ಅಂಚೆ ಕಚೇರಿ
ಮೈಸೂರು: ಜಿಲ್ಲೆಯ ಸರಗೂರು ಪಟ್ಟಣದ ಅಂಚೆ ಕಚೇರಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಕೋಟ್ಯಂತರ ರೂಪಾಯಿ ದುರುಪಯೋಗ ಆಗಿರುವುದು ತನಿಖೆಯಿಂದ ಹೊರಬಿದ್ದಿದ್ದು, ಹಣ ಕಟ್ಟಿದ್ದ ಸಾವಿರಾರು ಗ್ರಾಹಕರನ್ನು ಆತಂಕಕ್ಕೆ ದೂಡಿದೆ.
ಮೇ 22ರಂದು ಪ್ರಕರಣ ಬಯಲಾಗಿತ್ತು. ಕೆಲವು ಗ್ರಾಹಕರು ಠೇವಣಿ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾಗ, ಹಣ ದುರುಪಯೋಗ ಆಗಿರುವುದು ಗೊತ್ತಾಗಿದೆ. ಅಲ್ಲಿನ ಅಂಚೆ ಸಹಾಯಕ ದೀಪಕ್ ಎನ್ನುವವರ ವಿರುದ್ಧ ಆರೋಪ ಕೇಳಿಬಂದಿದ್ದು, ಅವರಿಗೆ ಯಾರ‍್ಯಾರು ನೆರವಾಗಿದ್ದಾರೆ, ಇದರಲ್ಲಿ ಭಾಗಿ ಆಗಿರುವವರು ಯಾರು, ನಿಖರವಾಗಿ ಎಷ್ಟು ಹಣ ದುರುಪಯೋಗ ಆಗಿದೆ ಎಂಬ ನಿಟ್ಟಿನಲ್ಲಿ ಇಲಾಖಾ ತನಿಖೆ ಆರಂಭಿಸಲಾಗಿದೆ. ‘ಬಹುಕೋಟಿ ದುರುಪಯೋಗ ಆಗಿರುವ ಪ್ರಕರಣವಿದು’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಇಲಾಖೆಯ ಮೈಸೂರು ವಿಭಾಗದ ಹಿರಿಯ ಪೋಸ್ಟಲ್ ಸೂಪರಿಂಟೆಂಡೆಂಟ್ ಹರೀಶ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ‘ಆರೋಪ ಹೊತ್ತಿರುವ ವ್ಯಕ್ತಿ ಹಲವು ದಿನಗಳಿಂದಲೂ ಕೆಲಸಕ್ಕೆ ಹಾಜರಾಗಿರಲಿಲ್ಲ. ಸೋಮವಾರ ಕಚೇರಿಗೆ ಬಂದಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ನಂತರ ನೈಜ ಚಿತ್ರಣ ದೊರೆಯಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಹಲವು ಸಂಗತಿ ಬಯಲಿಗೆ: ಅಧಿಕಾರಿಗಳ ತಂಡವು ನಡೆಸುತ್ತಿರುವ ತನಿಖೆಯ ವೇಳೆ, ಹಲವು ಸಂಗತಿಗಳು ಹೊರಬಿದ್ದಿವೆ. ಆ ಕಚೇರಿಯಲ್ಲಿ, ಸರಗೂರು ಹಾಗೂ ಸುತ್ತಲಿನ 12 ಶಾಖೆಗಳು ಸೇರಿ 27ಸಾವಿರಕ್ಕೂ ಹೆಚ್ಚಿನ ಖಾತೆಗಳಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ.
ಗ್ರಾಹಕರಿಗೆ ಕರೆ ಮಾಡಿ ಮಾಹಿತಿ ಪಡೆಯಲಾಗುತ್ತಿದೆ. ಈವರೆಗೆ ನಡೆದಿರುವ ತನಿಖೆಯ ಪ್ರಕಾರ, ₹ 1 ಕೋಟಿಗೂ ಹೆಚ್ಚು ದುರುಪಯೋಗ ಆಗಿರುವುದು ಖಚಿತವಾಗಿದೆ. ಹಿರಿಯ ನಾಗರಿಕರು ಇಟ್ಟಿರುವ ಠೇವಣಿ, ಎಂಐಎಸ್ (ಮಂಥ್ಲಿ ಇನ್‌ಕಮ್ ಸ್ಕೀಂ), ಎಸ್‌ಬಿ ಖಾತೆ ಮೊದಲಾದವುಗಳಲ್ಲಿನ ಹಣವನ್ನು ಗುಳಂ ಮಾಡಿರುವುದು ತನಿಖೆಯ ವೇಳೆ ಕಂಡುಬಂದಿದೆ. ಈ ಗ್ರಾಹಕರು ಹಲವು ವರ್ಷಗಳಿಂದ ಹಣ ಕೂಡಿಟ್ಟಿದ್ದರು. ಅದೀಗ ಮರಳುವುದೋ ಇಲ್ಲವೋ ಎಂಬ ಭೀತಿ ಅವರದಾಗಿದೆ.
ಸಂಪೂರ್ಣ ದಾಖಲೆಗಳು ದೊರೆತ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಲು ತನಿಖಾ ತಂಡ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಪರಿಗಣಿಸಿ: ‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇಲಾಖಾ ತನಿಖೆ ನಡೆಸಲಾಗುತ್ತಿದೆ. ಆರೋಪಿಯು ಕರ್ತವ್ಯಕ್ಕೆ ಹಾಜರಾಗಿದ್ದು, ವಿಚಾರಣೆಗೆ ಒಳಪಡಿಸಲಾಗುವುದು. ಪ್ರತಿ ಗ್ರಾಹಕರನ್ನೂ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಆದ್ದರಿಂದ, ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಈವರೆಗೆ, ಒಂದು ಕೋಟಿ ರೂಪಾಯಿಗೂ ಹೆಚ್ಚಿನ ದುರುಪಯೋಗ ಆಗಿರುವುದು ಕಂಡುಬಂದಿದ್ದು, ತನಿಖೆ ಮುಂದುವರಿದಿದೆ’ ಎಂದು ಮೈಸೂರು ವಿಭಾಗದ ಹಿರಿಯ ಪೋಸ್ಟಲ್ ಸೂಪರಿಂಟೆಂಡೆಂಟ್ ಹರೀಶ್ ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದರು.
ಸರಗೂರು ಪಟ್ಟಣದ ಅಂಚೆ ಕಚೇರಿಯಲ್ಲಿ ಪ್ರಕರಣ ಅಲ್ಲಿವೆ 27ಸಾವಿರಕ್ಕೂ ಹೆಚ್ಚಿನ ಖಾತೆಗಳು ಯಾರ‍್ಯಾರು ಭಾಗಿಯಾಗಿದ್ದಾರೆಂಬ ತನಿಖೆ ಪ್ರಗತಿಯಲ್ಲಿ
ಠೇವಣಿದಾರರ ಹಿತದೃಷ್ಟಿ ಯಿಂದಲೇ ನಾವು ತನಿಖೆ ನಡೆಸುತ್ತಿದ್ದೇವೆ. ಹಣ ಕಟ್ಟಿದ್ದ ಗ್ರಾಹಕರಿಗೆ ಅನ್ಯಾಯ ಆಗದಂತೆ ಇಲಾಖೆ ನೋಡಿಕೊಳ್ಳುತ್ತದೆಹರೀಶ್ ಹಿರಿಯ ಪೋಸ್ಟಲ್ ಸೂಪರಿಂಟೆಂಡೆಂಟ್ ಮೈಸೂರು ವಿಭಾಗ
ವರದಿ ಸಲ್ಲಿಸಲಾಗುವುದು
‘ನಿಯಮಾನುಸಾರ ತನಿಖೆ ನಡೆಸಬೇಕಾಗುತ್ತದೆ. ಆದ್ದರಿಂದ ಇಷ್ಟೇ ದಿನದಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಲಾಗದು. ವರದಿ ಸಿದ್ಧಗೊಂಡ ನಂತರ ದಾಖಲೆಗಳ ಸಹಿತ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು. ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ’ ಎಂದು ಪ್ರತಿಕ್ರಿಯಿಸಿದರು. ‘ಅಂಚೆ ಇಲಾಖೆ ಮೇಲೆ ಗ್ರಾಹಕರಿಗೆ ಅಪಾರ ವಿಶ್ವಾಸ–ನಂಬಿಕೆ ಇದೆ. ಈ ಕಾರಣದಿಂದಲೇ ಬಡ ಹಾಗೂ ಮಧ್ಯಮ ವರ್ಗದವರು ಕಷ್ಟಪಟ್ಟು ದುಡಿದ ಹಣವನ್ನು ಠೇವಣಿ ಇಟ್ಟು ಅವಶ್ಯವಿದ್ದಾಗ ಅಥವಾ ಯೋಜನೆ ಅವಧಿ ಪೂರ್ಣಗೊಂಡಾಗ ವಾಪಸ್ ತೆಗೆದುಕೊಳ್ಳುತ್ತಾರೆ. ಆದರೆ ನಂಬಿಕೆಯಿಂದ ಹಣ ಇಟ್ಟವರಿಗೆ ಸರಗೂರಿನಲ್ಲಿ ಭ್ರಮನಿರಸನವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಿ ಗ್ರಾಹಕರಿಗೆ ಹಣ ಮರಳಿಸಿ ನ್ಯಾಯ ದೊರಕಿಸಿಕೊಡುವ ಮೂಲಕ ಇಲಾಖೆಯ ವಿಶ್ವಾಸವನ್ನು ಕಾಪಾಡಡೇಕು’ ಎಂದು ಗ್ರಾಹಕರೊಬ್ಬರು ಒತ್ತಾಯಿಸಿದರು. ಆರೋಪ ಎದುರಿಸುತ್ತಿರುವ ದೀಪಕ್ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.