ಮೈಸೂರು: ಇಲ್ಲಿನ ಅರಮನೆಯ ಖಾಸಗಿ ದರ್ಬಾರ್ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ‘ಪಟ್ಟದ ಆನೆ’ಯಾಗಿ ‘ಶ್ರೀಕಂಠ’ ಹಾಗೂ ‘ನಿಶಾನೆ ಆನೆ’ಯಾಗಿ ‘ಏಕಲವ್ಯ’ ಆಯ್ಕೆಯಾಗಿವೆ.
ನಗರದ ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಆನೆಗಳ ಮೈಕಟ್ಟು, ಗಾಂಭೀರ್ಯ ನೋಡಿ ಕಬ್ಬು ತಿನ್ನಿಸಿ ಆಯ್ಕೆ ಮಾಡಿದ್ದು, ಅರಣ್ಯ ಇಲಾಖೆಯು ಶುಕ್ರವಾರ ಪ್ರಕಟಿಸಿದೆ.
ದಸರೆಗೆ ಇದೇ ಮೊದಲ ಬಾರಿ ಬಂದಿರುವ ಅಜಾನುಬಾಹು ಆನೆ ‘ಶ್ರೀಕಂಠ’ ಈ ಬಾರಿ ಹೊಸ ಜವಾಬ್ದಾರಿ ನಿಭಾಯಿಸಲಿದ್ದು, ‘ಕಂಜನ್’ನ ಸ್ಥಾನ ತುಂಬಲಿದ್ದಾನೆ. ಕಳೆದ ಬಾರಿ ನಿಶಾನೆ ಆನೆಯಾಗಿದ್ದ ‘ಭೀಮ’ನ ಜಾಗಕ್ಕೆ ಸುಂದರ ಕಿವಿಯ ‘ಏಕಲವ್ಯ’ ಆಯ್ಕೆಯಾಗಿದ್ದಾನೆ.
ನವರಾತ್ರಿ ಆರಂಭಕ್ಕೆ 9 ದಿನವಷ್ಟೇ ಇದ್ದು, ಗುರುವಾರ ಸಂಜೆ ಪ್ರಶಾಂತ, ಧನಂಜಯ, ಗೋಪಿ, ಕಂಜನ್, ಭೀಮಾ, ಏಕಲವ್ಯ, ಶ್ರೀಕಂಠ, ಹೇಮಾವತಿ, ಕಾವೇರಿ ಆನೆಗಳು ಅರಮನೆಯ ಸವಾರಿ ತೊಟ್ಟಿಗೆ ಆಯ್ಕೆ ವೇಳೆ ಬಂದಿದ್ದವು. ಡಿಸಿಎಫ್ ಐ.ಬಿ.ಪ್ರಭುಗೌಡ ಎಲ್ಲ ಆನೆಗಳ ಮಾಹಿತಿ ನೀಡಿದರು. ನಿರೀಕ್ಷೆಯಂತೆ ಹೊಸ ಆನೆ ‘ಶ್ರೀಕಂಠ’ ಪಟ್ಟದಾನೆಯಾದ.
ಕೊಡಗಿನ ಶನಿವಾರಸಂತೆ ಅರಣ್ಯ ವಲಯದಲ್ಲಿ ‘ಶ್ರೀಕಂಠ’ ಆನೆಯನ್ನು 2014ರಲ್ಲಿ ಸೆರೆ ಹಿಡಿಯಲಾಗಿತ್ತು. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಬಳಿಕ ಸೆರೆ ಹಿಡಿದ ಮೊದಲ ಆನೆಯಾದ್ದರಿಂದ ಇವನನ್ನು ‘ಶ್ರೀಕಂಠ’ ಎಂದು ನಾಮಕರಣ ಮಾಡಲಾಗಿತ್ತು.
ಏಕಲವ್ಯನ ‘ಕಿವಿ’ ಸೊಗಸು:
ಮತ್ತಿಗೋಡು ಆನೆ ಶಿಬಿರದ ‘ಏಕಲವ್ಯ’ ಕಿವಿ ಅಪರೂಪದ್ದು. ಎಲ್ಲ ಆನೆಗಳ ಕಿವಿ ಮೇಲ್ಭಾಗವು ಮುಂಭಾಗಕ್ಕೆ ಮಡಚಿದ್ದರೆ, ಏಕಲವ್ಯನ ಕಿವಿ ಮೇಲಿನ ಭಾಗ ಹಿಂದೆ ಮಡಚುತ್ತದೆ. ಮತ್ತಿಗೋಡು ಆನೆ ಶಿಬಿರದಲ್ಲಿ ಅನುಭವಿ ‘ಅಭಿಮನ್ಯು’, ‘ಭೀಮ’ ಸೇರಿದಂತೆ ಅನುಭವಿ ಆನೆಗಳೊಂದಿಗೆ ಪಳಗಿದೆ.
ಆಯ್ಕೆ ಮಾಡಿದ ಪ್ರಮೋದಾದೇವಿ ಧಾರ್ಮಿಕ ಪೂಜೆಗಳಲ್ಲಿ ಭಾಗಿ ಏಕಲವ್ಯನ ‘ಕಿವಿ’ ಸೊಗಸು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.