ADVERTISEMENT

ಜನರ ನಿದ್ದೆಗೆಡಿಸಿದ ಪುಂಡರು

ಸರಸ್ವತಿಪುರಂ ಮಗ್ಗುಲಲ್ಲೇ ರೌಡಿಗಳ ಸಾಮ್ರಾಜ್ಯ

ಕೆ.ಎಸ್.ಗಿರೀಶ್
Published 2 ಸೆಪ್ಟೆಂಬರ್ 2021, 2:59 IST
Last Updated 2 ಸೆಪ್ಟೆಂಬರ್ 2021, 2:59 IST

ಮೈಸೂರು: ನಗರದ ಸುಶಿಕ್ಷಿತ ಬಡಾವಣೆ ಎನಿಸಿದ ಸರಸ್ವತಿಪುರಂ ಮಗ್ಗುಲಲ್ಲೇ ಪುಂಡರ ಗುಂಪುಗಳು ತಲೆ ಎತ್ತಿವೆ. ಜನತಾನಗರದ ಬಹುಪಾಲು ವ್ಯಾಪಾರಿಗಳನ್ನು ವಿವಿಧ ಗುಂಪುಗಳು ಇನ್ನಿಲ್ಲದಂತೆ ಕಾಡುತ್ತಿವೆ.

ಬೋಸಿ, ಡಾಕು, ಪಾಯಸ, ಟಿಬೆಟ್‌ ... ಹೀಗೆ ಅಡ್ಡಹೆಸರುಗಳನ್ನಿಟ್ಟುಕೊಂಡ ರೌಡಿಗಳು ಬೇರು ಬಿಟ್ಟಿದ್ದಾರೆ. ರಸ್ತೆಬದಿ ವ್ಯಾಪಾರಿಗಳನ್ನು ಗೋಳು ಹೊಯ್ದಕೊಳ್ಳುತ್ತಿದ್ದಾರೆ.

ಜನತಾನಗರದ ಗಣೇಶ್‌ಭಂಡಾರ್ ವೃತ್ತ, ಕಾಮಧೇನು ವೃತ್ತ, ಬೋಗಾದಿ ರಿಂಗ್‌ರಸ್ತೆ, ಟಿ.ಕೆ.ಬಡಾವಣೆಯ ಕೆಲವು ಪ್ರದೇಶಗಳಲ್ಲಿ ಪುಂಡಾಟಿಕೆ ಮಿತಿ ಮೀರಿದೆ. ಸಂಜೆಯಾಗುತ್ತಿದ್ದಂತೆ ರೌಡಿಗಳು ರಸ್ತೆ ಬದಿ ವ್ಯಾಪಾರಿಗಳ ಬಳಿ ಹಫ್ತಾ ವಸೂಲಾತಿಗಾಗಿ ರಸ್ತೆಗಿಳಿಯುತ್ತಿದ್ದಾರೆ.

ADVERTISEMENT

‘ರಸ್ತೆಬದಿ ಫಾಸ್ಟ್‌ಫುಡ್‌ ಮಳಿಗೆಗಳು, ಹಣ್ಣು, ತರಕಾರಿ ವ್ಯಾಪಾರಸ್ಥರು, ಸಣ್ಣಪುಟ್ಟ ಅಂಗಡಿಗಳು, ಮದ್ಯದ ಅಂಗಡಿಗಳು ಸೇರಿದಂತೆ ಹಲವರಿಂದ ನಿರಂತರವಾಗಿ ಹಣ ವಸೂಲು ಮಾಡುವ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.

‘ರಾತ್ರಿ ವೇಳೆ ಹಲವು ರಸ್ತೆಗಳಲ್ಲಿ ಸುಲಿಗೆಯಂತಹ ಪ್ರಕರಣಗಳೂ ಹೆಚ್ಚುತ್ತಿದೆ. ಇತ್ತೀಚೆಗೆ ಬಿಸಿಲುಮಾರಮ್ಮನ ದೇಗುಲದ ಮುಂಭಾಗ ದ್ವಿಚಕ್ರ ವಾಹನ ಸವಾರರನ್ನು ತಡೆದು ಸುಲಿಗೆ ಮಾಡಿದ ಕುರಿತು ದೂರನ್ನೂ ನೀಡಲಾಗಿತ್ತು. ಇಷ್ಟಾದರೂ, ಪೊಲೀಸರು ರೌಡಿಗಳನ್ನು ನಿಗ್ರಹಿಸಲು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ.

‘ಹೋಟೆಲ್‌ಗೆ ಬಂದು ಊಟಮಾಡಿ ಹಣ ಕೊಡದೇ ಹೋಗುವುದು ಸಾಮಾನ್ಯ ಎನ್ನುವಂತಾಗಿದೆ. ರಸ್ತೆಯಲ್ಲಿ ರೌಡಿ ತಂಡಗಳು ಬರುತ್ತಿದ್ದಂತೆ ಹೂ, ಹಣ್ಣು ಮಾರಾಟ ಮಾಡುವವರು ತಮ್ಮ ತಮ್ಮ ಬುಟ್ಟಿಗಳನ್ನು ಹೊತ್ತುಕೊಂಡು ಮನೆಯತ್ತ ಸಾಗುತ್ತಾರೆ. ’ಪೊಲೀಸರಿಗೆ ದೂರುವುದಕ್ಕೂ ಭಯವಾಗುತ್ತದೆ’ ಎನ್ನುತ್ತಾರೆ.

ಬೆಚ್ಚಿ ಬೀಳಿಸಿದ ಕೊಲೆ!: ಜನತಾನಗರದ ಸ್ಮಶಾನದ ಬಳಿ ರೌಡಿಶೀಟರ್‌ ಉಮೇಶ್‌ನನ್ನು ಕೊಲೆ ಮಾಡಿ ಹೂತು ಹಾಕಿದ ಸಂಗತಿ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ.

ಉಪವಿಭಾಗಾಧಿಕಾರಿ ಕಮಲಾಬಾಯಿ ಅವರ ಆದೇಶದ ಮೇರೆಗೆ ಕಾರ್ಯನಿರ್ವಾಹಕ ದಂಡಾಧಿಕಾರಿ ಎನ್‌.ವಿಶ್ವನಾಥ್‌ ಸಮ್ಮುಖದಲ್ಲಿ ಪೊಲೀಸರು ಬುಧವಾರ ಮೃತದೇಹವನ್ನು ಹೊರತೆಗೆದರು.

ಆ. 25ರಂದು ರಾತ್ರಿ ಬೋಗಾದಿ ಪೆಟ್ರೊಲ್ ಬಂಕ್ ಹಿಂಭಾಗ ಮದ್ಯ ಸೇವಿಸಿದ ಪೃಥ್ವಿ, ವಸಂತ್, ಮಂಜೇಶ್ ಹಾಗೂ ಸುಜೀತ್ ಎಂಬುವವರು ಉಮೇಶ್‌ನನ್ನು ಕೊಲೆ ಮಾಡಿ, ಸ್ಮಶಾನದ ಸಮೀಪ ಹೂತು ಹಾಕಿದರು ಎಂದು ಆರೋಪಿಸಲಾಗಿದೆ.

’ಒಬ್ಬ ಆರೋಪಿ, ಉಮೇಶ್‌ ಸ್ನೇಹಿತರಿಂದ ತೊಂದರೆಯುಂಟಾಗಬಹುದು ಎಂಬ ಭಯದಿಂದ ಕೊಲೆಯಾದ 5 ದಿನಗಳ ನಂತರ ಪೊಲೀಸರಿಗೆ ಶರಣಾಗಿದ್ದ. ವಿಚಾರಣೆ ಬಳಿಕ ಮೂವರು ಆರೋಪಿಗಳ ಹೆಸರು ಹೇಳಿದ್ದ. ಅವರನ್ನು ಬೆನ್ನಟ್ಟಿದ ಪಿಎಸ್‌ಐ ರಮೇಶ್, ಸಿಬ್ಬಂದಿ ಹರೀಶ್ ಹಾಗೂ ಮಲ್ಲಿಕಾರ್ಜುನ ಅವರ ತಂಡ ಯಶಸ್ವಿಯಾಗಿ ಮರಿಯಪ್ಪನಕೆರೆಯ ಸಮೀಪ ಹಿಡಿದರು’ ಎಂದು ಮೂಲಗಳು ತಿಳಿಸಿವೆ .ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡ ನಂತರ ಬೀಟ್‌ ಕಾನ್‌ಸ್ಟೆಬಲ್ ಅರ್ಜುನ್ ಹಾಗೂ ಗುಪ್ತಚರ ದಳದ ಹೆಡ್‌ಕಾನ್‌ಸ್ಟೆಬಲ್ ಎಲ್.ಎಂ.ಪ್ರಕಾಶ್ ಸಂಗ್ರಹಿಸಿದ ಮಾಹಿತಿ ಮೇರೆಗೆ ಆರೋಪಿಗಳ ಜಾಡು ಹಿಡಿಯಲಾಯಿತು ಎಂದು ಪೊಲೀಸರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.