ಎಂ.ಬಿ. ಪಾಟೀಲ
ಮೈಸೂರು: ‘ಡಿಸೆಂಬರ್ ಬಳಿಕ ನಿಗಮ–ಮಂಡಳಿಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಖಂಡಿತ ಅವಕಾಶ ಸಿಗಲಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿ ವ್ಯಕ್ತಿಗಿಂತ ಪಕ್ಷಕ್ಕೆ ಆದ್ಯತೆ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ. ಪಕ್ಷದ ಮೇಲಿನ ಭರವಸೆ ಹೀಗೆಯೇ ಇರಲಿ’ ಎಂದು ಆಶಿಸಿದರು.
‘ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿದ ಪಕ್ಷ. ಆದರೆ ಕಳೆದ ದಶಕದಿಂದ ಕೆಲವು ಸಂಘಟನೆಗಳು ದೇಶವನ್ನು ಬೇರೆಡೆಗೆ ಒಯ್ಯುವ ಪ್ರಯತ್ನ ನಡೆಸಿದ್ದು, ಪಕ್ಷಕ್ಕೆ ಹಿನ್ನಡೆ ಆಗಿದೆ. ಅವರ ಗೆಲುವು ತಾತ್ಕಾಲಿಕ. ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪಕ್ಷ ಸಂಘಟನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
‘ನಮ್ಮದು ಬಸವಣ್ಣನ ನಾಡು. ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಅಂದೇ ಸಮಾನತೆಯ ಸಂದೇಶ ಸಾರಿದ್ದರು. ಅದನ್ನೇ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ತಂದರು. ಕಾಂಗ್ರೆಸ್ ಸಿದ್ಧಾಂತವೂ ಅದೇ ಆಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಜನರಿಗೆ ನುಡಿದಂತೆ ಕಾರ್ಯಕ್ರಮ ಕೊಟ್ಟಿವೆ. ಇದು ಯಾವುದೇ ಜಾತಿ- ಧರ್ಮಕ್ಕೆ ಸೀಮಿತವಾದ ಕಾರ್ಯಕ್ರಮಗಳಲ್ಲ’ ಎಂದರು.
‘ಕಾವೇರಿ ನದಿ ನೀರು ಹಂಚಿಕೆ ತೀರ್ಪು ಬಂದಾಗ ನಾನು ಜಲ ಸಚಿವನಾಗಿದ್ದೆ. ಆಗ ಪಾಲಿ ನಾರಿಮನ್ ವಾದದಿಂದ ನಮ್ಮ ಪಾಲು 17 ಟಿಎಂಸಿಯಷ್ಟು ಹೆಚ್ಚಾಯಿತು. ಬೆಂಗಳೂರಿಗೂ ಕಾವೇರಿ ನೀರು ಹಂಚಿಕೆ ಆಯಿತು. ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೂ ಅಂದೇ ಯೋಜನೆ ರೂಪಿಸಲಾಯಿತು. ಕೃಷ್ಣ- ಕಾವೇರಿ ನದಿಗಳು ಈ ನಾಡಿನ ಎರಡು ಕಣ್ಣು. ಉತ್ತರ- ದಕ್ಷಿಣ ಎನ್ನದೇ ನಾವೆಲ್ಲರೂ ಒಂದೇ ಎಂಬಂತೆ ಬಾಳಬೇಕು’ ಎಂದು ಆಶಿಸಿದರು.
ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಕೆ. ಹರೀಶ್ ಗೌಡ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಪಕ್ಷದ ಮುಖಂಡರು ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.