ADVERTISEMENT

ಪೊಲೀಸ್ ಸಿಬ್ಬಂದಿಗೆ ಕೋವಿಡ್: ಕ್ವಾರಂಟೈನ್‌ಗೆ ಮೈಸೂರು ಎಸ್‌ಪಿ

ಕ್ವಾರಂಟೈನ್‌ಗೆ ಒಳಗಾದ ಹಿರಿಯ ಪೊಲೀಸ್ ಅಧಿಕಾರಿಗಳು: ಸೀಲ್‌ಡೌನ್‌ ಆದ ಠಾಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 3:31 IST
Last Updated 23 ಜೂನ್ 2020, 3:31 IST
ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಿರುವುದು
ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸೀಲ್‌ಡೌನ್ ಮಾಡಿರುವುದು   

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೊಲೀಸರನ್ನು ಬೆಂಬಿಡದೇ ಕಾಡುತ್ತಿದ್ದು, ದಕ್ಷಿಣ ವಲಯ ಐಜಿಪಿ ವಿಫುಲ್‌ಕುಮಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಹಾಗೂ ಎಎಸ್‌ಪಿ ಸ್ನೇಹಾ ಕ್ವಾರಂಟೈನ್‌ಗೆ ಒಳಗಾಗುವಂತೆ ಮಾಡಿದೆ.

ಸೋಮವಾರ ಒಬ್ಬರಿಗೆ ಮಾತ್ರವೇ ಸೋಂಕು ದೃಢವಾಗಿದ್ದರೂ, ಇವರ ಸಂಪರ್ಕಕ್ಕೆ ಬಂದ 58 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ವಾರಂಟೈನ್‌ಗೆ ಒಳಗಾಗುವಂತೆ ಮಾಡಿದೆ. ಇವರು ಕಾರ್ಯನಿರ್ವಹಿಸುತ್ತಿದ್ದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಮೀಪದ ಡಿವೈಎಸ್‌ಪಿ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಶನಿವಾರವಷ್ಟೇ 14 ಹಾಗೂ ಭಾನುವಾರ 3 ಮಂದಿ ಪೊಲೀಸರು ಸೋಂಕಿತರಾಗಿದ್ದರು. ಇವರೆಲ್ಲರೂ ಬೆಂಗಳೂರಿನ ಪಾದರಾಯನಪುರಕ್ಕೆ ಕರ್ತವ್ಯಕ್ಕೆ ತೆರಳಿದ್ದ ಕೆಎಸ್‌ಆರ್‌ಪಿ ಪೊಲೀಸರಾಗಿದ್ದರು. ಆದರೆ, ಸೋಮವಾರ ಸೋಂಕು ತಗುಲಿರುವ ವ್ಯಕ್ತಿಗೆ ಈ ಹಿನ್ನೆಲೆ ಇಲ್ಲದಿರುವುದು ಪೊಲೀಸರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

ಇವರು ಜಿಲ್ಲಾ ಎಸ್‌.ಪಿ ಕಚೇರಿಗೆ ಭೇಟಿ ನೀಡಿದ್ದರು ಎಂಬ ಕಾರಣಕ್ಕೆ ಎಲ್ಲ ಸಿಬ್ಬಂದಿಗೆ ರಜೆ ನೀಡಲಾಗಿದೆ. ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಸದ್ಯ, ಸೋಂಕಿತ 46 ವರ್ಷದ ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿಗೆ ಕೊರೊನಾ ಸೋಂಕಿತರ ಸಂಖ್ಯೆ 170ನ್ನು ತಲುಪಿದೆ. 9ರಿಂದ 85 ವರ್ಷದೊಳಗಿನ 58 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತನಿಖಾ ತಂಡದಲ್ಲಿದ್ದ ಸೋಂಕಿತ ವ್ಯಕ್ತಿ: ಸೋಮವಾರ ಸೋಂಕಿತರಾದ ವ್ಯಕ್ತಿಯು ತಿ.ನರಸೀಪುರ ಠಾಣೆಯಲ್ಲಿ ಬುಲೆಟ್ ನಾಪತ್ತೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ತಂಡದಲ್ಲಿದ್ದರು. ಹೀಗಾಗಿಯೇ, ಇವರು ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದರು. ತನಿಖೆಯ ಉದ್ದೇಶದಿಂದ ಇವರು ಬೆಂಗಳೂರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಬಂದ ನಂತರ ಇವರಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿವೆ. ಪರೀಕ್ಷೆ ನಡೆಸಿದಾಗ ಕೋವಿಡ್ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

26 ಮಂದಿ‌ ಕ್ವಾರಂಟೈನ್‌

ನಂಜನಗೂಡುನಗರದ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯ ಸಂಪರ್ಕಕ್ಕೆ ಬಂದ 26 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇವರನ್ನು ವಿವಿಧ ಖಾಸಗಿ ವಸತಿಗೃಹಗಳಲ್ಲಿ ಇರಿಸಲಾಗಿದೆ.

ಸೀಲ್‌ಡೌನ್‌ ಆಗಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಬದಲಿಗೆ ನಗರ ಪೊಲೀಸ್ ಠಾಣೆಯಲ್ಲೇ ತಾತ್ಕಾಲಿಕವಾಗಿ ಗ್ರಾಮಾಂತರ ಠಾಣೆಯನ್ನು ತೆರೆಯಲಾಗಿದೆ. ನಗರ ಠಾಣೆಯ ಎಸ್.ಐ. ರವಿಕುಮಾರ್ ಅವರಿಗೆ ಗ್ರಾಮಾಂತರ ಠಾಣೆಯ ಉಸ್ತುವಾರಿ ನೀಡಲಾಗಿದೆ.

ರಾಷ್ಟ್ರಪತಿ ರಸ್ತೆಯ 5ನೇ ತಿರುವಿನ ನಿವಾಸಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಮರುಕಳಿಸುತ್ತಿರುವುದರಿಂದ ನಗರಸಭೆ, ತಹಶೀಲ್ದಾರ್ ಕಚೇರಿಗಳನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಕಚೇರಿ ಪ್ರವೇಶಿಸುವವರಿಗೆ ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಂಡು, ಸ್ಯಾನಿಟೈಸರ್ ನೀಡಿ ಒಳಗೆ ಬಿಡಲಾಗುತ್ತಿದೆ. ಕಚೇರಿಗಳಿಗೆ ಸಾರ್ವಜನಿಕರ ಅನಗತ್ಯ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.