ಭ್ರಷ್ಟಾಚಾರ
ನಂಜನಗೂಡು: ‘ತಾಲ್ಲೂಕಿನ ದೇವರಸನಹಳ್ಳಿ ಪಂಚಾಯಿತಿಯಲ್ಲಿ ಪಿಡಿಒಗಳು ಕಳೆದ 5 ವರ್ಷಗಳಲ್ಲಿ ₹2 ಕೋಟಿ ಅನುದಾನವನ್ನು ದುರ್ಬಳಕೆ ಮಾಡಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗ ದೂರು ನೀಡಲಾಗುವುದು’ ಎಂದು ಗ್ರಾ.ಪಂ. ಮಾಜಿ ಸದಸ್ಯ ಮಂಡ್ಯ ಮಹದೇವು ಆರೋಪಿಸಿದರು.
ಇಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವರಸನಹಳ್ಳಿ ಪಂಚಾಯಿತಿಯಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆಂದು ₹2 ಲಕ್ಷ ಅನುದಾನದ ಕ್ರಿಯಾಯೋಜನೆ ರೂಪಿಸಿ ಬೇರೆ ಅನುದಾನ ಬಳಸಿ ನಿರ್ಮಾಣ ಮಾಡಿದ್ದಾರೆ. 2025ನೇ ಸಾಲಿನ ಗ್ರಾಮ ವಿಕಾಸ ಯೋಜನೆ ಅಡಿ ಚರಂಡಿ ನಿರ್ಮಾಣಕ್ಕೆ ಮಂಜೂರಾದ ₹2.40 ಲಕ್ಷ ಅನುದಾನವನ್ನು ಚರಂಡಿ ನಿರ್ಮಾಣ ಕಾಮಗಾರಿ ನಡೆಸದೆ ದುರ್ಬಳಕೆ ಮಾಡಿಕೊಂಡದ್ದಾರೆ’ ಎಂದು ಆರೋಪಿಸಿದರು.
‘ತಾಲೂಕು ಪಂಚಾಯಿತಿ ಇಒ ಸೇರಿದಂತೆ ಉನ್ನತ ಅಧಿಕಾರಿಗಳ ಬೆಂಬಲದಿಂದ ಕಳೆದ 5 ವರ್ಷಗಳಲ್ಲಿ ಪಂಚಾಯಿತಿಯಲ್ಲಿ ಪಿಡಿಒಗಳು ಸರ್ಕಾರದ ಅನುದಾನ ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ, ಆರ್‌ಟಿಐ ಮೂಲಕ ಸೂಕ್ತ ದಾಖಲಾತಿಗಳನ್ನು ತೆಗೆದುಕೊಂಡಿದ್ದೇನೆ, ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒ, ಸರ್ಕಾರದ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಕೂಡಲೇ ಜಿಲ್ಲಾ ಪಂಚಾಯಿತಿ ಸಿಇಒ ಸಂಬಂಧಪಟ್ಟವರ ಮೇಲೆ ಮೋಕದಮೆ ದಾಖಲಿಸಿ ಕ್ರಮ ಕೈಗೊಳ್ಳದಿದ್ದಲ್ಲಿ, ಲೋಕಾಯುಕ್ತ ಕಚೇರಿಗೆ ದೂರು ನೀಡಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಕಳೆದ 5 ವರ್ಷ ಮಂಡ್ಯ ಮಹದೇವು ಅವರು ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಪಂಚಾಯಿತಿ ನಿರ್ಣಯದಂತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿ, ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಸುಳ್ಳು ಅರೋಪ ಮಾಡುತ್ತಿದ್ದಾರೆ. ನಾನು ಯಾವುದೇ ತನಿಖೆಗೂ ಸಿದ್ಧನಿದ್ದೇನೆ’ ಎಂದು ಪಿಡಿಒ ಯಾಸಿನ್ ಷರೀಫ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.