
ಪಿರಿಯಾಪಟ್ಟಣ: ‘ವಕೀಲ ವೃತ್ತಿಯಲ್ಲಿ ಯಶಸ್ಸು ಕಾಣಲು ಸತತ ಅಧ್ಯಯನ ಮತ್ತು ತಾಳ್ಮೆ ಮುಖ್ಯ’ ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.
ಪಟ್ಟಣದ ವಕೀಲರ ಭವನದಲ್ಲಿ ಗುರುವಾರ ವಕೀಲರ ಸಂಘ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಸ್ವಇಚ್ಚೆಯಿಂದ ಈ ವೃತ್ತಿಗೆ ಬರುವವರಿಗಿಂತ ಬೇರೆ ಕಡೆ ಅವಕಾಶ ಸಿಗಲಿಲ್ಲ ಎಂಬ ಕಾರಣದಿಂದ ಬರುವವರೆ ಹೆಚ್ಚು. ವೃತ್ತಿ ಸ್ವೀಕರಿಸಿದ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿ ವಕೀಲಿಕೆ ನಡೆಸಿದರೆ ಉತ್ತಮ ಜೀವನ, ಉನ್ನತ ಹುದ್ದೆ ದೊರೆಯಲಿದೆ’ ಎಂದರು.
‘ಗ್ರಾಮೀಣ ಪ್ರದೇಶದ ವಕೀಲರು ವೃತ್ತಿಯ ಜೊತೆಗೆ ಕೃಷಿಯ ಮೇಲಿನ ಅವಲಂಬನೆ ಸಹ ಇರುವುದರಿಂದ ಸತತ ಅಧ್ಯಯನದಿಂದ ವಿಮುಖರಾಗಬಾರದು. ಕಾನೂನು ಕ್ಷೇತ್ರ ಸಮುದ್ರವಿದ್ದಂತೆ ಇಲ್ಲಿ ಆಳಕ್ಕೆ ಹೋದಂತೆಲ್ಲ ಹೆಚ್ಚು ಹೆಚ್ಚು ಕಲಿಯುವ ಅವಕಾಶವಿದೆ’ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮಾತನಾಡಿ, ‘ಉತ್ತಮ ಸಮವಸ್ತ್ರ ಧರಿಸುವುದು, ಉನ್ನತ ನಡೆ ನುಡಿಯೂ ಯಶಸ್ಸಿಗೆ ಸಹಕಾರಿ’ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ವೇತಾ ಮಾತನಾಡಿ, ‘ಕಿರಿಯ ವಕೀಲರು ನ್ಯಾಯಾಲಯದಲ್ಲಿ ಕಲಾಪವನ್ನು ಗಂಭೀರವಾಗಿ ವೀಕ್ಷಿಸಿ, ಸಂಶಯವಿದ್ದಲ್ಲಿ ಹಿರಿಯ ನ್ಯಾಯಾಧೀಶರ ಸಲಹೆ ಪಡೆಯುವ ಮೂಲಕ ಉತ್ತಮ ವಕೀಲರಾಗಿ ರೂಪುಗೊಳ್ಳಿ’ ಎಂದು ಸಲಹೆ ನೀಡಿದರು.
ವಕೀಲ ಕೆ.ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು. ವಕೀಲರಾದ ಗೋವಿಂದಗೌಡ, ಕೆ.ಎ.ಮಹದೇವಪ್ಪ, ವಕೀಲರ ಸಂಘದ ಅಧ್ಯಕ್ಷ ಧನಪಾಲ್ ಮಾತನಾಡಿದರು.
ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಕೀಲರ ಸಂಘದ ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಚಂದ್ರೇಗೌಡ, ಸಹಕಾರದರ್ಶಿ ಗುರುಪ್ರಸಾದ್, ಎಪಿಪಿಗಳಾದ ಶಿವಶಂಕರ್ ಗಾವಂಕರ್, ಉಮಾಲಕ್ಷ್ಮಿ, ಜಾನಕಿ ಹಾಜರಿದ್ದರು.
Highlights - ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾ ಕಿರಿಯ ವಕೀಲರು ಕಲಾಪ ವೀಕ್ಷಿಸಲು ಸಲಹೆ ಕಾನೂನು ಕ್ಷೇತ್ರ; ಕಲಿಯುವ ಅವಕಾಶ ಅಪಾರ
Quote - ಎಂ.ಆರ್.ಯೋಗೀಶ್ ಪ್ರಧಾನ ಸಿವಿಲ್ ನ್ಯಾಯಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.