ಮೈಸೂರು: ‘ಟಾಮಿ’, ‘ರೊಲೆಕ್ಸ್’, ‘ಟಾಫಿ’, ‘ಚಿನ್ನ’, ‘ರನ್ನ’, ‘ಪುಟಾಣಿ’, ‘ಸಚ್ಚಿ’, ‘ಗುಂಡುಮಣಿ’ ಎಂಬ ಅಕ್ಕರೆಯ ಹೆಸರುಗಳು ಅಲ್ಲಿ ಹೊಮ್ಮುತ್ತಿದ್ದವು. ವರ್ಷವೆಲ್ಲ ಪಾಲಕರು ಕಲಿಸಿದ ಪಾಠಗಳನ್ನು ಒಪ್ಪಿಸಲೇಬೇಕೆಂದು ಟ್ರಿಮ್ಮಾಗಿ ಬಂದಿದ್ದ ಮುದ್ದು ಶ್ವಾನ, ಬೆಕ್ಕುಗಳು ಸ್ಪರ್ಧಾ ಕಣದಲ್ಲಿ ಜಾದೂ ಮಾಡಿದೆವೆಂಬಂತೆ ಫೋಸು ಕೊಟ್ಟವು. ಬಹುಮಾನವಾಗಿ ಸಿಕ್ಕ ಟ್ರೋಫಿಗಳಿಗಿಂತಲೂ ಸಿಕ್ಕ ಪುಡಿತಿಂಡಿ ಮೆದ್ದು ಆಹಾರ ಪ್ರೀತಿಯನ್ನೂ ತೋರಿದವು!
ಇದು, ನಗರದ ಜೆ.ಕೆ.ಮೈದಾನದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ‘ರೈತ ದಸರಾ’ದ ಭಾಗವಾಗಿ ಪಶು ಸಂಗೋಪನಾ ಇಲಾಖೆಯು ಭಾನುವಾರ ಆಯೋಜಿಸಿದ್ದ ಮುದ್ದುಪ್ರಾಣಿಗಳ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯವಿದು.
ಅಲ್ಲಿ ಸಾಕುಪ್ರಾಣಿಗಳು ಎದುರಾದ ಅಪರಿಚಿತ ‘ಬಂಧು’ಗಳನ್ನು ಕಂಡು ಆರಂಭದಲ್ಲಿ ಧ್ವನಿಯೇರಿಸಿದವು. ಕೆಲವು ತಮ್ಮಂತೆಯೇ ಇರುವ ಸಂಗಾತಿಗಳನ್ನು ಗುರುತಿಸಿ, ಸಾವಧಾನದಲ್ಲಿ ಬಾಲ ಅಲ್ಲಾಡಿಸಿ ಪ್ರೇಮಿಗಳಾದವು.
ಮೈಸೂರಿನ ಜೆ.ಕೆ.ಮೈದಾನದಲ್ಲಿ ಭಾನುವಾರ ನಡೆದ ಮುದ್ದುಪ್ರಾಣಿಗಳ ಸ್ಪರ್ಧೆಯಲ್ಲಿ ರೋಚಕ ದೃಶ್ಯ (ಎಡಚಿತ್ರ). ಬಹುಮಾನ ಪಡೆದ ಸೈಬೀರಿಯನ್ ಹಸ್ಕಿ ನಾಯಿಯೊಂದಿಗೆ ಶ್ವಾನದ ಮಾಲೀಕ ಚಂದ್ರು
ಮಕ್ಕಳಿಗೆ ಹೊಸ ಬಟ್ಟೆ ತೊಡಿಸುವಂತೆ ಅಳತೆ ಮಾಡಿ ಶ್ವಾನಗಳಿಗೆ ಹೊಂದುವಂತೆ ಪಾಲಕರು ಉಡುಪು ಹೊಲಿಸಿದ್ದರು. ಸ್ಪರ್ಧೆಗೂ ಮುನ್ನ ಕೂದಲನ್ನು ಬಾಚಣಿಗೆಯಲ್ಲಿ ಬಾಚಿ ಜುಟ್ಟು ಕಟ್ಟಿದ್ದರು. ಪುಟಾಣಿಗಳು ಮುದ್ದು ಪ್ರಾಣಿಗಳನ್ನು ಸಿಂಗಾರಗೊಳಿಸಿ ಫೋಟೊ ತೆಗೆಸಿಕೊಂಡರೆ, ‘ಜರ್ಮನ್ ಶೆಫರ್ಡ್’, ‘ಹಸ್ಕಿ’, ‘ಡಾಬರ್ ಮನ್’, ‘ಗ್ರೇಟ್ ಡೆನ್’, ‘ರಾಟ್ ವ್ಹೀಲರ್’, ‘ಸೇಂಟ್ ಬರ್ನಾಡ್’, ‘ಮುಧೋಳ್’ ತಳಿಯ ಶ್ವಾನಗಳನ್ನು ಹಿಡಿದಿಡುವುದೇ ಅವುಗಳ ಮಾಲೀಕರಿಗೆ ಸವಾಲಾಗಿತ್ತು. 90 ಕೆ.ಜಿ ಇದ್ದ ದಕ್ಷಿಣ ಆಫ್ರಿಕಾದ ಶ್ವಾನ ತಳಿ ‘ಮ್ಯಾಸ್ಟೀಫ್’ ಅನ್ನು ಎತ್ತಿಕೊಳ್ಳಲು ಹಲವು ಸುಸ್ತಾದರು.
‘630 ಮಂದಿ ಬಂದಿದ್ದರು. ಬೆಂಗಳೂರು, ಮಂಗಳೂರಿನವರೂ ಇದ್ದರು. 51 ತಳಿಯ 550ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿವೆ. ಲವ್ ಬರ್ಡ್, ಮಕಾವ್, ಗಿಳಿಗಳು, ಪಾರಿವಾಳಗಳು ಇವೆ’ ಎಂದು ಪಶು ವೈದ್ಯಾಧಿಕಾರಿ ಡಾ.ಶರತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾರಿನ ಮೇಲೆ ಹಾರುವ ಸ್ಪರ್ಧೆ
ಶ್ವಾನಗಳೊಂದಿಗೆ ಅಲ್ಲದೇ 30ಕ್ಕೂ ಹೆಚ್ಚು ಪರ್ಷಿಯನ್, ಹಿಮಾಲಯನ್ ಬೆಕ್ಕುಗಳಿದ್ದವು. ಚಿರತೆಯ ಮರಿಯಂತೆಯೇ ಇದ್ದ ಅವನ್ನು ಎತ್ತಿ ಮುದ್ದಾಡಿದರು. ಇದಲ್ಲದೇ ‘ನೀಲಿ ಇಗುವಾನ’ ಓತಿಗಳು, ಬಿಳಿ ಪೈಥಾನ್ ಹಾವು ಇದ್ದದ್ದು ವಿಶೇಷ. ಇದಲ್ಲದೆ ‘ಕಾರ್ನ್’ ಹಾವುಗಳು, ಬಿಳಿ ಇಲಿ, ‘ರ‍್ಯಾಚರ್ಸ್’ ಕೀಟಗಳು, ರೆಕ್ಸ್ ಇಲಿ ಮಾರಾಟಕ್ಕಿದ್ದವು. ಇವುಗಳ ಬೆಲೆ ₹ 1 ಸಾವಿರದಿಂದ ₹ 50 ಸಾವಿರದವರೆಗೂ ಇತ್ತು.
5 ವರ್ಷದ ಹಿರಿಯ ಶ್ವಾನ ವಿಭಾಗದ ಓಟದ ಸ್ಪರ್ಧೆಯಲ್ಲಿ ‘ಮಾಲ್ಟೀಸ್’ ಜಾತಿಯ ನನ್ನ ‘ಡಾಲ್’ಗೆ ಮೊದಲ ಸ್ಥಾನ ಸಿಕ್ಕಿದೆ. ಟ್ರೋಫಿ ಗೆದ್ದನಲ್ಲ ಅದೇ ಹೆಮ್ಮೆಮೋನಿಷಾ ಮೇಟಗಳ್ಳಿ
ಕಳೆದ ಬಾರಿಗಿಂತಲೂ ಮುದ್ದುಪ್ರಾಣಿಗಳ ಸ್ಪರ್ಧೆಗೆ ಹೆಚ್ಚು ಮಂದಿ ನೋಂದಣಿ ಮಾಡಿದ್ದಾರೆ. ಸಾಕುಪ್ರಾಣಿಗಳ ಮಾರಾಟಕ್ಕೂ ಅವಕಾಶ ನೀಡಲಾಗಿದೆಡಾ.ಶರತ್ ಪಶುವೈದ್ಯಾಧಿಕಾರಿ ಉತ್ತನಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.