ADVERTISEMENT

ವಿವೇಕ ಸ್ಮಾರಕ ಬೆಂಬಲಿಸಲು ಸಾಹಿತಿಗಳ ಕರೆ

ಲಾಕ್‌ಡೌನ್‌, ಕೋವಿಡ್‌ ಸಂಕಷ್ಟದಲ್ಲಿಯೂ ಮಕ್ಕಳನ್ನು ಪ್ರತಿಭಟನೆಗೆ ಇಳಿಸಿದ್ದಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 15:58 IST
Last Updated 20 ಜೂನ್ 2021, 15:58 IST
ಸಾಹಿತಿ ಎಸ್.ಎಲ್.ಭೈರಪ್ಪ
ಸಾಹಿತಿ ಎಸ್.ಎಲ್.ಭೈರಪ್ಪ   

ಮೈಸೂರು: ಮೈಸೂರಿನ ಪ್ರಜ್ಞಾವಂತ ಜನರು ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕ ನಿರ್ಮಾಣ ಯೋಜನೆಯ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಜನರು ಮುಂದೆ ಬಂದು ಧ್ವನಿ ಎತ್ತಿ ಈ ಮಹತ್ಕಾರ್ಯವನ್ನು ಬೆಂಬಲಿಸಬೇಕು ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಕರೆ ನೀಡಿದ್ದಾರೆ.

ಇವರ ಹೇಳಿಕೆಗೆ ಹಂ.ಪ.ನಾಗರಾಜಯ್ಯ, ಸಿ.ಪಿ.ಕೃಷ್ಣಕುಮಾರ್, ಚಿದಾನಂದಗೌಡ, ಭೈರವಮೂರ್ತಿ ಸಹ ದನಿಗೂಡಿಸಿದ್ದಾರೆ.

ವಿವೇಕಾನಂದ ಅವರು ತಂಗಿದ್ದ ಸ್ಥಳದಲ್ಲಿ ಈ ಯೋಜನೆ ಸಾಕಾರಗೊಂಡು ಸಾವಿರಾರು ಯುವಕರ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಹೈಕೋರ್ಟ್‌ ಸಹ ರಾಮಕೃಷ್ಣ ಆಶ್ರಮದ ಪರವಾಗಿ ತೀರ್ಪು ನೀಡಿರುವುದು ಸ್ವಾಗತಾರ್ಹ ಹಾಗೂ ಔಚಿತ್ಯಪೂರ್ಣವೂ ಆಗಿದೆ. ಆದಾಗ್ಯೂ, ಸ್ಮಾರಕ ವಿರೋಧಿಗಳು ಮತ್ತೆ ಮತ್ತೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.

ಕೋವಿಡ್‌ ಸಂಕಷ್ಟದಲ್ಲೂ, ಲಾಕ್‌ಡೌನ್‌ ಮಧ್ಯೆದಲ್ಲಿ ಚಿಕ್ಕಮಕ್ಕಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಅನುಚಿತ ಎಂದು ಅವರು ಖಂಡಿಸಿದ್ದಾರೆ.

ಲಕ್ಷ್ಮೀಪುರಂ ಕನ್ನಡ ಶಾಲೆಯನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ಬಿಟ್ಟುಕೊಟ್ಟಾಗ, ಇಟ್ಟಿಗೆಗೂಡಿನ ಕನ್ನಡ ಶಾಲೆ ಮುಚ್ಚಿದಾಗ ಮಾತನಾಡದ ಇವರು ಎನ್‌ಟಿಎಂ ಶಾಲೆ ವಿಚಾರದಲ್ಲಿ ದನಿ ಎತ್ತುತ್ತಿದ್ದಾರೆ. ಭಾರತೀಯ ಸಂಸ್ಕೃತಿಗೆ ಪೂರಕವಾದ ಕೆಲಸಗಳಿಗೆಲ್ಲ ಕಲ್ಲು ಹಾಕುವುದೇ ಇವರ ಮಾನಸಿಕ ಸ್ಥಿತಿಯಾಗಿದೆ ಎಂದು ಅವರು ಹರಿಹಾಯ್ದಿದ್ದಾರೆ.

ಕನ್ನಡ ಶಾಲೆ ಮುಚ್ಚಿ ಹೋಗುತ್ತದೆ ಎಂಬುದು ಸುಳ್ಳು. ಈಗ ಇಲ್ಲಿರುವ ಶಾಲೆಯನ್ನು ದೇವರಾಜ ಶಾಲೆಯಲ್ಲಿ ವಿಲೀನಗೊಳಿಸಲಾಗುತ್ತದೆ. ದೇವರಾಜ ಶಾಲೆಗೆ ರಾಮಕೃಷ್ಣಾಶ್ರಮವು ಎಲ್ಲ ನೆರವನ್ನೂ ನೀಡಲಿದೆ. ಈ ಶಾಲೆಯು ಮಾದರಿ ಶಾಲೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ವಿವೇಕಾನಂದ ಅವರು ಮಕ್ಕಳು ಮತ್ತು ಯುವಜನತೆಗೆ ಉಜ್ವಲ ಆದರ್ಶವಾಗಿದ್ದಾರೆ. ಆದರೆ, ಇಂತಹ ಪ್ರತಿಭಟನೆಗಳು ಮಕ್ಕಳ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದ ಕುರಿತು ತಪ್ಪು ಅಭಿಪ್ರಾಯ ಮೂಡಿಸುತ್ತವೆ ಎಂದು ಅವರ ಕಳವಳ ವ್ಯಕ್ತಪಡಿಸಿದ್ದಾರೆ.

ಇವರ ಜಂಟಿ ಹೇಳಿಕೆಯನ್ನು ಶ್ರೀ ರಾಮಕೃಷ್ಣ ಆಶ್ರಮವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.