ADVERTISEMENT

ದಸರೆಗೆ ಎರಡೇ ದಿನ: ಚಾಮುಂಡಿಬೆಟ್ಟಕ್ಕೆ ನಾಲ್ಕು ದಿನ ನಿರ್ಬಂಧ, ಸಿದ್ಧತೆ ಜೋರು

ಗಜಪಡೆ ತಾಲೀಮು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 6:24 IST
Last Updated 15 ಅಕ್ಟೋಬರ್ 2020, 6:24 IST
ಮೈಸೂರಿನ ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ಮಾಡಿರುವ ದೀಪಾಲಂಕಾರದ ಬೆಡಗು
ಮೈಸೂರಿನ ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ಮಾಡಿರುವ ದೀಪಾಲಂಕಾರದ ಬೆಡಗು   

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೆ ಕೇವಲ ಎರಡು ದಿನ ಬಾಕಿ ಇದ್ದು, ಅರಮನೆ ಹಾಗೂ ಚಾಮುಂಡಿಬೆಟ್ಟದಲ್ಲಿ ಸಿದ್ಧತೆ ಮತ್ತಷ್ಟು ಚುರುಕು ಪಡೆದುಕೊಂಡಿದೆ.

ಕೋವಿಡ್‌–19 ಮುಂಜಾಗ್ರತಾ ಕ್ರಮವಾಗಿ ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ನಾಲ್ಕು ದಿನ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಅ. 14ರಿಂದ ಅ.18ರ ಮಧ್ಯರಾತ್ರಿಯವರೆಗೆ ಮತ್ತು ಅ.23ರ ಬೆಳಿಗ್ಗೆ 5 ಗಂಟೆಯಿಂದ ನ.1ರ ಮಧ್ಯರಾತ್ರಿಯವರೆಗೆ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ತುರ್ತು ವಾಹನ ಹೊರತುಪಡಿಸಿ, ಖಾಸಗಿ ವಾಹನಗಳಿಗೆ, ಸಾರ್ವಜನಿಕರಿಗೆ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ. ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

ADVERTISEMENT

ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ 17ರಂದು (ಶನಿವಾರ) ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮ್ಮುಖದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಚಾಲನೆ ನೀಡಲಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಶುದ್ಧೀಕರಣಗೊಳಿಸಿ ಸಿದ್ಧಪಡಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿತ 200 ಮಂದಿಗೆ ಮಾತ್ರ ಪ್ರವೇಶವಿರಲಿದೆ. ವರ್ಚ್ಯುಯಲ್ ವೇದಿಕೆ ಮೂಲಕ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಜಿಲ್ಲಾಡಳಿತ ವತಿಯಿಂದ ಬೆಟ್ಟದಲ್ಲಿ ಪೂರ್ವಸಿದ್ಧತೆ ಭರದಿಂದ ಸಾಗಿದೆ. ಅದಕ್ಕಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇಗುಲದಲ್ಲಿ ಎಂದಿನಂತೆ ಪೂಜಾ ಕೈಂಕರ್ಯಗಳು ನೆರವೇರಲಿವೆ. ಅಲ್ಲದೇ ಸಾರ್ವಜನಿಕರು ಮೆಟ್ಟಿಲ ಮೂಲಕವೂ ಬೆಟ್ಟಕ್ಕೆ ತೆರಳುವಂತಿಲ್ಲ. ಯಾವುದೇ ರೀತಿಯ ಪ್ರಸಾದ ಹಂಚಿಕೆ ಮಾಡುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಆನೆಗಳಿಗೆ ತಾಲೀಮು: ಅರಮನೆ ಆವರಣದಲ್ಲಿ ಗಜಪಡೆಗೆ ತಾಲೀಮು ಮುಂದುವರಿದಿದೆ. ಕ್ಯಾಪ್ಟನ್‌ ಅಭಿಮನ್ಯು ಮೇಲೆ 600 ಕೆ.ಜೆ. ತೂಕದ ಮರಳು ಮೂಟೆ ಹೊರಿಸಿ ತರಬೇತಿ ನೀಡಲಾಗುತ್ತಿದೆ. ಇನ್ನು 2–3 ದಿನಗಳಲ್ಲಿ ಮರದ ಅಂಬಾರಿ ಕಟ್ಟಿ, ಅದರೊಳಗೆ ಮರಳು ಮೂಟೆ ಇಟ್ಟು ತಾಲೀಮು ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜು ತಿಳಿಸಿದ್ದಾರೆ.

17ರಿಂದ ಅರಮನೆ ಪ್ರವೇಶಕ್ಕೆ ನಿರ್ಬಂಧ

ದಸರೆ ಪ್ರಯುಕ್ತ ರಾಜವಂಶಸ್ಥರು ಧಾರ್ಮಿಕ ಪೂಜಾ ಕೈಂಕರ್ಯ ಕೈಗೊಳ್ಳುವುದರಿಂದ, ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದರಿಂದಹಾಗೂ ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಅ. 17ರಿಂದ ನ. 1ರವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ತಿಳಿಸಿದ್ದಾರೆ.

ಶರನ್ನವರಾತ್ರಿ ಆಚರಣೆ ಪ್ರಯುಕ್ತ, ಅರಮನೆಯಲ್ಲಿ ಸಂಪ್ರದಾಯದಂತೆ ಸರಳವಾಗಿ ಖಾಸಗಿ ದರ್ಬಾರ್ ನಡೆಸಲು ರಾಜವಂಶಸ್ಥರಿಂದ ಸಿದ್ಧತೆಗಳು ನಡೆಯುತ್ತಿವೆ.

17ರಿಂದಲೇ ನಿತ್ಯ ಸಂಜೆ 7ರಿಂದ 9 ಗಂಟೆವರೆಗೆ ಅರಮನೆಯು ದೀಪಾಲಂಕಾರದಿಂದ ಕಂಗೊಳಿಸಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.