
ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್
ಮೈಸೂರು: ‘ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ’ (ವಿಬಿ– ಜಿ ರಾಮ್ ಜಿ) ಕಾಯ್ದೆ ಹಿಂಪಡೆದು, ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ನರೇಗಾ) ಕಾಯ್ದೆ ಮರುಸ್ಥಾಪಿಸುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ಬೂತ್‌ಮಟ್ಟದಿಂದ ಚಳವಳಿ ನಡೆಸಲಾಗುವುದು’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ತಿಳಿಸಿದರು.
ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸುತ್ತಿದ್ದ ಯೋಜನೆಯನ್ನು ಕೊಲ್ಲುವುದಕ್ಕೆ ಬಿಜೆಪಿ ಮರುನಾಮಕರಣ ಮಾಡಿದೆ. ಇದರ ವಿರುದ್ಧ ಜನಚಳವಳಿಯನ್ನು ರೂಪಿಸಲಾಗುತ್ತಿದೆ’ ಎಂದು ಹೇಳಿದರು.
‘ಪಕ್ಷದ ಸಿಡಬ್ಲ್ಯುಸಿ ನಿರ್ಣಯದಂತೆ ನರೇಗಾ ಉಳಿಸಿ ಆಂದೋಲನ ನಡೆಸಲಾಗುವುದು. ಸಾಮಾಜಿಕ ಭದ್ರತೆಯ ಕಾರ್ಯಕ್ರಮವನ್ನು ನಾಶಗೊಳಿಸಲು ಬಿಡುವುದಿಲ್ಲ. ಮತ ಕಳವು ವಿರೋಧಿಸಿಯೂ ಚಳವಳಿ ಮುಂದುವರಿಸಲಾಗುವುದು. ಬಿಜೆಪಿಯ ಸಿದ್ಧಾಂತದ ವಿರುದ್ಧದ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ ಎಂದು ವರಿಷ್ಠರಾದ ಸೋನಿಯಾ ಗಾಂಧಿ ಹೇಳಿದ್ದಾರೆ. ಇದನ್ನು ಬೆಂಬಲಿಸಿ ನಾವು ಹಳ್ಳಿ–ಹಳ್ಳಿಗೂ ಚಳವಳಿ ತಲುಪಿಸುತ್ತೇವೆ’ ಎಂದರು.
‘ಜಿಲ್ಲೆಯಲ್ಲಿ ಬಿಜೆಪಿ ಮುಗಿಸಲು ಬಿಜೆಪಿಯವರೇ ಸಾಕು. ನಾವು ನಮ್ಮ ಹೋರಾಟ ಮುಂದುವರಿಸಿಕೊಂಡು ಹೋಗುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.