ADVERTISEMENT

ಮೈಸೂರು: ಸಾಗಿಸಬಹುದಾದ ಐಸಿಯು ಗೂಡು!

ಮೈಸೂರಿನ ಜೆಎಸ್‌ಎಸ್‌–ಐಡಿಯಾಸ್ ಅನ್ ಲಿಮಿಟೆಡ್ ಕಂಪನಿಯಿಂದ ಅಭಿವೃದ್ಧಿ

ಎಂ.ಮಹೇಶ
Published 5 ಆಗಸ್ಟ್ 2022, 19:30 IST
Last Updated 5 ಆಗಸ್ಟ್ 2022, 19:30 IST
ಸಾಗಿಸಬಹುದಾದ ತೀವ್ರ ನಿಗಾ ಘಟಕ(ಪಾಡ್‌)ವನ್ನು ಎಸ್‌ಜೆಸಿಇಯಲ್ಲಿ ಆಯೋಜಿಸಿರುವ ‘ಮೈಸೂರು ನವೋದ್ಯಮ ಉತ್ಸವ’ದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ
ಸಾಗಿಸಬಹುದಾದ ತೀವ್ರ ನಿಗಾ ಘಟಕ(ಪಾಡ್‌)ವನ್ನು ಎಸ್‌ಜೆಸಿಇಯಲ್ಲಿ ಆಯೋಜಿಸಿರುವ ‘ಮೈಸೂರು ನವೋದ್ಯಮ ಉತ್ಸವ’ದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ   

ಮೈಸೂರು: ನಗರದ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಐಡಿಯಾಸ್ ಅನ್‌ಲಿಮಿಟೆಡ್ ಕಂಪನಿಯ ಸಹಯೋಗದಲ್ಲಿ, ಸಾಗಿಸಬಹುದಾದ ಐಸಿಯು ‘ಗೂಡು’ (ಪಾಡ್– ಪೋರ್ಟೆಬಲ್‌ ಆನ್‌ ಡಿಮ್ಯಾಂಡ್ ಕ್ರಿಟಿಕಲ್‌ ಕೇರ್ ಐಷೊಲೇಷನ್‌ ಯುನಿಟ್) ಅಭಿವೃದ್ಧಿಪಡಿಸಲಾಗಿದೆ.

ಆಸ್ಪತ್ರೆಗಳಲ್ಲಿ ಐಸಿಯು(ತೀವ್ರ ನಿಗಾ ಘಟಕ)ಗಳನ್ನು ಸ್ಥಾಪಿಸಿ, ಅಲ್ಲಿ ರೋಗಿಗಳನ್ನು ದಾಖಲಿಸಿ ನಿಗಾ ವಹಿಸಲಾಗುತ್ತದೆ. ಆದರೆ, ಈ ‘ಪಾಡ್’ ರೋಗಿ ಇರುವ ಕಡೆಗೇ ಸಾಗಿಸಿ ಚಿಕಿತ್ಸೆಯನ್ನು ಒದಗಿಸಬಹುದಾದ ಸೌಲಭ್ಯಗಳನ್ನು ಹೊಂದಿದೆ. ಕೋವಿಡ್‌–19 ಸಂದರ್ಭದಲ್ಲಿ ಬಂದ ಐಡಿಯಾವನ್ನು ಅಭಿವೃದ್ಧಿಪಡಿಸುತ್ತಾ ಘಟಕ ವಿನ್ಯಾಸಗೊಳಿಸಲಾಗಿದೆ.

ಐಸಿಯು ಘಟಕದಲ್ಲಿ ರೋಗಿಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರ ಸಲಹೆ ಪಡೆಯಲಾಗಿದೆ. ಅಭಿವೃದ್ಧಿಪಡಿಸಲು ಒಂದೂವರೆ ವರ್ಷ ಸಮಯ ತೆಗೆದುಕೊಳ್ಳಲಾಗಿದೆ.

ADVERTISEMENT

ಒಬ್ಬ ರೋಗಿಗೆ:ಸದ್ಯಕ್ಕೆ ಒಂದನ್ನು ಸಿದ್ಧಪಡಿಸಲಾಗಿದೆ. ಅಂದಾಜು ₹ 10 ಲಕ್ಷ ವೆಚ್ಚವಾಗಿದೆ. ಜಿಎಸ್‌ಟಿಯನ್ನು ಸೇರಿಸಿ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಹೊಂದಲಾಗಿದೆ. ಐಸಿಯುವರೆಗೆ ಬರಲಾಗದವರಿಗೆ ಘಟಕವನ್ನೇ ಸಾಗಿಸಬಹುದು ಎನ್ನುವುದು ಉದ್ದೇಶವಾಗಿದೆ. ಇದನ್ನು ಹಳ್ಳಿಗಳಿಗೆ ವಾಹನಗಳಲ್ಲಿ ಒಯ್ಯಬಹುದು. ಒಂದು ಹಾಸಿಗೆಯ ಅಂದರೆ ಒಬ್ಬರು ರೋಗಿಗೆ ಸೇವೆ ನೀಡಬಹುದಾದ ಘಟಕ ಇದಾಗಿದೆ.

7 ಅಡಿ ಉದ್ದ, ಆರೂವರೆ ಅಡಿ ಎತ್ತರ ಮತ್ತು ನಾಲ್ಕೂವರೆ ಅಡಿ ಅಗಲವಿದೆ. ಒಬ್ಬ ವ್ಯಕ್ತಿಯು ಆರಾಮವಾಗಿ ಮಲಗಬಹುದಾಗಿದೆ. ಆಮ್ಲಜನಕ ಸಿಲಿಂಡರ್‌ ಕೂಡ ಹೊಂದಿದೆ. ಅರ್ಧ ತಾಸು ಸಾಮರ್ಥ್ಯದ ಯುಪಿಎಸ್, ದಾಖಲೆಗಳ ಟ್ರೇ‌ ಮತ್ತು ಶುಶ್ರೂಷಕರನ್ನು ಕರೆಯುವುದಕ್ಕೆ ಬಟನ್‌ ಕೂಡ ಇದೆ. ತ್ಯಾಜ್ಯ ನಿರ್ವಹಣೆಗೂ ಜಾಗವಿದೆ.

ಔಷಧಿ ಪೂರೈಕೆ, ಹವಾನಿಯಂತ್ರಿತ ವ್ಯವಸ್ಥೆ, ಆಮ್ಲಜನಕ ‌ವ್ಯವಸ್ಥೆಯನ್ನು ಒಳಗೊಂಡಿದೆ. ವೆಂಟಿಲೇಟರ್‌ ಕೂಡ ಹೊಂದಿದೆ. ವೈದ್ಯರು ಹೊರಗಿನಿಂದಲೇ ಕೈಗವಸುಗಳ ಮೂಲಕ ರೋಗಿಯನ್ನು ಪರೀಕ್ಷಿಸಸಬಹುದಾಗಿದೆ. ಐಸೊಲೇಷನ್‌ನಲ್ಲಿರುವ ವ್ಯಕ್ತಿಯು ಮೊಬೈಲ್‌ ಫೋನ್ ಕೂಡ ಬಳಸಬಹುದಾಗಿದೆ. ಮೊಬೈಲ್‌ ಫೋನ್‌ ಚಾರ್ಜ್‌ ಮಾಡಿಕೊಳ್ಳುವುದಕ್ಕೂ ವ್ಯವಸ್ಥೆ ಇದೆ.

ಮನೆಯಲ್ಲೂ ಇಟ್ಟುಕೊಳ್ಳಬಹುದು:‘ಈ ‘ಪಾಡ್‌’ ಎಲ್ಲಿಗೆ ಬೇಕಾದರೂ ಸಾಗಿಸಬಹುದಾದ ಐಸಿಯು ಆಗಿದೆ. ಆಸ್ಪತ್ರೆಗಳಲ್ಲಿ ಐಸಿಯು ಘಟಕ ಸ್ಥಾಪಿಸಲು ಸರಾಸರಿ ₹ 15ರಿಂದ ₹ 20 ಲಕ್ಷ ಬೇಕಾಗುತ್ತದೆ. ಆದರೆ, ಪಾಡ್‌ (ಗೂಡು) ಮಾದರಿಯ ಐಸಿಯು ಅನ್ನು ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದೇವೆ. ವೈದ್ಯರ ಸಲಹೆ ಆಧರಿಸಿ ತಂತ್ರಜ್ಞಾನ ಅಳವಡಿಸುವುದಕ್ಕಾಗಿ 10–15 ಮಂದಿ ಕೆಲಸ ಮಾಡಿದ್ದೇವೆ. ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಡಾ.ಶ್ರೀನಿವಾಸಮೂರ್ತಿ ಅವರ ಐಡಿಯಾ ಇದಾಗಿದೆ. ಮನೆಯಲ್ಲೂ ಇಟ್ಟುಕೊಳ್ಳಬಹುದಾಗಿದೆ’ ಎಂದು ಐಡಿಯಾಸ್ ಅನ್‌ಲಿಮಿಟೆಡ್ ಕಂಪನಿಯ ಪ್ರತಿನಿಧಿ ನಾಗೇಂದ್ರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೋಗಿಗೆ ಬೇಕಾಗುವ ಎಲ್ಲ ವೈದ್ಯಕೀಯ ಸಲಕರಣೆ ಮತ್ತು ಸೌಲಭ್ಯಗಳನ್ನೂ ಈ ಐಸಿಯು ಹೊಂದಿದೆ. ಕೋವಿಡ್‌ನಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಐಸೊಲೇಷನ್‌ಗೂ ಬಹಳ ಸಹಕಾರಿಯಾಗಿದೆ. ವೈದ್ಯರು ಭೀತಿ ಇಲ್ಲದೆ ರೋಗಿಯನ್ನು ಆರೈಕೆ ಮಾಡಬಹುದು. ಅಗತ್ಯವಿಲ್ಲದೆ ಸಾಗಿಸಿ ಸೇವೆ ಒದಗಿಸಬಹುದಾಗಿದೆ’ ಎಂದು ಡಾ.ಶ್ರೀನಿವಾಸಮೂರ್ತಿ ಪ್ರತಿಕ್ರಿಯಿಸಿದರು.

ಪಾಡ್‌ ಅನ್ನು ‘ಮೈಸೂರು ನವೋದ್ಯಮ ಉತ್ಸವ’ದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ. ಬಳಕೆಗೆ ಅದು ಸಿದ್ಧವಾಗಿದೆ. ಬಾಡಿಗೆಗೆ ಕೊಡಲೂ ಉದ್ದೇಶಿಸಲಾಗಿದೆ. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಕ್ಲಿನಿಕಲ್ ಟ್ರಯಲ್‌ಗೆ ಯೋಜಿಸಲಾಗಿದೆ. ಸಂಪರ್ಕಕ್ಕೆ: 9342187227.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.