ADVERTISEMENT

ಎನ್‌ಟಿಂ ಶಾಲೆ: ನಿಲ್ಲದ ಪ್ರತಿಭಟನೆ

ಕರ್ನಾಟಕ ಕಾವಲು ಪಡೆ, ಕಾಂಗ್ರೆಸ್‌ ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 13:09 IST
Last Updated 8 ಜುಲೈ 2021, 13:09 IST
ಮೈಸೂರಿನ ಎನ್‌ಟಿಎಂ ಶಾಲೆಯ ಮುಂದೆ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ, ಕರ್ನಾಟಕ ಕಾವಲುಪಡೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಗುರುವಾರ ಶಾಲೆಯ ಉಳಿವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಮೈಸೂರಿನ ಎನ್‌ಟಿಎಂ ಶಾಲೆಯ ಮುಂದೆ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟ, ಕರ್ನಾಟಕ ಕಾವಲುಪಡೆ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಗುರುವಾರ ಶಾಲೆಯ ಉಳಿವಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಮೈಸೂರು: ಇಲ್ಲಿನ ಎನ್‌ಟಿಎಂ ಶಾಲೆ ಉಳಿವಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ 11ನೇ ದಿನವಾದ ಗುರುವಾರ ಕರ್ನಾಟಕ ಕಾವಲು ಪಡೆ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರು ಭಾಗಿಯಾದರು.

ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಶಾಲೆಯ ಮುಂಭಾಗ ಸೇರಿದ ಪ್ರತಿಭಟನಕಾರರು ಶಾಲೆಯ ಉಳಿವಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಸರ್ಕಾರಕ್ಕೆ ಶಾಲೆಯನ್ನು ಉಳಿಸುವ ಶಕ್ತಿ ಇದೆ’ ಎಂದರು.

ADVERTISEMENT

ಸಂಸದ ಪ್ರತಾಪಸಿಂಹ ಸ್ಮಾರಕ ನಿರ್ಮಾಣವಾಗಲಿ ಎಂದು ಹೇಳಿದ್ದಾರೆ. ಅದು ಅವರು ವ್ಯಕ್ತಿಗತ ಹೇಳಿಕೆ. ಆದರೆ, ನಾವೂ ಸಹ ಸ್ಮಾರಕವಾಗಲಿ ಎಂದೇ ಹೇಳುತ್ತೇವೆ. ಇದರ ಜತೆಗೆ, ಬಡ ಹೆಣ್ಣು ಮಕ್ಕಳ ಸರ್ಕಾರಿ ಶಾಲೆಯೂ ಉಳಿಯಲಿ ಎಂದು ಒತ್ತಾಯಿಸುತ್ತೇವೆ. ಇದು ತಪ್ಪೇ ಎಂದು ಅವರು ಪ್ರಶ್ನಿಸಿದರು.

ಕನ್ನಡ ಕಾವಲು ಪಡೆಯ ಅಧ್ಯಕ್ಷ ಮೋಹನ್‌ಕುಮಾರ್‌ಗೌಡ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಲೆ ಉಳಿಸುವ ಸಂಬಂಧ ನೀಡಿದ ಆದೇಶವನ್ನು ಜಾರಿಗೊಳಿಸದೇ ಹೋದರೆ ಅವರೇ ವಚನ ಭ್ರಷ್ಟರಾಗುತ್ತಾರೆ’ ಎಂದು ಕಿಡಿಕಾರಿದರು.

ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ (ಗ್ರಾಮಾಂತರ) ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಮಾಜಿ ಮೇಯರ್ ಪುರುಷೋತ್ತಮ್, ಉಗ್ರನರಸಿಂಹೇಗೌಡ, ಹೊಸಕೋಟೆ ಬಸವರಾಜು, ಭಾನುಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.