ADVERTISEMENT

ಮೈಸೂರು: ಉದ್ಯಮದ ಆಗರ ‘ಪ್ಲಾಸ್ಟಿಕ್‌’ ಶಿಕ್ಷಣ

ಸಿಪೆಟ್‌ನಲ್ಲಿ ಓಪನ್ ಹೌಸ್‌ ಕಾರ್ಯಕ್ರಮ; ಗಮನ ಸೆಳೆದ ಪ್ಲಾಸ್ಟಿಕ್‌ ಉತ್ಪನ್ನ ತಯಾರಿ ಲೋಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:12 IST
Last Updated 24 ಜನವರಿ 2026, 6:12 IST
ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್ ಮತ್ತು ತಂತಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಆರಂಭಗೊಂಡ ಓಪನ್ ಹೌಸ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆ ಉಪನ್ಯಾಸಕರು ಉತ್ಪನ್ನಗಳ ಮಾಹಿತಿ ನೀಡುತ್ತಿರುವುದು 
ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್‌ ಎಂಜಿನಿಯರಿಂಗ್ ಮತ್ತು ತಂತಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಆರಂಭಗೊಂಡ ಓಪನ್ ಹೌಸ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆ ಉಪನ್ಯಾಸಕರು ಉತ್ಪನ್ನಗಳ ಮಾಹಿತಿ ನೀಡುತ್ತಿರುವುದು    

ಮೈಸೂರು: ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಯಲ್ಲಿ ಬಳಸುವ ಕಚ್ಚಾ ವಸ್ತು ಈ ರೀತಿ ಇರುತ್ತದಾ? ಯಂತ್ರದ ಅಚ್ಚಿನಿಂದ ಪ್ಲಾಸ್ಟಿಕ್‌ ಮುಚ್ಚಳಗಳು, ಬಾಟಲ್‌ಗಳು ಈ ರೀತಿ ಹೊರಬರುತ್ತವೆಯಾ, ಇಂಥದ್ದನ್ನೂ ಪ್ಲಾಸ್ಟಿಕ್‌ನಿಂದಲೇ ಮಾಡುವುದಾ?..

ಇಂತಹ ಹತ್ತಾರು ಪ್ರಶ್ನೆಗಳು, ಪ್ಲಾಸ್ಟಿಕ್‌ ಲೋಕದ ಆಶ್ಚರ್ಯಗಳು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು. ಈಚೆಗೆ ಪ್ಲಾಸ್ಟಿಕ್‌ ಬ್ಯಾನ್‌ ಮಾಡಬೇಕು ಎಂಬ ಮಾತುಗಳನ್ನಷ್ಟೇ ಕೇಳುತ್ತಿದ್ದವರಿಗೆ ಪ್ಲಾಸ್ಟಿಕ್‌ ಸೃಷ್ಟಿಸಬಹುದಾದ ಅದ್ಭುತ ವಸ್ತುಗಳನ್ನು ಇಲ್ಲಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತಜ್ಞಾನ ಸಂಸ್ಥೆ (ಸಿಪೆಟ್‌) ಪರಿಚಯಿಸಿತು.

ಸಂಸ್ಥೆಯು ಶುಕ್ರವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಓಪನ್ ಹೌಸ್‌ ಕಾರ್ಯಕ್ರಮದಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಪ್ರತಿಯೊಂದು ವಿಭಾಗಗಳಿಗೂ ಭೇಟಿ ಮಾಡಿಸಿದ ಸಿಬ್ಬಂದಿ ಅಲ್ಲಿ ಅಳವಡಿಸಿರುವ ಯಂತ್ರ, ತಂತ್ರಗಾರಿಕೆಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅವರೊಂದಿಗೆ ಸಂಭ್ರಮಿಸಿದರು. 

ADVERTISEMENT

ವಿನ್ಯಾಸ ರಚನೆ (ಕ್ಯಾಡ್ ಲ್ಯಾಬ್‌), ಅಚ್ಚುಗಳ ತಯಾರಿ (ಟೂಲ್ ರೂಮ್‌), ಪ್ಲಾಸ್ಟಿಕ್‌ ಉತ್ಪನ್ನ ತಯಾರಿ (ಪ್ರೊಸೆಸಿಂಗ್), ಉತ್ಪನ್ನಗಳ ಗುಣಮಟ್ಟ (ಟೆಸ್ಟಿಂಗ್) ಹೀಗೆ ನಾಲ್ಕು ವಿಭಾಗಗಳ ಪ್ರಯೋಗಾಲಯಗಳಲ್ಲಿ ಪ್ಲಾಸ್ಟಿಕ್‌ಗೆ ರೂಪ ನೀಡಲು ಹೇಗೆ ಶ್ರಮಿಸಬೇಕು. ತಯಾರಿ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ‌

ಪ್ಲಾಸ್ಟಿಕ್‌ ಉತ್ಪನ್ನಗಳ ವಿನ್ಯಾಸದಲ್ಲಿ ಅನುಸರಿಸಬೇಕಾದ ಮಾನದಂಡಗಳು, ಆ ವಿನ್ಯಾಸಕ್ಕೆ ಅಚ್ಚಿನ ರೂಪ ನೀಡುವುದನ್ನು ಗಮನಿಸಿದ ವಿದ್ಯಾರ್ಥಿಗಳು, ಅವುಗಳ ಉತ್ಪಾದನೆ, ಗುಣಮಟ್ಟಗಳ ಅಧ್ಯಯನದ ಬಗ್ಗೆಯೂ ತಿಳಿದುಕೊಂಡರು. 

ಕೋರ್ಸ್‌, ತರಬೇತಿ ಮಾಹಿತಿ:

ಸಿಪೆಟ್‌ನಲ್ಲಿ ನೀಡುವ 2 ಡಿಪ್ಲೊಮಾ ಕೋರ್ಸ್‌ಗಳು ಹಾಗೂ ಅಲ್ಪಾವಧಿಯ ವೃತ್ತಿಪರ ತರಬೇತಿ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಂಸ್ಥೆಯ ಉಪನ್ಯಾಸಕರು ಮಾಹಿತಿ ನೀಡಿದರು. ತರಬೇತಿ ಹಾಗೂ ಕೋರ್ಸ್‌ ವೇಳೆ ದೊರೆಯುವ ವಿದ್ಯಾರ್ಥಿವೇತನ, ಮುಂದೆ ದೊರೆಯುವ ಉದ್ಯೋಗ ಅವಕಾಶಗಳು, ಕ್ಯಾಂಪಸ್‌ನಲ್ಲಿಯೇ ಉದ್ಯೋಗ ಆಯ್ಕೆಗಳ ಬಗ್ಗೆಯೂ ತಿಳಿಸಿದರು. ಎಸ್‌ಎಸ್‌ಎಲ್‌ಸಿ, ಪಿಯು ನಂತರ ಸಂಸ್ಥೆಯಲ್ಲಿ ಕಲಿಕೆಗೆ ಸೇರುವ ಬಗ್ಗೆ ಆಲೋಚಿಸುವಂತೆ ಪ್ರೇರೇಪಿಸಿದರು.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಿಪೆಟ್‌ನಿಂದ ಹೇಗೆ ಉಪಯೋಗ ಪಡೆದುಕೊಳ್ಳುತ್ತಿವೆ. ಪ್ಲಾಸ್ಟಿಕ್ ಕೋರ್ಸ್‌ಗಳನ್ನು ಕಲಿತು, ಯಾವ ಯಾವ ಉದ್ಯೋಗ ಮಾಡಬಹುದು, ಕಾರ್ಖಾನೆಗಳನ್ನು ಸ್ಥಾಪಿಸುವ ಬಗ್ಗೆಯೂ ಜನರು ಕೇಳಿ ತಿಳಿದರು. ಶೇಷಾದ್ರಿಪುರಂ ಕಾಲೇಜು, ವಾಣಿ ವಿಲಾಸ ಅರಸ್‌ ಬಾಲಕಿಯರ ಪ್ರೌಢಶಾಲೆ, ಭಾರತಿ ವಿದ್ಯಾಭವನದ ವಿದ್ಯಾರ್ಥಿಗಳು ಹಾಗೂ ಕೆಲ ಕೈಗಾರಿಕೋದ್ಯಮಿಗಳು ಭೇಟಿ ನೀಡಿದ್ದರು.

ಸಹಾಯಕ ತಾಂತ್ರಿಕ ಅಧಿಕಾರಿಗಳಾದ ಲಕ್ಷ್ಮಣ್, ಐ.ಭುವನೇಶ್ವರಿ, ಅನ್ಮೋಲ್‌ ಗುಪ್ತಾ, ವಿದ್ಯಾಸಾಗರ್‌ ಹಾಜರಿದ್ದರು.

ಶ್ರೀಕಾಂತ್ ಶಿರಾಲಿ 

ಓದು ಉದ್ಯಮಕ್ಕಿದೆ ವಿಪುಲ ಅವಕಾಶ

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಪೆಟ್ ಸಂಸ್ಥೆ ಪ್ರಧಾನ ನಿರ್ದೇಶಕ ಶ್ರೀಕಾಂತ್ ಶಿರಾಲಿ ‘ಪ್ಲಾಸ್ಟಿಕ್ ಎಂದರೆ ಬ್ಯಾನ್‌ ಆಗುವ ಪದಾರ್ಥ ಈ ಕ್ಷೇತ್ರದಲ್ಲಿ ಓದುವುದು ಉದ್ಯಮದ ಕನಸು ಕಾಣುವುದು ಸಾಧ್ಯವಿಲ್ಲ ಎಂಬ ತಪ್ಪು ಭಾವನೆ ಸಾಮಾನ್ಯ ಜನರಲ್ಲಿದೆ. ಇದನ್ನು ಹೋಗಲಾಡಿಸುವುದೇ ಕಾರ್ಯಕ್ರಮದ ಉದ್ದೇಶ’ ಎಂದರು. ‘ಪ್ಲಾಸ್ಟಿಕ್‌ ಉತ್ಪನ್ನಗಳ ಏಕ ಬಳಕೆಯಲ್ಲಿ ಸಮಸ್ಯೆ ಇರಬಹುದು. ಆದರೆ ಪ್ಲಾಸ್ಟಿಕ್‌ ಇಲ್ಲದೇ ಇಂದು ಬಹುತೇಕ ಉತ್ಪನ್ನಗಳೇ ದೊರೆಯುವುದಿಲ್ಲ. ಮನುಕುಲಕ್ಕೆ ಇದರ ಉತ್ತಮ ಬಳಕೆಯು ಅಗತ್ಯ ಮತ್ತು ಅನಿವಾರ್ಯ. ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಶೇ 100ರಷ್ಟು ಉದ್ಯೋಗಾವಕಾಶ ಇದೆ. ಉದ್ಯಮ ನಿರ್ಮಾಣಕ್ಕೂ ಇಲ್ಲಿ ವೇದಿಕೆ ದೊರೆಯುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.