ADVERTISEMENT

ಪ್ರಾಚ್ಯವಿದ್ಯಾ ಸಂಶೋಧನಾಲಯ ಜಿಜ್ಞಾಸುಗಳಿಗೆ ಮುಕ್ತ: ಪ್ರೊ.ಎನ್.ಕೆ.ಲೋಕನಾಥ್

133ನೇ ಸಂಸ್ಥಾಪನಾ ದಿನಾಚರಣೆ; ನೂತನ ವೆಬ್‌ಸೈಟ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 14:34 IST
Last Updated 22 ಅಕ್ಟೋಬರ್ 2024, 14:34 IST
ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಅಲಂಕಾರಸುಧಾನಿಧಿ’ ಗ್ರಂಥವನ್ನು ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಬಿಡುಗಡೆಗೊಳಿಸಿದರು. ಡಿ.ಪಿ.ಮಧುಸೂದನಾಚಾರ್ಯ, ಬಿ.ಎನ್.ಶಶಿಕಿರಣ್, ಶತಾವಧಾನಿ ಆರ್.ಗಣೇಶ್‌,  ಪ್ರೊ.ಎನ್.ಕೆ.ಲೋಕನಾಥ್, ವಿ.ಆರ್.ಶೈಲಜಾ, ರೇಖಾ ಪಾಲ್ಗೊಂಡಿದ್ದರು
ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಅಲಂಕಾರಸುಧಾನಿಧಿ’ ಗ್ರಂಥವನ್ನು ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಬಿಡುಗಡೆಗೊಳಿಸಿದರು. ಡಿ.ಪಿ.ಮಧುಸೂದನಾಚಾರ್ಯ, ಬಿ.ಎನ್.ಶಶಿಕಿರಣ್, ಶತಾವಧಾನಿ ಆರ್.ಗಣೇಶ್‌,  ಪ್ರೊ.ಎನ್.ಕೆ.ಲೋಕನಾಥ್, ವಿ.ಆರ್.ಶೈಲಜಾ, ರೇಖಾ ಪಾಲ್ಗೊಂಡಿದ್ದರು   

ಮೈಸೂರು: ‘ಜ್ಞಾನ ಪ್ರಸಾರಕ್ಕಾಗಿ ಸ್ಥಾಪನೆಗೊಂಡ ಪ್ರಾಚ್ಯವಿದ್ಯಾ ಸಂಶೋಧನಾಲಯವು ಇಂದು ಅಧಿಕೃತ ಜಾಲತಾಣ ಉದ್ಘಾಟನೆ ಮೂಲಕ ಪ್ರಪಂಚದಾದ್ಯಂತ ಜಿಜ್ಞಾಸುಗಳಿಗೆ ಮುಕ್ತವಾಗಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ 133ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ‘ಸತ್ಯಾ–ಭದ್ರ ಕೃತಿ ಸಮೀಕ್ಷಾ’ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ‘ಅಲಂಕಾರಸುಧಾನಿಧಿ’ ಗ್ರಂಥ ಹಾಗೂ ಸಂಶೋಧನಾಲಯದ ನೂತನ ವೆಬ್‌ಸೈಟ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘1891ರಲ್ಲಿ ಹತ್ತನೇ ಚಾಮರಾಜ ಒಡೆಯರ್ ಸ್ಥಾಪಿಸಿದ್ದ ಪ್ರಾಚ್ಯವಿದ್ಯಾ ಸಂಶೋಧನಾಲಯವು ಮೈಸೂರು ವಿಶ್ವವಿದ್ಯಾಲಯಕ್ಕಿಂತಲೂ ಪುರಾತನ ಸಂಸ್ಥೆಯಾಗಿದೆ. ಸಂಸ್ಕೃತ ಕ್ಷೇತ್ರಕ್ಕೆ ಎರಡು ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ರಾಮಭದ್ರಾಚಾರ್ಯ ಹಾಗೂ ಸತ್ಯವೃತಾಶಾಸ್ತ್ರಿಗಳ ಕೃತಿಗಳ ಕುರಿತ ವಿಚಾರ ಸಂಕಿರಣ ನಡೆಯುತ್ತಿರುವುದು ಸಂತೋಷದ ಸಂಗತಿ’ ಎಂದರು.

ADVERTISEMENT

‘ಪ್ರಪಂಚದ ಯಾವುದೇ ಭಾಗದಿಂದ ಅಂತರ್ಜಾಲದ ಮೂಲಕ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ಯಾವುದೇ ಪುಸ್ತಕವನ್ನು ನೋಡಲು ಸಾಧ್ಯವಾಗುವಂತೆ ವೆಬ್‌ಸೈಟ್ ಅನ್ನು ವಿನ್ಯಾಸ ಮಾಡಿರುವುದು ಪ್ರಾಚ್ಯವಿದ್ಯಾ ಸಂಶೋಧನಾಲಯಕ್ಕೆ ಹೆಮ್ಮೆ ತರಲಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು.

ವಿಶ್ವವಿದ್ಯಾಲಯ ಕುಲಸಚಿವೆ ವಿ.ಆರ್.ಶೈಲಜಾ, ಹಣಕಾಸು ಅಧಿಕಾರಿ ರೇಖಾ, ಶತಾವಧಾನಿ ಆರ್.ಗಣೇಶ್‌, ಸಂಶೋಧನಾಲಯ ನಿರ್ದೇಶಕ ಡಿ.ಪಿ.ಮಧುಸೂದನಾಚಾರ್ಯ, ಬಿ.ಎನ್.ಶಶಿಕಿರಣ್ ಉಪಸ್ಥಿತರಿದ್ದರು.

ವಿಜಯನಗರ ಕಾಲದ ‘ಅಲಂಕಾರಸುಧಾನಿಧಿ’

‘ವಿಜಯನಗರ ಸಾಮ್ರಾಜ್ಯದ ದೊರೆಗಳಾದ ಹಕ್ಕಬುಕ್ಕ ಹಾಗೂ ಹರಿಹರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಶ್ರೇಷ್ಠ ಕೃತಿಕಾರ ಸಾಯಣಾಚಾರ್ಯರು ಅಲಂಕಾರಶಾಸ್ತ್ರದ ಕುರಿತು ರಚಿಸಿದ ‘ಅಲಂಕಾರಸುಧಾನಿಧಿ’ ಗ್ರಂಥ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ’ ಎಂದು ಪ್ರೊ.ಎನ್‌.ಕೆ.ಲೋಕನಾಥ್‌ ಹೇಳಿದರು. ‘ಈ ಗ್ರಂಥವೂ ಸಂಶೋಧನಾಲಯದ ಸಂಗ್ರಹದಲ್ಲಿತ್ತು. ಇದನ್ನು ಅಧ್ಯಯನ ಮಾಡಿ ಯಥಾವತ್ತಾಗಿ ಸಂಪಾದಿಸಿದ ಶತಾವಧಾನಿ ಆರ್.ಗಣೇಶ್‌ ಹಾಗೂ ಅವರ ಶಿಷ್ಯ ಶಶಿಕಿರಣ್ ಬಹಳ ಅಚ್ಚುಕಟ್ಟಾಗಿ ಮರು ಮುದ್ರಣ ಮಾಡಿಕೊಟ್ಟಿದ್ದಾರೆ. ಸಂಪೂರ್ಣ ಮುದ್ರಣ ವೆಚ್ಚವನ್ನು ಭರಿಸಿದ್ದಾರೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ’ ಎಂದು ಹಾರೈಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.