ADVERTISEMENT

ಪ್ರತಾಪ ಸಿಂಹ ಜನತೆಗೆ ಸ್ಪಷ್ಟನೆ ನೀಡಲಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 15:15 IST
Last Updated 14 ಡಿಸೆಂಬರ್ 2023, 15:15 IST
ಎಂ.ಲಕ್ಷ್ಮಣ್‌
ಎಂ.ಲಕ್ಷ್ಮಣ್‌   

ಮೈಸೂರು: ‘ಭದ್ರತಾ ವೈಫಲ್ಯದಿಂದ ಸದನದ ಕಲಾಪ ನಡೆಯುವ ಜಾಗಕ್ಕೆ ಯುವಕರು ಜಿಗಿದ ಪ್ರಕರಣದಲ್ಲಿ ಸಂಸದ ಪ್ರತಾಪ ಸಿಂಹ ವಿರುದ್ಧ ಆರೋಪ ಬಂದರೂ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಮುಂದೆ ಬಂದು ಸತ್ಯಾಸತ್ಯತೆ ತಿಳಿಸಬೇಕು. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸದಿರುವ ಕಾರಣ ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಒತ್ತಾಯಿಸಿದರು.

ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಸದರು ಕೋಮುವಾದವನ್ನು ಪ್ರಚೋದಿಸಿದ್ದರೇ ಹೊರತು ಜನಸಾಮಾನ್ಯರಿಗಾಗಿ ಕೆಲಸ ಮಾಡಿಲ್ಲ. ಪ್ರತಿಯೊಂದು ವಿಚಾರಕ್ಕೂ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ವಿಷಯ ಹಂಚಿಕೊಳ್ಳುತ್ತಿದ್ದವರು, ಪಾಸ್‌ ನೀಡಿದ ಬಗ್ಗೆ ಸ್ಪಷ್ಟನೆ ನೀಡದೆ ಸುಮ್ಮನಾಗಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಆಕ್ಷೇಪಿಸಿದರು.

‘ಮನೋರಂಜನ್‌, ಆತನ ತಂದೆ ಹಾಗೂ ಪ್ರತಾಪ ಸಿಂಹ ಅವರಿಗಿರುವ ಸಂಪರ್ಕವೇನು, ಗೂಗಲ್ ಪೇಯಿಂದ ಆರೋಪಿಗೆ ಎಷ್ಟು ಹಣ ಸಂದಾಯವಾಗಿದೆ, ಆತ ನಿಮ್ಮ ಐಟಿ ಸೆಲ್‌ನಲ್ಲಿ ಅನಧಿಕೃತವಾಗಿ ಗುರುತಿಸಿಕೊಂಡಿರಲಿಲ್ಲವೇ, ಇವರ ಹಿನ್ನೆಲೆ ತಿಳಿಯದೆ ಹೇಗೆ ಸಹಿ ಮಾಡಿದಿರಿ, ಯಾವ ಜಾಗದಲ್ಲಿ ಸಹಿ ಹಾಕಿದ್ದೀರಿ, ಕಳೆದ ನಾಲ್ಕು ತಿಂಗಳಲ್ಲಿ ನೀವು ಇದೇ ಆರೋಪಿಗಳನ್ನು ಅಮಿತ್‌ ಶಾ ಹಾಗೂ ಸ್ಥಳೀಯ ಆರ್‌ಎಸ್‌ಎಸ್‌ ಮುಖಂಡರೊಬ್ಬರಿಗೆ ಭೇಟಿ ಮಾಡಿಸಿರಲಿಲ್ಲವೇ, ಅವರು ಯಾವತ್ತೂ ನಿಮ್ಮ ಮನೆಯಲ್ಲಿ ವಾಸ್ತವ್ಯ ಹೂಡಿಲ್ಲವೇ ಎಂಬ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು. ಇದಕ್ಕೆ ಸಂಬಂಧಿಸಿದ ಕೆಲವು ದಾಖಲೆ ನಮ್ಮಲ್ಲಿದೆ. ಕೇಂದ್ರದ ಗುಪ್ತಚರ ತಂಡ ವಿಚಾರಣೆ ನಡೆಸಿದಾಗ ಅವನ್ನು ನೀಡುತ್ತೇವೆ’ ಎಂದರು.

ADVERTISEMENT

ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್‌ ಮಾತನಾಡಿ, ‘ಪ್ರಜಾಪ್ರತಿನಿಧಿ ಕಾಯ್ದೆಯನ್ನು ಬಿಜೆಪಿ ಅವರ ಸ್ವಂತಕ್ಕಾಗಿ ಬಳಸುತ್ತಿದೆ. ಅವರ ವಿರುದ್ಧ ಆರೋಪ ಮಾಡುತ್ತಿದ್ದ ರಾಹುಲ್‌ ಗಾಂಧಿ, ಮಹುವಾ ಮೊಹಿತ್ರಾ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದರು. ಈ ಪ್ರಕರಣದಲ್ಲಿ ಪ್ರತಾಪ ಸಿಂಹ ಹೆಸರು ಕೇಳಿ ಬಂದಿರುವ ಬಗ್ಗೆಯೂ ವಿಚಾರಣೆ ನಡೆಸಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬೇಕು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯ ಮೂಲಕ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ನಾಗಭೂಷಣ್, ಮಹೇಶ್‌, ಬಿ.ಎಂ.ರಾಮು, ಗಿರೀಶ್‌ ಇದ್ದರು.

‘ಅಮಿತ್‌ ಶಾ ರಾಜೀನಾಮೆ ನೀಡಲಿ’
‘ಇದು ದೇಶದ ಸುರಕ್ಷತೆಯ ವಿಚಾರ. ಸರಳವಾಗಿ ಗಾಳಿಗೆ ತೂರಲು ಸಾಧ್ಯವಿಲ್ಲ. ದೇಶದ ಸಂಸತ್‌ಗೆ ರಕ್ಷಣೆ ನೀಡಲು ಸಾಧ್ಯವಾಗದವರು ಜನಸಾಮಾನ್ಯರಿಗೆ ರಕ್ಷಣೆ ನೀಡಲು ಹೇಗೆ ಸಾಧ್ಯ. ಸಣ್ಣ ವಿಚಾರಗಳ ಬಗ್ಗೆಯೂ ದೊಡ್ಡದಾಗಿ ಬಿಂಬಿಸುತ್ತಿದ್ದ ಬಿಜೆಪಿ ನಾಯಕರು ಈ ವಿಚಾರದಲ್ಲಿ ಸುಮ್ಮನಿರುವುದು ಗಮನಿಸಿದಾಗ ಆರೋಪವನ್ನು ಕಾಂಗ್ರೆಸ್‌ ಹೆಗಲಿಗೇರಿಸಲು ಹುನ್ನಾರ ನಡೆಯುತ್ತಿದೆ. ಈ ಯೋಜನೆ ಬಿಟ್ಟು ಭದ್ರತಾ ವೈಫಲ್ಯವಾಗಿರುವುದನ್ನು ಒಪ್ಪಿಕೊಂಡು ಗೃಹಸಚಿವ ಅಮಿತ್‌ ಶಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ’ ಎಂದು ಎಂ.ಲಕ್ಷ್ಮಣ್‌ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.