ADVERTISEMENT

ದೇಶದಲ್ಲಿ ಕೌಶಲ ಪಡೆದವರ ಸಂಖ್ಯೆ ಶೇಕಡ 5ರಷ್ಟಿದೆ: ಸಚಿವ ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 8:22 IST
Last Updated 4 ಅಕ್ಟೋಬರ್ 2021, 8:22 IST
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ    

ಮೈಸೂರು: ಶಿಕ್ಷಣದ ಮೂಲಕ ಕೌಶಲ ಪಡೆದವರ ಪ್ರಮಾಣ ದಕ್ಷಿಣ ಕೊರಿಯಾದಲ್ಲಿ ಶೇ 96 ರಷ್ಟು ಇದೆ. ಬ್ರಿಟನ್ ನಲ್ಲಿ ಶೇ 80ರಷ್ಟು ಇದೆ. ಅಮೆರಿಕದಲ್ಲಿ ಶೇ 56 ಇದೆ. ನಮ್ಮ ದೇಶದಲ್ಲಿ ಕೇವಲ ಶೇ 5 ರಷ್ಟು ಮಾತ್ರ ಇದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಬೇಸರ ವ್ಯಕ್ತಪಡಿಸಿದರು.

ಅವರು ಸೋಮವಾರ ಇಲ್ಲಿನ ವಿದ್ಯಾರಣ್ಯಾಪುರಂನ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ಏರ್ಪಡಿಸಿದ್ದ ಮೋದಿ ಯುಗ್ ಉತ್ಸವ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲಸ ಸಿಕ್ಕಬೇಕಾದರೆ ಯಾವ ಬಗೆಯ ಕೌಶಲ್ಯ ಪಡೆಯಬೇಕು ಎಂಬ ಅರಿವು ಇರಬೇಕು. ಕೇಂದ್ರ ಸರ್ಕಾರ ಈ ಕುರಿತು ಹಲವು ಯೋಜನೆ ರೂಪಿಸಿದೆ. ‌ಅದನ್ನು ಅಚ್ಚುಕಟ್ಟಾಗಿ ರಾಜ್ಯ ಸರ್ಕಾರ ಅನುಷ್ಟಾನಕ್ಕೆ ತರುತ್ತಿದೆ. ಸ್ಕಿಲ್ ಕನೆಕ್ಟ್ ಮೂಲಕ ಉದ್ಯೋಗವಕಾಶಕ್ಕೆ ಅನುಗುಣವಾಗಿ ಕೌಶಲ ತರಬೇತಿ ಪಡೆಯುವ ವ್ಯವಸ್ಥೆ ನಿರ್ಮಿಸಿದ್ದೇವೆ ಎಂದರು.

ADVERTISEMENT

1200 ಐಟಿಐ ಸಂಸ್ಥೆಗಳ ಪೈಕಿ 270 ಸರ್ಕಾರಿ ಸಂಸ್ಥೆಗಳು ಹಾಗೂ 170 ಖಾಸಗಿ ಸಂಸ್ಥೆಗಳನ್ನು ವಿಶ್ವದರ್ಜೆಗೇರಿಸಲಾಗುತ್ತಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

5ನೇ ತರಗತಿಯಿಂದಲೇ ಉದ್ಯೋಗಾವಕಾಶಗಳಿರುವ ಕ್ಷೇತ್ರವನ್ನು ಪರಿಚಯ ಮಾಡಿಕೊಡುವ ವ್ಯವಸ್ಥೆ ವಿದೇಶಗಳಲ್ಲಿ ಇದೆ. ಇದೇ ರೀತಿಯ ಕೆಲಸವನ್ನು ರಾಮದಾಸ್ ಮಾಡುತ್ತಿದ್ದಾರೆ. ಈ ಬಗೆಯ ಅರಿವು ಕಾರ್ಯಕ್ರಮ ಎಲ್ಲ ಶಾಲೆಗಳಲ್ಲೂ ನಡೆಯಬೇಕು ಎಂದು ಹೇಳಿದರು.

ಪಾಲಿಟೆಕ್ನಿಕ್ ತರಬೇತಿ ಪಡೆಯಲು ಪ್ರತಿವರ್ಷ ‌70 ಸಾವಿರ ಮಂದಿ ದಾಖಲಾಗುವ ಅವಕಾಶ ಇದೆ. ಕೇವಲ 30 ಸಾವಿರ ಮಂದಿ ಮಾತ್ರ ದಾಖಲಾಗುತ್ತಾರೆ‌. ಎನ್ ಎಸ್ ಕ್ಯೂ ಜತೆ ಸೇರ್ಪಡೆ ಮಾಡಿ ವಿಶ್ವದರ್ಜೆಯ ತರಬೇತಿ ನೀಡುತ್ತಿದ್ದೇವೆ ಎಂದರು‌.

ಕೌಶಲತೆಯೆ ನಮ್ಮ ಬದುಕಿನ ಗುಣಮಟ್ಟ ಹೆಚ್ಚಿಸುತ್ತದೆ. ಪಿಯುಸಿ ಮಾಡಿ ಎಂಜಿನಿಯರಿಂಗ್ ಮಾಡುವುದಕ್ಕಿಂತ ಪಾಲಿಟೆಕ್ನಿಕ್ ಮಾಡಿ ಎಂಜಿನಿಯರಿಂಗ್ ಸೇರುವುದು ಉತ್ತಮ. ಇವರಿಗೆ ಹೆಚ್ಚು ಉದ್ಯೋಗಾವಕಾಶ ಸಿಗುತ್ತದೆ. ಐಟಿಐ ಪಾಲಿಟೆಕ್ನಿಕ್ ನಲ್ಲಿ ನೂರಕ್ಕೆ ನೂರು ಉದ್ಯೋಗಗಳು ಸಿಗುತ್ತವೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.

ಶಾಸಕ ರಾಮದಾಸ್ ಯೋಚನೆಗಳು ಪ್ರಸ್ತುತವಾಗಿವೆ. ಜನರ ಅಗತ್ಯ ಏನಿದೆ ಎಂದು ಅರ್ಥೈಸಿಕೊಳ್ಳುವ ಅಪರೂಪದ ಜನಪ್ರತಿನಿಧಿ. ಸಮಾಜದ ಅವಶ್ಯಕತೆ ಏನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ವ್ಯಕ್ತಿಗೆ ತಿಳಿವಳಿಕೆ ಕೊಟ್ಟರೆ ಆ ವ್ಯಕ್ತಿಯೇ ಸಂಸ್ಥೆ ಆಗುತ್ತಾನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.