ADVERTISEMENT

ಮುಡಾ | ಅಧಿಕಾರಿಗಳ ಅಸಹಕಾರ: ತನಿಖೆಗೆ ಅಡ್ಡಿ

ಮುಡಾ; ನಕಲಿ ಚಲನ್‌ ಬಳಸಿ ಕೋಟ್ಯಂತರ ರೂಪಾಯಿ ದುರ್ಬಳಕೆ

ಆರ್.ಜಿತೇಂದ್ರ
Published 6 ಜೂನ್ 2025, 4:41 IST
Last Updated 6 ಜೂನ್ 2025, 4:41 IST
ಸಿಸಿಬಿ ಪೊಲೀಸರು ಮುಡಾ ಆಯುಕ್ತರಿಗೆ ಬರೆದ ಪತ್ರ
ಸಿಸಿಬಿ ಪೊಲೀಸರು ಮುಡಾ ಆಯುಕ್ತರಿಗೆ ಬರೆದ ಪತ್ರ   

ಮೈಸೂರು: ಮುಡಾದಲ್ಲಿ (ಈಗಿನ ಎಂಡಿಎ) ಸಾಕಷ್ಟು ಸದ್ದು ಮಾಡಿದ್ದ, ನಕಲಿ ಚಲನ್‌ ಬಳಸಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ತನಿಖೆಗೆ ಪೊಲೀಸರು ಎಳ್ಳು–ನೀರು ಬಿಡುವ ಸಾಧ್ಯತೆ ಇದೆ.

‘ಅತಿ ಜರೂರು ಎಂದು ಪರಿಗಣಿಸಿ ಮಾಹಿತಿ ನೀಡುವಂತೆ ಎರಡೆರಡೂ ಬಾರಿ ಪತ್ರ ಬರೆದಿದ್ದರೂ ತನಿಖೆಗೆ ಪೂರಕವಾದ ಮಾಹಿತಿಯನ್ನು ನೀಡುತ್ತಿಲ್ಲ. ಇದರಿಂದ ಪ್ರಕರಣದ ತನಿಖೆ ಕಷ್ಟವಾಗಲಿದೆ’ ಎಂದು ನಗರ ಅಪರಾಧ ವಿಭಾಗದ (ಸಿಸಿಬಿ) ತನಿಖಾಧಿಕಾರಿ ಜೂನ್‌ 4ರಂದು ಮುಡಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹೀಗೆಯೇ ಆದಲ್ಲಿ ಪ್ರಕರಣ ಮುಕ್ತಾಯ ಮಾಡಲು ಸಂಬಂಧಪಟ್ಟ ಇಲಾಖೆಗೆ ನಿವೇದಿಸಿಕೊಳ್ಳಬೇಕಾಗುತ್ತದೆ’ ಎಂದೂ ಎಚ್ಚರಿಸಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

‘ಪ್ರಕರಣದ ತನಿಖೆಗೆ ಪೂರಕವಾಗಿ ಮುಡಾ ವಲಯ ಕಚೇರಿ 3, 5 ಹಾಗೂ 5ಎರಲ್ಲಿ 2023ರ ಮಾರ್ಚ್ 17ರಿಂದ ನವೆಂಬರ್ 8ರವರೆಗೆ ಮುಡಾ ಅನುಮೋದಿತ ಬಡಾವಣೆಗಳಿಗೆ ಖಾತೆ ವಿತರಿಸುತ್ತಿದ್ದ ಹಾಗೂ ಬ್ಯಾಂಕ್‌ ಖಾತೆಗಳನ್ನು ನಿರ್ವಹಿಸುತ್ತಿದ್ದ ಅಧಿಕಾರಿಗಳು–ಸಿಬ್ಬಂದಿ ವಿವರ, ಒಟ್ಟು ವಿತರಿಸಲಾದ ಖಾತೆಗಳ ವಿವರ, ನಿವೇಶನಗಳಿಗೆ ಸಂಬಂಧಿಸಿದ ಆಡಿಟ್ ವರದಿಗಳನ್ನು ಕೋರಿ ಇದೇ ವರ್ಷ ಜನವರಿ 23 ಹಾಗೂ ಮೇ 16ರಂದು ಪತ್ರ ಬರೆಯಲಾಗಿತ್ತು. ಆದರೆ ಈವರೆಗೂ ಪತ್ರಕ್ಕೆ ಉತ್ತರ ದೊರೆತಿಲ್ಲ’ ಎಂದು ತನಿಖಾಧಿಕಾರಿಯು ತಮ್ಮ ಮೂರನೇ ಪತ್ರದಲ್ಲಿ ವಿವರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆಗೆ ಎಂಡಿಎ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಏನಿದು ಪ್ರಕರಣ?: ಮುಡಾಕ್ಕೆ ಖಾತೆ ವರ್ಗಾವಣೆ ಶುಲ್ಕ ಪಾವತಿಯ ನಕಲಿ ಚಲನ್‌ಗಳನ್ನು ಸಲ್ಲಿಸಿದ ಆರೋಪದ ಮೇಲೆ ಏಳು ಗ್ರಾಹಕರ ವಿರುದ್ಧ ಮುಡಾದ ಅಂದಿನ ವಿಶೇಷ ತಹಶೀಲ್ದಾರ್‌ 2023ರ ನವೆಂಬರ್ 8ರಂದು ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ, ಮುಡಾ ಹಾಗೂ ಬ್ಯಾಂಕ್‌ ಆಫ್‌ ಬರೋಡಾದ ಹೊರಗುತ್ತಿಗೆ ಸಿಬ್ಬಂದಿ ಈ ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡುಬಂದಿತ್ತು.

ಖಾತೆ ವರ್ಗಾವಣೆಗೆಂದು ಮುಡಾಕ್ಕೆ ಬರುತ್ತಿದ್ದ ಅರ್ಜಿದಾರರಿಂದ ಹಣ ಪಡೆಯುತ್ತಿದ್ದ ಮುಡಾದ ಕೆಲವು ಸಿಬ್ಬಂದಿ ತಾವೇ ಬ್ಯಾಂಕಿಗೆ ಹಣ ಕಟ್ಟುವುದಾಗಿ ನಂಬಿಸುತ್ತಿದ್ದರು. ಬಳಿಕ ನಕಲಿ ಬ್ಯಾಂಕ್‌ ಚಲನ್‌ಗಳನ್ನು ಸೃಷ್ಟಿಸಿ, ಬ್ಯಾಂಕಿನಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ನಕಲಿ ಚಲನ್‌ಗಳಿಗೆ ಬ್ಯಾಂಕ್‌ ಸೀಲ್‌ ಹಾಕಿ ಮುಡಾಕ್ಕೆ ಸಲ್ಲಿಸುತ್ತಿದ್ದರು. ಆದರೆ ಹಣ ಮಾತ್ರ ಜಮೆ ಆಗಿರಲಿಲ್ಲ ಎಂಬ ಸಂಗತಿ ಪೊಲೀಸರ ತನಿಖೆ ವೇಳೆ ಒತ್ತೆಯಾಗಿತ್ತು.

ಹೀಗೆ ಒಟ್ಟು 92 ನಕಲಿ ಚಲನ್‌ಗಳು ಪತ್ತೆಯಾಗಿದ್ದು, ₹1.95 ಕೋಟಿ ಮೊತ್ತದ ಅಕ್ರಮ ಕಂಡುಬಂದಿತ್ತು. ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ ಮುಡಾದ ‘ಡಿ’ ಗ್ರೂಪ್‌ ನೌಕರರು, ಬ್ಯಾಂಕ್‌ ಆಫ್‌ ಬರೋಡದ ಹೊರಗುತ್ತಿಗೆ ನೌಕರನೊಬ್ಬನನ್ನು ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣವು ಸಿಸಿಬಿಗೆ ವರ್ಗಾವಣೆಯಾಗಿತ್ತು.

‘₹5–6 ಕೋಟಿಗೂ ಅಧಿಕ ಮೊತ್ತದ ಅಕ್ರಮ ನಡೆದಿದ್ದು, ಪ್ರಕರಣವನ್ನು ಎಸ್ಐಟಿಗೆ ವಹಿಸಬೇಕು’ ಎಂದು ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಉಳಿಸಿ’ ವೇದಿಕೆಯು ಪ್ರತಿಭಟನೆ ನಡೆಸಿತ್ತು. 

ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ   
ನಕಲಿ ಚಲನ್ ಪ್ರಕರಣದಲ್ಲಿ ನಮ್ಮ ತನಿಖಾ ತಂಡವು ಮುಡಾ ಆಯುಕ್ತರಿಗೆ ಪತ್ರ ಬರೆದಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲಿಸುತ್ತೇನೆ
ಮೊಹಮ್ಮದ್ ಷರೀಫ್‌ ರೌತರ್‌ ಎಸಿಪಿ ಸಿಸಿಬಿ
ತನಿಖೆ ಕೈಬಿಡುವುದಾಗಿ ತನಿಖಾಧಿಕಾರಿಯೇ ಹೇಳುವುದು ಸರಿಯಲ್ಲ. ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಬೇಕು
ಗಂಗರಾಜು ದೂರುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.