ADVERTISEMENT

ಮಾಹಿತಿ ಇಲ್ಲದಿದ್ದರೆ ಸಭೆಗೆ ಬರುವುದೇಕೆ?

ವಿಧಾನ ಮಂಡಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿಯ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಕಿಡಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 16:21 IST
Last Updated 14 ಜೂನ್ 2019, 16:21 IST
ಮೈಸೂರಿನಲ್ಲಿ ಶುಕ್ರವಾರ ನಡೆದ ವಿಧಾನ ಮಂಡಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿಯ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಸದಸ್ಯ, ಶಾಸಕ ಎನ್.ಮಹೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ, ಶಾಸಕ ಅನಿಲ್‌ ಕುಮಾರ್ ಭಾಗವಹಿಸಿದ್ದರು
ಮೈಸೂರಿನಲ್ಲಿ ಶುಕ್ರವಾರ ನಡೆದ ವಿಧಾನ ಮಂಡಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿಯ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಸದಸ್ಯ, ಶಾಸಕ ಎನ್.ಮಹೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ, ಶಾಸಕ ಅನಿಲ್‌ ಕುಮಾರ್ ಭಾಗವಹಿಸಿದ್ದರು   

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರ ಬಗ್ಗೆ ಅಂಕಿ ಅಂಕ, ಮಾಹಿತಿಯನ್ನು ಜತೆಗಿಟ್ಟುಕೊಳ್ಳದೇ ಸಭೆಗೆ ಏಕೆಬರುತ್ತೀರಿ? ಎಂದು ವಿಧಾನ ಮಂಡಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿಯ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಸಮಿತಿ ವತಿಯಿಂದ ಶುಕ್ರವಾರ ನಡೆದ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಎಸ್ಸಿ, ಎಸ್ಟಿಗೆ ಸಂಬಂಧಿಸಿದ ವಿವಿಧ ಸರ್ಕಾರಿ ಯೋಜನೆಗಳ ಜಾರಿ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಎಸ್ಸಿ, ಎಸ್ಟಿ ಜನಾಂಗದವರ ಸಾಕ್ಷರತಾ ಪ್ರಮಾಣ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ) ಪಾಂಡುರಂಗ ಅವರಿಗೆ ಕುಮಾರಸ್ವಾಮಿ ಕೇಳಿದರು. ಈ ಬಗ್ಗೆ ಮಾಹಿತಿ ತರಿಸಿಕೊಡುವುದಾಗಿ ಪಾಂಡುರಂಗ ತಿಳಿಸಿದರು. ಇದರಿಂದ ಕುಮಾರಸ್ವಾಮಿ ಕೆಂಡಾಮಂಡಲವಾದರು. ಡಿಡಿಪಿಐ ಬಳಿ ಇಂತಹ ಮಾಹಿತಿ ಬೆರಳ ತುದಿಯಲ್ಲಿ ಇರಬೇಕು. ಮಾಹಿತಿ ಕೊಡದಿದ್ದರೆ ಹೇಗೆ? ಎಂದು ಖಂಡಿಸಿದರು.

ADVERTISEMENT

ದಲಿತ ಜನಾಂಗದವರ ಪೈಕಿ ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣ, ರಕ್ತಹೀನೆತೆಗೆ ಒಳಗಾದ ಗರ್ಭಿಣಿಯರ ಸಂಖ್ಯೆಯ ಮಾಹಿತಿ ನೀಡುವಂತೆ ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಬಿಂದಿಯಾ ಅವರಿಗೆ ಕೇಳಿದರು. ಈ ಮಾಹಿತಿ ಬಿಂದಿಯಾ ಅವರ ಬಳಿ ಇರಲಿಲ್ಲ. ಇದರಿಂದ ಕೋಪಗೊಂಡ ಸದಸ್ಯ ಕೆ.ಅನ್ನದಾನಿ, ‘ಮಾಹಿತಿ ಇಲ್ಲವೆಂದ ಮೇಲೆ ಸಭೆಗೆ ಬರುವುದೇಕೆ? ಇದು ನಿರ್ಲಕ್ಷ್ಯದ ಪರಮಾವಧಿ’ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಗೈರುಹಾಜರು: ಸಭೆಗೆ ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ‘ಎಸ್‌ಇಪಿ, ಟಿಎಸ್‌ಪಿ ಅನುದಾನದ ಬಳಕೆ ಕುರಿತು ಕಾಲಕಾಲಕ್ಕೆ ಇಲ್ಲಿ ಪ್ರಗತಿ ಪರಿಶೀಲನೆ ನಡೆದಿಲ್ಲದೇ ಇರುವುದು ಮೇಲ್ನೋಟಕ್ಕೇ ಕಾಣುತ್ತಿದೆ. ಅಲ್ಲದೇ, ಇವರೆಲ್ಲಾ ನಗರಮಟ್ಟಕ್ಕೆ ಸೀಮಿತವಾದ ಅಧಿಕಾರಿಗಳೇನು. ತಾಲ್ಲೂಕುಮಟ್ಟದ ಮಾಹಿತಿಯೇ ಇವರಲ್ಲಿ ಇಲ್ಲವಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ, ‘ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ಮುಂದಿನ ಸಭೆಯಲ್ಲಿ ಇದು ಮರುಕಳಿಸದೇ ಇರುವಂತೆ ಕ್ರಮ ವಹಿಸಲಾಗುವುದು. ಅಗತ್ಯಬಿದ್ದಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ 14,400 ವಸತಿ ರಹಿತರಿದ್ದಾರೆ. ಈ ಪೈಕಿ 9,827 ನಿವೇಶನ ರಹಿತರು, ಪರಿಶಿಷ್ಟ ಪಂಗಡ್ಕೆ ಸೇರಿದ ಪೈಕಿ 9,742 ವಸತಿ ರಹಿತರಿದ್ದಾರೆ. ಈ ಪೈಕಿ 8,364 ಮಂದಿ ನಿವೇಶನ ಹೊಂದಿಲ್ಲ. ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 50 ನಿವೇಶನವನ್ನು ಮೀಸಲಿಡಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತಾವನೆಯೇ ಬಂದಿಲ್ಲ: ಶಾಸಕ, ಸಮಿತಿ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಹಾಡಿಗಳಲ್ಲಿ ಅಂಗನವಾಡಿಗಳೇ ಇಲ್ಲ. ಕಾಡಿನಲ್ಲಿ ನಿವೇಶನ ಸಿಗುತ್ತಿಲ್ಲ ಎಂದರು. ಇದಕ್ಕೆ ಡಿಎಒ ಪ್ರಶಾಂತ್‌ ಕುಮಾರ್, ‘ಸ್ಥಳಾವಕಾಶ ನೀಡಲು ನಾವು ಸಿದ್ಧ. ಆದರೆ, ಇದುವರೆಗೆ ನಮಗೆ ಪ್ರ‌ಸ್ತಾವವೇ ಸಿಕ್ಕಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅನ್ನದಾನಿ, ‘ಸಂಬಂಧಪಟ್ಟ ಇಲಾಖೆಗಳಿಗೆ ಪ್ರಸ್ತಾವ ನೀಡಲು ಏನು ಕಷ್ಟ’ ಎಂದು ಪ್ರಶ್ನಿಸಿದರು.

ಕೈಗಾರಿಕೆ ನಡೆಸಲು ಮುಂದಾಗುವ ದಲಿತ ಫಲಾನುಭವಿಗಳಿಗೆ ಅಗತ್ಯ ನಿವೇಶನ ನೀಡಬೇಕು. ದಲಿತರು ಅರ್ಜಿ ಸಲ್ಲಿಸದೇ ಇದ್ದರೂ ಆ ನಿವೇಶನಗಳನ್ನು ಬೇರೆ ಸಮುದಾಯಗಳಿಗೆ ನೀಡಬಾರದು ಎಂದು ಶಾಸಕ, ಸಮಿತಿ ಸದಸ್ಯ ಎನ್‌.ಮಹೇಶ್‌ ಸೂಚಿಸಿದರು.

ಶಾಸಕರಾದ ಕೆ.ಮಹದೇವ್, ಅಶ್ವಿನ್‌ಕುಮಾರ್, ಸಮಿತಿ ಸದಸ್ಯರಾದ ಆರ್.ಪ್ರಸನ್ನಕುಮಾರ್, ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಭಾಗವಹಿಸಿದ್ದರು.

ಮೃತಪಟ್ಟರೆ ಸ್ಥಳಕ್ಕೆ ಹೋಗಬೇಕು

ದಲಿತರು ಅಸಹಜವಾಗಿ ಮೃತಪಟ್ಟಲ್ಲಿ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಹೋಗಲೇಬೇಕು ಎಂದು ಸಮಿತಿಯ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಸೂಚಿಸಿದರು.

ಎಸ್ಪಿ, ಡಿಎಸ್ಪಿ, ಐಜಿಪಿಗಳು ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಬೇಕು. ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಬಾರದು ಎಂದರು.

ಸಿಆರ್‌ಇ ಘಟಕದ ಡಿವೈಎಸ್ಪಿ ಹಂತದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲಿಸಿಲ್ಲ. ಇನ್‌ಸ್ಪೆಕ್ಟರ್ ಒಬ್ಬರನ್ನು ಕಳುಹಿಸಿ ಸುಮ್ಮನೆ ಕೂರುವುದು ಸರಿಯಲ್ಲ ಎಂದು ಟೀಕಿಸಿದರು. ಈ ಬಗ್ಗೆ ಸಮಜಾಯಿಷಿ ನೀಡಿದ ಅಧಿಕಾರಿಯೊಬ್ಬರು, ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಇದ್ದ ಕಾರಣ, ಸ್ಥಳಕ್ಕೆ ಭೇಟಿ ನೀಡಲು ಆಗಲಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎನ್‌.ಮಹೇಶ್‌, ‘ನೀವು ಸ್ಥಳ ಭೇಟಿ ಮಾಡಿದರೆ ಒತ್ತಡ ನಿರ್ಮಾಣವಾಗುತ್ತದೆ. ಕಾನೂನು ಕ್ರಮ ಸಲೀಸಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಪ್ರಗತಿ ಅಪೂರ್ಣ: ಅಸಮಾಧಾನ

ಜಿಲ್ಲಾ ವ್ಯಾಪ್ತಿಯ ವಿವಿಧ ಇಲಾಖೆಗಳಲ್ಲಿ ಎಸ್ಸಿ, ಎಸ್ಟಿಗೆ ಸಂಬಂಧಿಸಿದ ಯೋಜನೆಗಳು ಅಪೂರ್ಣವಾಗಿವೆ ಎಂದು ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಹಾಗಾಗಿ, ಯೋಜನೆ ಜಾರಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಲಾಗಿದೆ. ಯೋಜನೆಗಳ ಪೂರ್ಣ ಗುರಿ ಮುಟ್ಟುವುದು ಆದ್ಯತೆಯಾಗಬೇಕು ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ಸಿಗುವ ಪ್ರಮಾಣ ಕಡಿಮೆಯಿದೆ. ಜಿಲ್ಲೆಯಲ್ಲಿ ಒಟ್ಟು 227 ಪ್ರಕರಣ ದಾಖಲಾಗಿವೆ. ಆದರೆ, ಆರೋಪಿಗಳ ವಿರುದ್ಧ ಶಿಕ್ಷೆಯಾಗಿರುವುದು ಅತ್ಯಲ್ಪ. ಖುಲಾಸೆಯಾಗುವುದೇ ಹೆಚ್ಚು. ಈ ಕುರಿತು ಸಮಿತಿ ಚಿಂತನೆ ನಡೆಸಿ ತೀರ್ಮಾನಕ್ಕೆ ಬರಲಿದೆ ಎಂದು ಹೇಳಿದರು.

ಇಂದು ವೀರನಕಟ್ಟೆಗೆ ಭೇಟಿ

ದಲಿತ ಯುವಕನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಗುಂಡ್ಲುಪೇಟೆ ತಾಲ್ಲೂಕಿನ ವೀರನಕಟ್ಟೆಗೆ ಸಮಿತಿಯು ಶನಿವಾರ ಭೇಟಿ ನೀಡಲಿದೆ.

ಅಲ್ಲಿನ ಸ್ಥಳೀಯರೊಂದಿಗೆ ಚರ್ಚಿಸಲಾಗುವುದು. ವಸ್ತುಸ್ಥಿತಿಯಲ್ಲಿ ಅವಲೋಕಿಸಲಾಗುವುದು ಎಂದು ಸದಸ್ಯ ಎನ್‌.ಮಹೇಶ್‌ ತಿಳಿಸಿದರು.

ಅಂಬೇಡ್ಕರ್‌ ಭವನಕ್ಕೆ ಹೆಚ್ಚುವರಿ ₹ 20 ಕೋಟಿ

‘ನಗರದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್‌ ಭವನಕ್ಕೆ ಇದುವರೆಗೆ ₹ 17.92 ಕೋಟಿ ಖರ್ಚಾಗಿದ್ದು, ಹೆಚ್ಚುವರಿ ₹ 20 ಕೋಟಿ ಅಗತ್ಯವಿದೆ’ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಪಿ.ಎಸ್.ಕಾಂತರಾಜು ಕೋರಿದರು.

ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದರು.

ಸಭೆಯ ಮುಕ್ತಾಯದ ಬಳಿಕ, ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.