ADVERTISEMENT

ವರ್ತಮಾನದ ತಲ್ಲಣಗಳಿಗೆ ‘ಪ್ರಬುದ್ಧ’ ಸ್ಪಂದನೆ

ದಸರಾ ಕವಿಗೋಷ್ಠಿ ಸಮಾರೋಪ; ಗಮನ ಸೆಳೆದ ಕವಿತಾ ವಾಚನ

ಆರ್.ಜಿತೇಂದ್ರ
Published 28 ಸೆಪ್ಟೆಂಬರ್ 2025, 4:08 IST
Last Updated 28 ಸೆಪ್ಟೆಂಬರ್ 2025, 4:08 IST

ಮೈಸೂರು: ವರ್ತಮಾನದಲ್ಲಿ ಮನುಷ್ಯ ಸಂಬಂಧಗಳ ನಡುವಿನ ತಲ್ಲಣಗಳಿಗೆ ಶುಕ್ರವಾರ ನಡೆದ ‘ಪ್ರಬುದ್ಧ’ ಕವಿಗೋಷ್ಠಿಯು ಧ್ವನಿಯಾಯಿತು. ‘ ಒಲವ ಬಿತ್ತಿ, ಒಲವ ಬೆಳೆ, ಒಲವಿನಿಂದಲೇ ಜೀವನ’ ಎನ್ನುವ ಸಂದೇಶ ಸಾರಿತು.

ದಸರಾ ಕವಿಗೋಷ್ಠಿಯ ಕಡೆಯ ದಿನದಂದು ನಡೆದ ಗೋಷ್ಠಿಯಲ್ಲಿ ನಾಡಿನ ವಿವಿಧ ಜಿಲ್ಲೆಗಳ 34 ‘ಪ್ರಬುದ್ಧ’ ಕವಿಗಳು ತಮ್ಮ ಕವಿತಾ ವಾಚನದ ಮೂಲಕ ಗಮನ ಸೆಳೆದರು. ಬಹುತೇಕ ಕವಿತೆಗಳು ಸಮಾಜದೊಳಗಿನ ನೋವಿನ ಧ್ವನಿಯಾಗಿದ್ದವು. ಸೌಹಾರ್ದ ಸಾರುತ್ತಲೇ, ಹೋರಾಟದ ಗಟ್ಟಿ ಧ್ವನಿಯ ಕಿಡಿ ಹೊತ್ತಿಸಿದವು.

ಗೋಷ್ಠಿಯ ಆರಂಭದಲ್ಲೇ ಬೆಳಗಾವಿಯ ಅಕ್ಬರ್ ಸನದಿ ‘ಹೂವಿನಂತೆ ಅರಳಲಿ’ ಕವಿತೆಯೊಂದಿಗೆ ಒಲವಿನ ಮಹತ್ವ ಸಾರಿದರು. ಸಂತೇಬೆನ್ನೂರಿನ ಫೈಜ್ನಟ್ರಾಜ್‌ ‘ ನಮ್ಮ ಕಣ್ಣಲ್ಲಿ ನಿಮ್ಮ ನೀರು...’ ಎನ್ನುವ ಕವಿತೆ ಮೂಲಕ ಶೋತೃಗಳ ಚಪ್ಪಾಳೆ ಗಿಟ್ಟಿಸಿದರು.’ ನಿಮ್ಮ ಕೈಯ ಬೆಂಕಿಪಟ್ಟಣ ನಮಗೂ ಹಸ್ತಾಂತರಿಸಬೇಕಿತ್ತು. ಬೆಂಕಿಗಲ್ಲ, ಹಣತೆ ಹಚ್ಚುತ್ತಿದ್ದೆವು' ಎನ್ನುವ ಆಶಯದ ಅವರ ಕವಿತೆ ಇಂದಿನ ಸಮಾಜಕ್ಕೆ ಅಗತ್ಯವಾದ ಸೌಹಾರ್ದ ಸಾರಿತು.

ADVERTISEMENT

ಅನೇಕ ವೈರಾಗ್ಯದ, ಸಿಟ್ಟಿನ, ನೋವಿನ ಕವಿತೆಗಳಿಗೂ ಕವಿಗಳು ಧ್ವನಿಯಾದರು. ರಾಯಚೂರಿನ ಈರಣ್ಣ ಬೆಂಗಾಲಿ ‘ಜೀವನ ನಾಲ್ಕು ದಿನದ ಸಂತೆ ಎಂದು ನೆನಪಾಗುವುದು ಮಣ್ಣಿಗೆ ಹೋದಾಗ..’ ಎನ್ನುವ ಘಜಲ್ ತೆರೆದಿಟ್ಟರು. ಮೈಸೂರಿನ ಕಾ. ರಾಮೇಶ್ವರಪ್ಪ ‘ ಯುಗದ ಸೂರ್ಯನಿ, ಕೊಂದವರಿಗೆ ಕೊರಳಿನ ಅರ್ಥ ವಿವರಿಸಿದ ದಾರ್ಶನಿಕ’ ಎನ್ನುವ ಮೂಲಕ ಅಂಬೇಡ್ಕರ್‌ಗೆ ನುಡಿನಮನ ಸಲ್ಲಿಸಿದರು.

ಕೊಪ್ಪಳದ ನಾಗರಾಜು ಹೀರಾ ಅವರ ‘ಸಮಾಧಾನವಿಲ್ಲ ಮಗಳೇ...’, ಯಾದಗಿರಿಯ ನೀಲಮ್ಮ ಮಲ್ಲೆ ವಾಚಿಸಿದ ದೇವದಾಸಿಯರ ಕುರಿತ ‘ ಬದುಕು ಸುಟ್ಟ ಬೆಂಕಿ’, ಬೆಂಗಳೂರಿನ ಪದ್ಮಿನಿ ನಾಗರಾಜು ಅವರ ‘ ಎದ್ದು ಬರುತ್ತೇವೆ ನಾವು ಫೀನಿಕ್ಸ್‌ನಂತೆ’ ಹಾಗೂ ಕೋಲಾರದ ಗುರುಮೂರ್ತಿ ಜಯಮಂಗಲ ಅವರ ‘ ಈ ಭೂಮಿ ನನಗೆ ತುಂಬಾ ಕಲಿಸಿದೆ’ ಕವಿತೆಗಳು ನೊಂದ ಸಮಾಜ, ಕುಲ- ಜಾತಿಗಳ ಸಂಕಟ ತೆರೆದಿಟ್ಟವು.

ಕೊಡಗಿನ ಜಯಲಕ್ಷ್ಮಿ ಅವರ ‘ಭರವಸೆಯ ಬದುಕು’ ಉಮೇಶ್ ಬಾಬು ಮಠದ ಅವರ ‘ ಬೇಕಾಗಿದ್ದಾನೆ’, ದೇವು ಮಾರ್ಕೊಂಡ ಅವರ ‘ನಗುವೆ ಒಮ್ಮೆ ನಕ್ಕು ಬಿಡು’, ಮರುಳ ಸಿದ್ದಪ್ಪ ದೊಡ್ಡಮನಿ ಅವರ ‘ಹೃದಯ ಕಂಪಿಸಿತು ಮಲ್ಲಿನಾಥ ತಳವಾರ ಘಜಲ್ ಮೊದಲಾದ ಕವಿತೆಗಳೂ ಗಮನ ಸೆಳೆದವು. ಉಡುಪಿಯ ಪ್ಲಾವಿಯ ಕ್ಯಾಸ್ಟಲಿನೊ ಕೊಂಕಣಿಯಲ್ಲಿ ಕವಿತೆ ಓದಿದರು.

ಕನ್ನಡದ ಪ್ರೀತಿ:

ಕನ್ನಡದ ಬಗೆಗಿನ ಭಾಷಾ ಕಾಳಜಿಯೂ ಅನೇಕರ ಕವಿತೆಗಳಲ್ಲಿ ವ್ಯಕ್ತವಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ‘ ಕನ್ನಡ ಭುವನೇಶ್ವರಿ’ಗೆ ಜೈಕಾರ ಹಾಕಿದರೆ, ಉಡುಪಿಯ ನೀಲಾವರ ಸುರೇಂದ್ರ ಅಡಿಗರು ‘ಕನ್ನಡಾಭಿಮಾನಿ’ ಕವಿತೆಯ ಮೂಲಕ ಈಗಿನ ಕಾಲದ ಕನ್ನಡ ಹೋರಾಟಗಾರರ ಬದ್ಧತೆಯನ್ನು ವ್ಯಂಗ್ಯದ ರೂಪದಲ್ಲಿ ತೆರೆದಿಟ್ಟರು. ಶಿವಮೊಗ್ಗದ ನಂದಾ ಪ್ರೇಮಕುಮಾರ್ ‘ ಬೇಕೆ, ಬೇಕು ಕನ್ನಡ ಶಾಲೆ’ ಎಂದು ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.