ಮೈಸೂರು: ಜಿಲ್ಲೆಯಲ್ಲಿ ಒಟ್ಟು 11 ಸಾವಿರ ರೈತರು ಇ–ಕೆವೈಸಿ ಬಾಕಿ ಉಳಿಸಿಕೊಂಡಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ (ಪಿಎಂ ಕಿಸಾನ್) ಯೋಜನೆಯಿಂದ ವಂಚಿತರಾಗಿದ್ದಾರೆ.
ಸಣ್ಣ ಹಿಡುವಳಿ ಜಮೀನು ಹೊಂದಿರುವ ರೈತರಿಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆ ಅಡಿ ವಾರ್ಷಿಕ ₹6 ಸಾವಿರ ಸಹಾಯಧನವನ್ನು ನೀಡುತ್ತ ಬಂದಿದೆ. ತಲಾ ₹2 ಸಾವಿರದಂತೆ ಮೂರು ಕಂತಿನಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಆಗುತ್ತಿದೆ. ಈ ಯೋಜನೆಯ ಫಲಾನುಭವಿ ರೈತರು ಆಗಾಗ್ಗೆ ತಮ್ಮ ಬ್ಯಾಂಕ್ ಖಾತೆಗಳಿಗೆ ಇ–ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಕೆವೈಸಿ ಮಾಡಿಸದ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಂದ್ ಆಗಿದೆ.
2019ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜ್ಯದಲ್ಲಿ ಪ್ರಸ್ತುತ ಸುಮಾರು 43 ಲಕ್ಷ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿಯೂ 2 ಲಕ್ಷಕ್ಕೂ ಅಧಿಕ ರೈತರು ಯೋಜನೆಗೆ ನೋಂದಾಯಿಸಿಕೊಂಡಿದ್ದರು. ಈವರೆಗೆ ಒಟ್ಟು 19 ಕಂತುಗಳಲ್ಲಿ ರೈತರಿಗೆ ಹಣ ಸಿಕ್ಕಿದೆ.
ಯೋಜನೆಗೆ ನೋಂದಾಯಿಸಿಕೊಂಡವರ ಪೈಕಿ ಕಳೆದ ಏಳು ವರ್ಷದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಹೀಗಾಗಿ ಸರ್ಕಾರವು ಮತ್ತೊಮ್ಮೆ ನಿಖರ ಸಮೀಕ್ಷೆಗೆ ಮುಂದಾಗಿದ್ದು, ಇ–ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಒಂದು ಕುಟುಂಬದ ಒಬ್ಬರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ.
‘ಇ–ಕೆವೈಸಿ ಮಾಡಿಸದ ಫಲಾನುಭವಿ ರೈತರಿಗೆ ಈಗಾಗಲೇ ಕೇಂದ್ರ ಸರ್ಕಾರ ಹಣ ಹಾಕುವುದನ್ನು ನಿಲ್ಲಿಸಿದೆ. ಕೆವೈಸಿ ಮಾಡಿಸಿದ ರೈತರ ಬ್ಯಾಂಕ್ ಖಾತೆಗಳಿಗೆ ಮಾತ್ರವೇ ಹಣ ನೀಡಲಾಗುತ್ತಿದೆ. ರೈತರು ತಮ್ಮ ಖಾತೆಗೆ ಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆಗಿರದಿದ್ದಲ್ಲಿ ಶೀಘ್ರ ಬ್ಯಾಂಕ್‌ಗಳ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ರವಿ.
‘ನೋಂದಾಯಿತ ಫಲಾನುಭವಿಗಳ ಪೈಕಿ ಪ್ರಸ್ತುತ ಸಾಕಷ್ಟು ಮಂದಿಯ ಸಂಪರ್ಕ ಸಾಧ್ಯವಾಗುತ್ತಿಲ್ಲ. ಅನೇಕರು ನಿಧನರಾಗಿದ್ದಾರೆ. ಇಂತಹ ಎಲ್ಲ ಖಾತೆಗಳನ್ನು ಮರುಪರಿಶೀಲಿಸಲಾಗುತ್ತಿದೆ. ನಿಧನರಾಗಿದ್ದಲ್ಲಿ ಅಂತಹವರ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ’ ಎನ್ನುತ್ತಾರೆ ಅವರು.
ಇ–ಕೆವೈಸಿ ಮಾಡಿಸದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಹಣ ಸ್ಥಗಿತವಾಗಿದೆ. ಯೋಜನೆಗೆ ನೀಡಲಾದ ಬ್ಯಾಂಕ್ ಖಾತೆಯನ್ನು ಕೂಡಲೇ ಕೆವೈಸಿ ಮಾಡಿಸಬೇಕು– ಕೆ.ಎಚ್. ರವಿ, ಜಂಟಿ ನಿರ್ದೇಶಕ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.