ADVERTISEMENT

ಮುರುಘಾ ಶ್ರೀ ಬಂಧನ: ನಿರಂತರ ಹೋರಾಟಕ್ಕೆ ಸಿಕ್ಕ ಜಯ ಎಂದ ಪರಶುರಾಂ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 18:05 IST
Last Updated 1 ಸೆಪ್ಟೆಂಬರ್ 2022, 18:05 IST
ಪರಶುರಾಂ
ಪರಶುರಾಂ    

ಮೈಸೂರು: ‘ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿರುವುದು ನಿರಂತರ ಹೋರಾಟಕ್ಕೆ ಸಿಕ್ಕಿರುವ ಸಣ್ಣ ಜಯವಷ್ಟೆ’ ಎಂದು ಇಲ್ಲಿನ ಒಡನಾಡಿ ಸಂಸ್ಥೆಯ ಸಂಚಾಲಕ ಪರಶುರಾಂ ಪ್ರತಿಕ್ರಿಯಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಇಬ್ಬರು ವಿದ್ಯಾರ್ಥಿನಿಯರಷ್ಟೆ ದೌರ್ಜನ್ಯಕ್ಕೆ ಒಳಗಾಗಿಲ್ಲ. ಆ ಮಠದ ವಸತಿನಿಲಯದಲ್ಲಿನ ಬಹಳಷ್ಟು ವಿದ್ಯಾರ್ಥಿನಿಯರು ಶೋಷಣೆಗೆ ಒಳಗಾಗಿದ್ದಾರೆ. ಅವರೂ ನೊಂದಿದ್ದಾರೆ; ನಲುಗಿದ್ದಾರೆ. ಹೀಗಾಗಿ, ಪ್ರಕರಣದ ಬಗ್ಗೆ ನ್ಯಾಯಾಂಗದ ಸುಪರ್ದಿಯಲ್ಲಿ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಮಕ್ಕಳ ಪರವಾಗಿ ನಿರಂತರವಾಗಿ ಕೆಲಸ ಮಾಡಿದ ಪ್ರಯುಕ್ತ ತಡವಾದರೂ ಆರೋಪಿಯನ್ನು ಬಂಧಿಸಲಾಗಿದೆ. ತ್ವರಿತವಾಗಿ ಕ್ರಮ ಕೈಗೊಂಡಿದ್ದಲ್ಲಿ ಸರ್ಕಾರಕ್ಕೆ ಹಾಗೂ ಪೊಲೀಸ್‌ ಇಲಾಖೆಗೆ ಹೆಚ್ಚಿನ ಗೌರವ ಬರುತ್ತಿತ್ತು’ ಎಂದರು.

ADVERTISEMENT

‘ಮುರುಘಾ ಮಠದಿಂದ ಹೊರಹೊಮ್ಮಿದ ಶ್ರೀಗಳು ಸೇರಿದಂತೆ ಹಲವು ಸ್ವಾಮೀಜಿಗಳು ಬಲಿಷ್ಠ ಮಠದ ಸ್ವಾಮೀಜಿಯನ್ನು ರಕ್ಷಿಸಲಿಕ್ಕೇ ನಿಂತರೇ ಹೊರತು ದಿಕ್ಕಿಲ್ಲದವರ, ಬಡವರ ಹಾಗೂ ನೊಂದವರ ಪರವಾಗಿ ನಿಲ್ಲಲಿಲ್ಲ. ಇದು ನೊಂದವರಿಗೆ ಮಾಡಿದ ಅವಮಾನವಲ್ಲದೇ ಮತ್ತೇನೂ ಅಲ್ಲ’ ಎಂದು ತಿಳಿಸಿದರು.

ಶ್ರೀಗಳ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣವನ್ನು ಒಡನಾಡಿ ಸಂಸ್ಥೆ ಬೆಳಕಿಗೆ ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.