ಹುಲಿ (ಪ್ರಾತಿನಿಧಿಕ ಚಿತ್ರ)
ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿ ಹೈರಿಗೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ರೈತ ತಮ್ಮೇಗೌಡ ಅವರಿಗೆ ಸೇರಿದ ಬೀನ್ಸ್ ಮತ್ತು ಅಡಿಕೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ದಿಕ್ಕಾಪಾಲಾಗಿ ಓಡಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದ ಬಳಿಕ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಫಯಾಜ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಂದಕುಮಾರ್ ಕಾರ್ಯಾಚರಣೆ ನಡೆಸಿದ್ದು, ಹುಲಿಯನ್ನು ರಾತ್ರಿ 7 ಗಂಟೆ ಆಸುಪಾಸಿನಲ್ಲಿ ಮುತ್ತುರಾಯನ ಹೊಸಹಳ್ಳಿ ವಲಯಕ್ಕೆ ಓಡಿಸುವಲ್ಲಿ ಸಫಲರಾದರು.
‘ಆನೆ ಬಳಸಿ ಹುಲಿ ಬಂಧಿಸುವ ಕಾರ್ಯಾಚರಣೆ ಏ.8ರ ಮಂಗಳವಾರ ಮುಂದುವರೆಯಲಿದೆ. ಈ ಹಿಂದೆ ಗುರುಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಹುಲಿ ಕಾಣಿಸಿತ್ತು, ಅಲ್ಲಿ ಬೋನು ಇಟ್ಟಿದ್ದು ಹುಲಿ ಬಿದ್ದಿರಲಿಲ್ಲ. ಹುಲಿ ಬಂಧಿಸಿ ಅರಣ್ಯದಂಚಿನ ಗ್ರಾಮಸ್ಥರಿಗೆ ನೀಡಲು ರಕ್ಷಣೆ ನೀಡಲು ಇಲಾಖೆ ಬದ್ಧ’ ಎಂದು ಡಿಸಿಎಫ್ 'ಪ್ರಜಾವಾಣಿ'ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.