತು ಹಣಕಾಸು ಅಧಿಕಾರ ನೀಡಲಾಗಿತ್ತು. ಹೊಸ ಕಾಯ್ದೆಯಿಂದ ಈಗ ಅದೆಲ್ಲವೂ ನಿಷ್ಕ್ರಿಯವಾಗಲಿದೆ’ ಎಂದರು.

ADVERTISEMENT

ಶಾಸಕ ಡಿ.ರವಿಶಂಕರ್ ಮಾತನಾಡಿ, ‘ಹಾಂಪಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿರುವುದು ಗಮನಿಸಿದ್ದೇನೆ, ಹೇಮಾವತಿ ನದಿಗೆ ಸಂಪರ್ಕ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಡಗೂರು ಏತ ನೀರಾವರಿ ಯೋಜನೆಯಿಂದ ಹಂಪಾಪುರ, ಬಡಕನಕೊಪ್ಪಲು, ಮಂಚನಹಳ್ಳಿ, ದೊಡ್ಡಕೊಪ್ಪಲು ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ, ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷೆ ವಿದ್ಯಾ ನಾರಾಯಣಶೆಟ್ಟಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ತಾ.ಪಂ ಆಡಳಿತಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ ಇಒ ವಿ.ಪಿ.ಕುಲದೀಪ್, ವಿಎಸ್ಎಸ್ಎನ್ ಅಧ್ಯಕ್ಷ ಪ್ರಶಾಂತ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರ ಘಟಕದ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸಯ್ಯದ್ ಜಾಬೀರ್, ಗ್ರಾ.ಪಂ ಉಪಾಧ್ಯಕ್ಷ ಬಿ.ಎನ್.ರೇವಣ್ಣ, ಸದಸ್ಯರಾದ ಹರಿರಾಜು, ಕಲಾವತಿ, ಎಚ್.ಕೆ.ನಾಗರಾಜು, ಕೆ.ಎನ್.ಚೈತ್ರಾ, ಎಚ್.ಎಸ್.ರಾಮೇಗೌಡ, ಆರ್.ಜಿ.ನಾಗಮಣಿ, ಎಂ.ಮಾನಸಾ, ಎಚ್.ಡಿ.ನಾಗೇಶ್, ಎಚ್.ಇ.ಮಹದೇವಕುಮಾರ್, ಎಸ್.ವೈ.ಸೌಮ್ಯಾ, ಕಾರ್ತಿಕಾ, ಗೌರಮ್ಮ, ಜಿ.ಎನ್.ರಮ್ಯಾ, ಎಂ.ಬಿ.ಲೋಕೇಶ್, ಎಂ.ಎಸ್.ಗಿರೀಶ್, ಎಂ.ಎಸ್.ರವಿಕುಮಾರ್, ಪಿಡಿಒ ವಿ.ಎ.ಅಶ್ವಿನಿ ಭಾಗವಹಿಸಿದ್ದರು.

ಹಂಪಾಪುರ ಗ್ರಾಮದಲ್ಲಿ ₹10ಲಕ್ಷ ಮೊತ್ತದ ನೂತನ ಬಸ್ ನಿಲ್ದಾಣ, ₹97ಲಕ್ಷ ಮೊತ್ತದ ನಾಲೆ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.