ಮೈಸೂರು: ಅವಸಾನದ ಅಂಚಿಗೆ ಬಂದಿರುವ ರಣಹದ್ದುಗಳಿಗೆ ಸುರಕ್ಷಿತ ವಲಯ ನಿರ್ಮಿಸುವ ಮೂಲಕ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿರುವ ರಣಹದ್ದುಗಳ ಸಂರಕ್ಷಣಾ ಕಾರ್ಯಪಡೆಯ ಸದಸ್ಯರು ಯೋಜನೆಯನ್ನು ರೂಪಿಸುತ್ತಿದ್ದಾರೆ.
ಮಹಾರಾಷ್ಟ್ರದ ದಕ್ಷಿಣ ಭಾಗ, ತಮಿಳುನಾಡಿನ ನೀಲಗಿರಿ ಜೀವವೈವಿಧ್ಯ ಮೀಸಲು ಪ್ರದೇಶ ಹಾಗೂ ಆಂಧ್ರದ ಶ್ರೀಶೈಲಂ ಹುಲಿ ಮೀಸಲು ಪ್ರದೇಶದ ಹೊರಗೆ ಇಂಥ ಸಂರಕ್ಷಿತ ವಲಯವನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಮೈಸೂರಿನ ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನ, ಕೊಯಮತ್ತೂರಿನ ಸರ್ಕಾರೇತರ ಸಂಸ್ಥೆ ‘ಅರುಲಗಂ’, ರಾಯಲ್ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಬರ್ಡ್ಸ್ ಹಾಗೂ ಸೇವಿಂಗ್ ಏಷ್ಯಾಸ್ ವಲ್ಚರ್ಸ್ ಫ್ರಮ್ ಎಕ್ಸ್‌ಟಿಂಕ್ಷನ್ ಸಂಸ್ಥೆಗಳು ಜಂಟಿಯಾಗಿ ಈ ಯೋಜನೆ ರೂಪಿಸಿವೆ.
‘ರಣಹದ್ದುಗಳ ಸಂತತಿಯು ಶೇ 96ರಷ್ಟು ಕುಸಿದಿದೆ’ ಎಂದು ಅಧ್ಯಯನವೊಂದು ಹೇಳಿದೆ. ರಾಜ್ಯದ ಬಂಡಿಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ನೀಲಗಿರಿ ಜೀವವೈವಿಧ್ಯ ಮೀಸಲು ಪ್ರದೇಶ, ಮದುಮಲೈ ಹುಲಿ ಸಂರಕ್ಷಿತ ಪ್ರದೇಶ, ಕೇರಳದ ವಯನಾಡ್, ಮಹಾರಾಷ್ಟ್ರದ ದಕ್ಷಿಣ ಭಾಗ ಹಾಗೂ ಆಂಧ್ರದ ಶ್ರೀಶೈಲಂ ಹುಲಿ ಮೀಸಲು ಪ್ರದೇಶಗಳು ಹಿಂದೆ ರಣಹದ್ದುಗಳ ಸಂತಾನೋತ್ಪತ್ತಿ ಕೇಂದ್ರಗಳಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.