
ಮೈಸೂರು: ಇಲ್ಲಿನ ಪ್ರಮುಖ ಧಾರ್ಮಿಕ ಸ್ಥಳವಾದ ಚಾಮುಂಡಿಬೆಟ್ಟಕ್ಕೆ ‘ಪ್ರಸಾದ್’ ಯೋಜನೆ ವರವೋ ಅಥವಾ ಮಾರಕವೋ ಎಂಬ ಚರ್ಚೆ ತೀವ್ರಗೊಂಡಿದೆ.
ಈ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾಡಳಿತದಿಂದ ಚಾಲನೆ ನೀಡಿರುವುದು ಪರಿಸರವಾದಿಗಳು ಹಾಗೂ ‘ಬೆಟ್ಟದಲ್ಲಿ ಸಹಜತೆಯನ್ನು ಬಯಸುವವರ’ ವಿರೋಧಕ್ಕೆ ಗುರಿಯಾಗಿದೆ.
‘ಪಾರಂಪರಿಕತೆಗೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದೇವೆ’ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ವಿವಿಧ ಸಂಘಟನೆಗಳಿಂದ ಪ್ರತಿಭಟನೆಯೂ ನಡೆಯುತ್ತಿದೆ. ಬೆಟ್ಟದ ನಿವಾಸಿಗಳಿಂದಲೂ ವಿರೋಧ ವ್ಯಕ್ತವಾಗಿದ್ದು, ಅವರೂ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸಂಬಂಧಿಸಿದ ಇಲಾಖೆ ಅಥವಾ ಜಿಲ್ಲಾಡಳಿತದಿಂದ ವಾಸ್ತವವನ್ನು ಮನವರಿಕೆ ಮಾಡಿಕೊಡುವ ಕೆಲಸ ನಡೆದಿಲ್ಲ. ಅಲ್ಲಿ ಕೈಗೊಳ್ಳುತ್ತಿರುವುದು ಶಾಶ್ವತವಾದ ಕಾಮಗಾರಿಯೇ ಅಥವಾ ಯಾವ ಸ್ವರೂಪದ್ದು ಎಂಬುದನ್ನು ತಿಳಿಸುವ ಕಾರ್ಯವೂ ಆಗಿಲ್ಲ.
‘ಬೆಟ್ಟಕ್ಕೆ ಹೆಚ್ಚುತ್ತಿರುವ ಭಕ್ತರ ಅನುಕೂಲಕ್ಕಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಲಾಗುತ್ತಿದೆಯೇ ಹೊರತು, ಮಾಡಿಕೊಡಲಾಗುತ್ತಿರುವ ‘ಆ’ ಅನುಕೂಲವಾದರೂ ಏನು ಎಂಬುದನ್ನು ಸ್ಪಷ್ಟವಾಗಿ ಪ್ರಕಟಿಸಿಲ್ಲದಿರುವುದು ಕೆಲವು ಗೊಂದಲ, ಅನುಮಾನಗಳಿಗೆ ಹಾಗೂ ಚರ್ಚೆಗೆ ‘ಆಸ್ಪದ’ ಮಾಡಿಕೊಟ್ಟಿದೆ. ಈ ಸೂಕ್ಷ್ಮವಾದ ಬೆಟ್ಟವನ್ನು ಬೆಟ್ಟವನ್ನಾಗಿ ಉಳಿಸಿಕೊಳ್ಳಬೇಕು ಎಂಬುದು ಪರಿಸರವಾದಿಗಳ ಆಗ್ರಹ. ಈ ನಡುವೆಯೇ, ಜೆಸಿಬಿ ಮೊದಲಾದ ಯಂತ್ರಗಳು ಗರ್ಜಿಸುತ್ತಿರುವುದು ‘ಕಾಂಕ್ರೀಟ್ ಬೆಟ್ಟ’ವನ್ನಾಗಿ ಮಾರ್ಪಾಡಾಗಿಸುವ ಆತಂಕ ಅವರದಾಗಿದೆ. ಮೈಸೂರು ರಾಜಮನೆತನದಿಂದಲೂ ವಿರೋಧ ವ್ಯಕ್ತವಾಗಿದೆ.
‘ಪ್ರಸಾದ್’ ಯೋಜನೆಯು ಕೇಂದ್ರ ಸರ್ಕಾರ ರೂಪಿಸಿ ಆರ್ಥಿಕ ನೆರವು ಒದಗಿಸುವ ಕಾರ್ಯಕ್ರಮ. ‘ತೀರ್ಥಯಾತ್ರೆ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪಾರಂಪರಿಕ ವರ್ಧನೆ ಡ್ರೈವ್’ (Pilgrimage Rejuvenation and Spiritual Heritage Augmentation Drive) ಎಂಬುದು ಯೋಜನೆಯ ಸಾರ. ಇದರಲ್ಲಿ ಚಾಮುಂಡಿಬೆಟ್ಟವನ್ನು ಆಯ್ಕೆ ಮಾಡಿಕೊಂಡು ಸಿದ್ಧಪಡಿಸಲಾದ ವಿಸ್ತೃತ ಯೋಜನಾ ವರದಿ ಪ್ರಕಾರ ₹ 45.70 ಕೋಟಿ ಅನುದಾನವನ್ನು ಕೇಂದ್ರ ಒದಗಿಸಲಿದೆ. ಇದರಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಬಿಜೆಪಿಯ ಪ್ರತಾಪ ಸಿಂಹ ಅವರು ಸಂಸದರಾಗಿದ್ದಾಗ ರೂಪಿಸಿದ್ದ ಯೋಜನೆ ಇದು. ಪ್ರವಾಸೋದ್ಯಮ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.
‘ಪ್ರಸಾದ್’ ಯೋಜನೆಯಡಿ ಚಾಮುಂಡಿಬೆಟ್ಟದ ಪಾರಂಪರಿಕತೆಗೆ ಪರಿಸರಕ್ಕೆ ಯಾವುದೇ ಧಕ್ಕೆ ಆಗದಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಭಕ್ತರಿಗೆ ಅನುಕೂಲ ಮಾಡಿಕೊಡಲಾಗುವುದುಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಭಕ್ತರಿಗೆ ಸುಗಮ ದರ್ಶನಕ್ಕಾಗಿ ‘ಕಲ್ಲಿನ ಕ್ಯೂ ಮಂಟಪ’ ನಿರ್ಮಿಸಲಾಗುವುದು. ಮಹಾಬಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಸಾಗುವ ಕ್ಯೂ ಚಾಮುಂಡೇಶ್ವರಿ ದೇಗುಲದ ಮುಂದೆ ಸೇರುತ್ತದೆಜಿ.ಲಕ್ಷ್ಮೀಕಾಂತರೆಡ್ಡಿ ಜಿಲ್ಲಾಧಿಕಾರಿ
ನಾನು ಸಂಸದ ಆಗಿದ್ದಾಗ ಪ್ರಸಾದ್ ಯೋಜನೆಗೆ ಬಿ.ಎಸ್. ಯಡಿಯೂರಪ್ಪ ಅವರ ಸಹಕಾರದಿಂದ ಅನುಮೋದನೆ ಕೊಡಿಸಿದ್ದೆ. ಈಗಿನ ವಿವಾದದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲಪ್ರತಾಪ ಸಿಂಹ ಮಾಜಿ ಸಂಸದ
ಬೆಟ್ಟ ಈಗಾಗಲೇ ಕಾಂಕ್ರೀಟ್ ಕಾಡಾಗಿದೆ. ನೈಸರ್ಗಿಕ ಸೌಂದರ್ಯ ಸವಿಯಲು ಆಗದಂತಾಗಿದೆ. ಧಾರ್ಮಿಕ ಸ್ಥಳವನ್ನು ಪಿಕ್ನಿಕ್ ಸ್ಪಾಟ್ ಮಾಡಲು ಸರ್ಕಾರ ಯತ್ನಿಸುತ್ತಿರುವುದು ಸರಿಯಲ್ಲವಿಕ್ರಮ ಅಯ್ಯಂಗಾರ್ ಚಾಮುಂಡೇಶ್ವರಿ ಭಕ್ತ
ಡಿಪಿಆರ್ ಪ್ರಕಾರ ಬೆಟ್ಟಕ್ಕೆ ಬರುವ ಭಕ್ತರು ಅಥವಾ ಪ್ರವಾಸಿಗರಿಗೆ ಉತ್ತಮವಾದ ಅನುಭವ ನೀಡುವ ನಿಟ್ಟಿನಲ್ಲಿ ಸೌಕರ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಪ್ರಸಿದ್ಧ ಯಾತ್ರಾ ಸ್ಥಳ ಧಾರ್ಮಿಕ ಕ್ಷೇತ್ರ ಮತ್ತು ಪ್ರವಾಸಿ ತಾಣಗಳನ್ನು ಯೋಜನಾ ಬದ್ಧ ಸುಸ್ಥಿರ ಹಾಗೂ ಸಮಗ್ರವಾಗಿ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬೆಟ್ಟದಲ್ಲಿ ಒಟ್ಟು 6 ಸ್ಥಳಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಸೌಲಭ್ಯಗಳು ಮಹಿಷಾಸುರ ಪ್ರತಿಮೆ ಸುತ್ತ ಆಕರ್ಷಕ ಪ್ಲಾಜಾ ದೇವಿಕೆರೆ ನಂದಿ ಪ್ರತಿಮೆ ಚಾಮುಂಡಿಬೆಟ್ಟದ ಪಾದ ಹಾಗೂ ವೀಕ್ಷಣಾ ಪ್ರದೇಶ (ವ್ಯೂಪಾಯಿಂಟ್)ಗಳಲ್ಲಿನ ಅಭಿವೃದ್ಧಿಗೆ ಪ್ರತ್ಯೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಭಕ್ತರ ಸರದಿ ಸಾಲು ದೇಗುಲದ ಮುಂಭಾಗದ ಪ್ರಾಂಗಣ ಶೌಚಾಲಯಗಳ ನಿರ್ಮಾಣ ಈಗಿರುವ ಶೌಚಾಲಯಗಳ ಸುಧಾರಣೆಗೆ ಡಿಪಿಆರ್ ತಯಾರಿಸಲಾಗಿದೆ.
ಪಾದದಲ್ಲಿರುವ ಬಳಿ ಮೆಟ್ಟಿಲುಗಳ ಬದಿಯಲ್ಲಿ ಕಂಬಿಗಳ ಅಳವಡಿಕೆ ನೀರಿನ ಕೊಳವೆಗಳ (ಪೈಪ್‌ಲೈನ್) ಅಳವಡಿಕೆ ಜೊತೆಗೆ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಅಲ್ಲಲ್ಲಿ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲೂ ಯೋಜಿಸಲಾಗಿದೆ. ಸಾರ್ವಜನಿಕರಿಗೆ ಪ್ರಕಟಣೆಯ ವ್ಯವಸ್ಥೆಗೂ ‘ಪ್ರಸಾದ್’ನಲ್ಲಿ ಕ್ರಮ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಿ ದೇವಿಯ ದರ್ಶನ ಪಡೆಯುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದರಲ್ಲೂ ರಜಾ ದಿನಗಳು ವಾರಾಂತ್ಯ ಆಷಾಢ ಮಾಸ ವರ್ಷಾಂತ್ಯ ವರ್ಷಾರಂಭ ಮೊದಲಾದ ದಿನಗಳಲ್ಲಿ ಭಕ್ತರ ಸಂಖ್ಯೆ ಇನ್ನೂ ಜಾಸ್ತಿ ಪ್ರಮಾಣದಲ್ಲಿರುತ್ತದೆ. ಇಂತಹ ‘ಭಕ್ತರಿಗೆ’ ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಆಸನಗಳ ನಿರ್ಮಾಣ ಎರಡೂ ಬದಿಗಳಲ್ಲಿ ರೇಲಿಂಗ್‌ಗಳ ನಿರ್ಮಾಣ ಮಳೆಯಿಂದ ರಕ್ಷಣೆ ಪಡೆಯಲು ತಂಗುದಾಣಗಳನ್ನು ನಿರ್ಮಿಸಲಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಮೆಟ್ಟಿಲುಗಳಲ್ಲಿ ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು. ದೇವಸ್ಥಾನದಿಂದ ಪ್ರವೇಶ ದ್ವಾರದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿದೆ ಎನ್ನುತ್ತವೆ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.