ಎಚ್.ಡಿ.ಕೋಟೆ: ಪಟ್ಟಣದಲ್ಲಿ ಮಂಗಳವಾರ ತಡ ರಾತ್ರಿ ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರ ಮನೆ ಸೇರಿದಂತೆ ಮೂರು ಮನೆಗಳಲ್ಲಿ ಕಳ್ಳತನವಾಗಿದೆ.
ಚಿನ್ನ, ಬೆಳ್ಳಿ, ಹಣ ಸೇರಿದಂತೆ ಸುಮಾರು ₹50 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವ ಕಳ್ಳರು, ಸಿ.ಸಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವಸ್ಥಾನದ ಮುಂಭಾಗದಲ್ಲಿಯೇ ಇರುವ ಶೇಷಾದ್ರಿ ಅವರ ಮನೆಯಲ್ಲಿ ಹಣ, ಚಿನ್ನ ಸೇರಿದಂತೆ ₹20 ಲಕ್ಷ ಬೆಲೆಬಾಳುವ ಪದಾರ್ಥ, ಸ್ಟೇಡಿಯಂ ಬಡವಾಣೆ ನಿವಾಸಿ ಪೊಲೀಸ್ ಮಹದೇವು ಅವರ ಮನೆಯಲ್ಲಿ 250 ಗ್ರಾಂ ಚಿನ್ನ, ₹10 ಸಾವಿರ ನಗದು, ವಿಶ್ವನಾಥ ಕಾಲೊನಿ ನಿವಾಸಿ ಗೋಬಿ ವ್ಯಾಪಾರಿ ಕೃಷ್ಣ ಅವರ ಮನೆಯಲ್ಲಿ 100 ಗ್ರಾಂ ಬೆಳ್ಳಿ, 5 ಗ್ರಾಂ ಚಿನ್ನ, ₹20 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್‌ಸ್ಪೆಕ್ಟರ್ ಬಾಲಸುಬ್ರಹ್ಮಣ್ಯಂ, ಮೋಹಿತ್, ಎಸ್‌ಐ ಚಿಕ್ಕನಾಯಕ, ಸಿಬ್ಬಂದಿ ಕಬೀರ್ ಹಾಜರಿದ್ದರು.
ಪಟ್ಟಣದ ಸ್ಟೇಡಿಯಂ ಬಡಾವಣೆಯ ನಿವಾಸಿ ಪೊಲೀಸ್ ಮಾಹದೇವ ಅವರು ಹಾಸನಾಂಬೆ ದೇವಾಲಯಕ್ಕೆ ಕರ್ತವ್ಯಕ್ಕೆ ತೆರಳಿದ್ದ ವೇಳೆ ಅವರ ಮನೆಯಲ್ಲಿ ಕಳ್ಳತನವಾಗಿದೆ. ‘ಕಳೆದ ಐದು ದಿನಗಳ ಹಿಂದೆ ಪಟ್ಟಣದ ವಾರಹಿ ಮತ್ತು ಮಾರಮ್ಮ ದೇವಾಲಯದಲ್ಲಿ ಒಂದೂವರೆ ಲಕ್ಷ ವೆಚ್ಚದ ಚಿನ್ನದ ತಾಳಿಗಳನ್ನು ಕಳ್ಳರು ದೋಚಿ ಹೋಗಿದ್ದರು. ಮತ್ತೆ ಸರಣಿ ಕಳ್ಳತನ ಆಗಿರುವುದು ಪೊಲೀಸರ ನಿರ್ಲಕ್ಷ್ಯವನ್ನು ತೋರಿಸುತ್ತಿದೆ’ ಎಂದು ನಿವಾಸಿ ಶ್ರೀಕಂಠ ಆರೋಪಿಸಿದರು.
‘ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು ಮರಕಳಿಸುತ್ತಿರುವುದಕ್ಕೆ ಪೊಲೀಸರು ರಾತ್ರಿ ಗಸ್ತು ತಿರುಗದೇ ಇರುವುದು ಕಾರಣ’ ಎಂದು ಕಸ್ತೂರಿ ಮಹೇಶ್ ಆರೋಪಿಸಿದ್ದಾರೆ.
‘ಪಟ್ಟಣದ ಠಾಣೆಯಲ್ಲಿ ಈಗಾಗಲೆ ಸಿಬ್ಬಂದಿ ಕೊರತೆ ಇದ್ದರೂ ಇಲ್ಲಿನ ಪೊಲೀಸರನ್ನು ಬೇರೆಡೆ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಇದಕ್ಕೆ ಪೊಲೀಸರು ಮತ್ತು ಸರ್ಕಾರದ ನಿರ್ಲಕ್ಷ್ಯ ಕಾರಣ’ ಎಂದು ಮುಖಂಡ ಚಂದ್ರಮೌಳಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.