ADVERTISEMENT

ಮೈಸೂರಿನ ಅತ್ಯಾಚಾರ ಪ್ರಕರಣ: ತೀವ್ರಗೊಂಡ ಆರೋಪಿಗಳ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 18:52 IST
Last Updated 29 ಆಗಸ್ಟ್ 2021, 18:52 IST
ಪರಿಶೀಲನೆ ನಡೆಸುತ್ತಿರುವ ತನಿಖಾ ತಂಡ (ಸಂಗ್ರಹ ಚಿತ್ರ)
ಪರಿಶೀಲನೆ ನಡೆಸುತ್ತಿರುವ ತನಿಖಾ ತಂಡ (ಸಂಗ್ರಹ ಚಿತ್ರ)   

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ತನಿಖೆ ತೀವ್ರಗೊಂಡಿದೆ. ಇಲ್ಲಿನ 3ನೇ ಜೆಎಂಎಫ್‌ಸಿ ನ್ಯಾಯಾಲಯ ಇವರನ್ನು 10 ದಿನ ಪೊಲೀಸ್ ವಶಕ್ಕೆ ನೀಡಿದೆ.

ಆರೋಪಿಗಳಿಂದ ಕೂದಲು, ಚರ್ಮ ಮೊದಲಾದ ಮಾದರಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತನಿಖೆ ವೇಳೆ ಒಬ್ಬಾತ ತಂಡದಲ್ಲಿ 7 ಮಂದಿ ಇರುವುದಾಗಿ ಹೇಳಿದ್ದು, ಆತನ ಪತ್ತೆಗೆ ಪೊಲೀಸರ ತಂಡ ತಮಿಳುನಾಡಿಗೆ ತೆರಳಿದೆ.

‘ಪೊಲೀಸರು ಮಧ್ಯರಾತ್ರಿ ಏಕಾಏಕಿ ಮನೆಗೆ ನುಗ್ಗಿ ಮಗನನ್ನು ಎಳೆದುಕೊಂಡು ಹೋದರು. ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಆತನ ಬಂಧನದಿಂದ ದಿಕ್ಕು ತೋಚದಂತಾಗಿದೆ’ ಎಂದು ತಮಿಳುನಾಡಿನ ತಾಳವಾಡಿಯಲ್ಲಿ ಆರೋಪಿಯೊಬ್ಬನ ತಾಯಿ ಕಣ್ಣೀರು ಹಾಕಿದ್ದಾರೆ.

ADVERTISEMENT

ಮತ್ತೊಬ್ಬ ಆರೋಪಿಯ ಕುಟುಂಬದವರು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳಲ್ಲಿ ಬಾಲ ಆರೋಪಿಗಳೂ ಇದ್ದು, ಅವರ ವಯಸ್ಸಿನ ದೃಢೀಕರಣ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಹೆಣ್ಣು, ಹಣದ ಚಪಲ: ಬಂಧಿತರ ಪೈಕಿ ಇಬ್ಬರು ಆರೋಪಿಗಳು ಮಹಿಳೆಯರನ್ನು ವಿಕೃತವಾಗಿ ಹಿಂಸಿಸುತ್ತಿದ್ದರು. ಉಳಿದವರು ಹಣ, ಒಡವೆ ದರೋಡೆ ಮಾಡುತ್ತಿದ್ದ ಅಂಶ ವಿಚಾರಣೆ ವೇಳೆ ಗೊತ್ತಾಗಿದೆ. ಅತ್ಯಾಚಾರದ ವಿಡಿಯೊ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದರು. ಹಲವು ಮಂದಿ ಗೂಗಲ್‌ಪೇ ಮೂಲಕ ಹಣ ಪಾವತಿಸುತ್ತಿದ್ದರು. ಆರೋಪಿಗಳ ವಿರುದ್ಧ ಗಂಧದ ಮರ ಕಳವು ಹಾಗೂ ಕೊಲೆ ಪ್ರಕರಣಗಳು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.

‘ಹಗಲಿನಲ್ಲಿ ನಿದ್ರಿಸುತ್ತಿದ್ದ ಆರೋಪಿಗಳು ರಾತ್ರಿ ವೇಳೆ ಕಳ್ಳತನ, ದರೋಡೆಗೆ ಇಳಿಯುತ್ತಿದ್ದರು. ತಾಳವಾಡಿ ಸೇರಿದಂತೆ ತಮಿಳುನಾಡಿನ ಇತರೆ ಭಾಗಗಳಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದರು’ ಎಂದು ತಾಳವಾಡಿ ನಿವಾಸಿಯೊಬ್ಬರು ಹೇಳುತ್ತಾರೆ.

ಪ್ರವೀಣ್‌ ಸೂದ್‌ ಸೂಚನೆ: ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು, ಸಾಮೂಹಿಕ ಅತ್ಯಾಚಾರ ಹಾಗೂ ದರೋಡೆಯಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಿದ್ದಾರೆ.

‘ಅಪರಾಧ ಪತ್ತೆ ಕಾರ್ಯಕ್ಕಿಂತ ನಡೆಯದಂತೆ ಎಚ್ಚರ ವಹಿಸಬೇಕಾದ್ದು ಮುಖ್ಯ. ಗಸ್ತು ಹಾಗೂ ಭದ್ರತೆ ಹೆಚ್ಚಿಸಬೇಕು, ಹಳೆ ಆರೋಪಿಗಳ ಮಾಹಿತಿ ಸಂಗ್ರಹಿಸಬೇಕು‌’ ಎಂದು ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.