ADVERTISEMENT

ಅತಿವೃಷ್ಟಿ: ವರುಣಾ ಭಾಗದಲ್ಲಿ ಭತ್ತದ ಫಸಲು ಕುಂಠಿತ

ಕಾಳು ಕಟ್ಟುವ ಸಂದರ್ಭದಲ್ಲಿ ಅತಿ ಹೆಚ್ಚು ಮಳೆ; ಬೆಳೆ ನಾಶದಿಂದ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 6:29 IST
Last Updated 15 ಜನವರಿ 2022, 6:29 IST
ಸುತ್ತೂರಿನಲ್ಲಿ ಬಸವಣ್ಣ ಮನೆ ಮುಂದೆ ಭತ್ತವನ್ನು ಚೀಲಕ್ಕೆ ಹಾಕಿದ ಕಾರ್ಮಿಕರು
ಸುತ್ತೂರಿನಲ್ಲಿ ಬಸವಣ್ಣ ಮನೆ ಮುಂದೆ ಭತ್ತವನ್ನು ಚೀಲಕ್ಕೆ ಹಾಕಿದ ಕಾರ್ಮಿಕರು   

ವರುಣಾ: ಈ ಬಾರಿ ಅತಿವೃಷ್ಟಿಯಿಂದ ಭತ್ತದ ಫಸಲು ಅರ್ಧದಷ್ಟು ಕಡಿಮೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುತ್ತೂರು, ಕುಪ್ಪೇಗಾಲ, ಹೊಸ ಕೋಟೆ, ತುಮ್ಮನೇರಳೆ, ಎಡಕೊಳ, ತಾಯೂರು, ನಗರ್ಲೆ, ಕುಪ್ಪರವಳ್ಳಿ ಭಾಗದ ಕಬಿನಿ ಎಡ ಹಾಗೂ ಬಲದಂಡೆ ಕಾಲುವೆ ಮೂಲಕ ಬೆಳೆದ ಭತ್ತದ ಉತ್ಪಾದನೆ ಕಡಿಮೆಯಾಗಿದೆ. ರೈತರು ನಿರೀಕ್ಷಿಸಿದಷ್ಟು ಫಸಲು ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ.

ಭತ್ತವು ಕಾಳು ಕಟ್ಟುವ ಸಂದರ್ಭ ದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಭತ್ತ ಜೊಳ್ಳಾಗಿ ಫಸಲು ಕಡಿಮೆಯಾಗಿದೆ. ಅಲ್ಲದೆ, ಭತ್ತದ ಪೈರು ನೆಲಕಚ್ಚಿ ಸಾಕಷ್ಟು ಹಾನಿ ಸಂಭವಿಸಿದೆ.

ADVERTISEMENT

ಆಳುಗಳ ಕೊರತೆಯಿಂದ ರೈತರು ಯಂತ್ರಗಳ ಮೊರೆ ಹೋಗಿರುವುದು ಕೂಡ ಖರ್ಚು ಹೆಚ್ಚಾಗಲು ಕಾರಣವಾಗಿದೆ.

‘ಕಳೆದ ವರ್ಷ ನಾಲ್ಕೂವರೆ ಎಕರೆ ಪ್ರದೇಶದಲ್ಲಿ 160 ಮೂಟೆ ಭತ್ತ ಬೆಳೆದಿದ್ದೆ. ಆದರೆ, ಈ ವರ್ಷ 85 ಮೂಟೆ ಮಾತ್ರ ಬಂದಿದೆ’ ಎಂದು ಸುತ್ತೂರು ರೈತ ಲೋಕೇಶ್ ಅಳಲು ತೋಡಿಕೊಂಡರು.

‘ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಭತ್ತದ ಫಸಲು ಕಡಿಮೆಯಾಗಿದೆ. ಒಂದು ಎಕರೆಯಲ್ಲಿ 40 ಮೂಟೆ ಬದಲಿಗೆ 20 ಮೂಟೆ ಭತ್ತ ಸಿಕ್ಕಿದೆ’ ಎಂದು ರೈತ ಶಿವಸ್ವಾಮಿ ತಿಳಿಸಿದರು.

ಭತ್ತ ಖರೀದಿ ಕೇಂದ್ರದಲ್ಲಿ ದರ ಹಾಗೂ ಅಳತೆಯಲ್ಲಿ ಕಡಿತವಾಗುವುದರಿಂದ ಬಿಳಿಗೆರೆ ರೈತ ಕೇಂದ್ರದ ಕಡೆ ರೈತರು ಮುಖ ಮಾಡಿಲ್ಲ. ದಲ್ಲಾಳಿಗಳ ಮೊರೆ ಹೋಗುತ್ತಿದ್ದಾರೆ.

ಕಳೆದ ಬಾರಿ ಜ್ಯೋತಿ ಭತ್ತ ಪ್ರತಿ ಕ್ವಿಂಟಲ್‌ಗೆ ₹2,700, ಸಣ್ಣ ಭತ್ತ ₹2,000 ಇತ್ತು. ಈ ಬಾರಿ ಕ್ರಮವಾಗಿ ₹2,000 ಹಾಗೂ ₹1,700 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.