ADVERTISEMENT

ಪ್ರತಾಪ ಸಿಂಹ ‘10 ಪರ್ಸೆಂಟ್’ ಸಂಸದ: ಕಾಂಗ್ರೆಸ್‌ ವಕ್ತಾರ ಆರೋಪ

ಪ್ರತಾಪ ಸಿಂಹ ವಿರುದ್ಧ ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ ಆರೋಪ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 9:23 IST
Last Updated 30 ಆಗಸ್ಟ್ 2020, 9:23 IST
   

ಮೈಸೂರು: ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಅವರು ಸಂಸದರ ನಿಧಿಯನ್ನು 10 ಪರ್ಸೆಂಟ್‌ಗೆ ಮಾರಾಟ ಮಾಡಿದ್ದು, ಜನಪ್ರತಿನಿಧಿಯಾಗಿ ಮುಂದುವರಿಯಲು ಅಯೋಗ್ಯ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕಿಡಿಕಾರಿದರು.

‘ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಆರೋಪ‍ ಮಾಡಿದ್ದಕ್ಕೆ, ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದೀರಿ. ಬ್ಲಾಕ್‌ಮೇಲ್‌ ಮಾಡಿದ್ದಾಗಿ ಆರೋಪಿಸಿದ್ದೀರಿ. ತಾಕತ್ತಿದ್ದರೆ ನನ್ನ ಮೇಲಿನ ಆರೋಪಗಳನ್ನು ಸಾಬೀತುಪಡಿಸಲಿ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

‘ನಾನು ಬ್ಲಾಕ್‌ಮೇಲ್‌ ಮಾಡಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಬನ್ನಿ. ಮಾಧ್ಯಮದವರ ಉಪಸ್ಥಿತಿಯಲ್ಲಿ ಬಹಿರಂಗ ಚರ್ಚೆ ನಡೆಯಲಿ. ನನ್ನ ವಿರುದ್ಧದ ಆರೋಪ ಸಾಬೀತಾದರೆ ನೇಣುಹಾಕಿಕೊಳ್ಳುವೆ’ ಎಂದು ಹೇಳಿದರು.

ADVERTISEMENT

‘ನಿನ್ನ ವೈಯುಕ್ತಿಕ ಜೀವನದ ಬಗ್ಗೆ ನನಗೂ ಮಾಹಿತಿಯಿದೆ. ಸಂಸದನಾಗುವುದಕ್ಕಿಂತ ಮುನ್ನ ಏನೆಲ್ಲಾ ಮಾಡಿದ್ದಿ, ಎಷ್ಟು ಹೆಣ್ಣುಮಕ್ಕಳನ್ನು ಹಾಳುಮಾಡಿದ್ದಿ ಎಂಬುದೂ ಗೊತ್ತು. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ನಿನಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಅದಲ್ಲದೆ ಇನ್ನೂ ನಾಲ್ಕು ವಿಡಿಯೊಗಳಿದ್ದು, ನ್ಯಾಯಾಲಯದ ಅನುಮತಿ ಪಡೆದು ಮುಂದೊಂದು ದಿನ ಬಿಡುಗಡೆ ಮಾಡುತ್ತೇನೆ’ ಎಂದು ಹರಿಹಾಯ್ದರು.

‘ಸಂಸದನಾಗುವ ಕನಿಷ್ಠ ಯೋಗ್ಯತೆಯೂ ನಿನಗಿಲ್ಲ. ನೀನೊಬ್ಬ ಬ್ಲೂಫಿಲಂ ಹೀರೊ. ಎಲ್ಲ ಹಗರಣಗಳನ್ನು ಒಂದೊಂದಾಗಿ ಬಹಿರಂಗಪಡಿಸುವೆ’ ಎಂದರು.

‘ಪ್ರತಾಪ ಸಿಂಹ ವಿರುದ್ಧ ನಾನು ದೂರು ನೀಡುವುದಿಲ್ಲ. ಬದಲಿಗೆ ಅವನೇ ನನ್ನ ವಿರುದ್ಧ ಮಾನನಷ್ಟೆ ಮೊಕದ್ದಮೆ ಹೂಡಲಿ. ನನ್ನಲ್ಲಿರುವ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡುತ್ತೇನೆ. ಜನರ ಮೇಲೆ ವಿಶ್ವಾಸವಿದ್ದರೆ ಈ ಸವಾಲುಗಳನ್ನು ಸ್ವೀಕರಿಸು, ಹೇಡಿಯಂತೆ ಓಡಿಹೋಗಬೇಡ’ ಎಂದು ಸವಾಲೆಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.