
ಮೈಸೂರು: ‘ಪ್ರತಾಪ ವರುಣದಿಂದ ಸ್ಪರ್ಧಿಸಲಿ ಎಂದು ಕೆಲವರಿಂದ ಹೇಳಿಸುತ್ತಿದ್ದೀರಲ್ಲಾ, ನಿಮ್ಮಪ್ಪ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಮೈಸೂರು ನಗರದ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೇಳಿ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಮ್ಮಪ್ಪ ಬೆಂಗಳೂರಿನಿಂದ ಮೈಸೂರಿಗೆ ಆರಾಮವಾಗಿ ಓಡಾಡುತ್ತಿರುವ ಹೆದ್ದಾರಿ ಮಾಡಿಸಿದ್ದು ಈ ಪ್ರತಾಪ ಸಿಂಹ ಎನ್ನುವುದು ನೆನಪಿರಲಿ. ಅಂತಹ ಒಂದು ರಸ್ತೆಯನ್ನಾದರೂ ನಿಮ್ಮಪ್ಪ ಮೈಸೂರಿನಲ್ಲಿ ಮಾಡಿಸಿದ್ದಾರಾ?’ ಎಂದು ಕೇಳಿದರು.
‘ಕೆಲಸ ಇಲ್ಲದವರ ಆರೋಪಕ್ಕೆ ಉತ್ತರ ಕೊಡುವುದಿಲ್ಲ’ ಎಂಬ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕೆಲಸವೆಂದರೆ ಬರೀ ವರ್ಗಾವಣೆ ಮಾಡಿಸೋದಾ? ವರ್ಗಾವಣೆ ಪಟ್ಟಿ ಕೊಟ್ಟು ಅಪ್ಪ.. ಅಪ್ಪ.. ನಾ ಕೊಟ್ಟಿರುವುದನ್ನಷ್ಟೆ ಮಾಡಿ ಎನ್ನುವುದು ಮಾತ್ರವೇ ಕೆಲಸವಾ? ಅಪ್ಪನ ಅಧಿಕಾರ ದುರುಪಯೋಗ ಮಾಡಿಕೊಂಡು ಲ್ಯಾಬ್ ಹೆಸರಲ್ಲಿ ಹಣ ಮಾಡೋದೆ ಕೆಲಸನಾ? ಅವರು ಎಂಎಲ್‌ಸಿಯಷ್ಟೆ. ಯಾವ ಅಧಿಕಾರದ ಮೇಲೆ ವರ್ಗಾವಣೆ ಮಾಡಿಸುತ್ತೀರಾ?’ ಎಂದು ಕೇಳಿದರು.
‘ಯತೀಂದ್ರ ಅವರೇ ನಿಮ್ಮಂಥ ಕೆಲಸ ನಾನು ಯಾವತ್ತೂ ಮಾಡಲ್ಲ. ವರ್ಗಾವಣೆ ದಂಧೆ ನಿಮಗೇ ಇರಲಿ. ನಿಮ್ಮಪ್ಪನೂ ಚುನಾವಣೆಯಲ್ಲಿ ಸೋತಿದ್ದರು. ಆಗ ಅವರನ್ನು ಕೆಲಸ ಇಲ್ಲದವರು ಅಂತಿದ್ರಾ? ನನಗೆ ಟಿಕೆಟ್ ತಪ್ಪಿದೆ ಅಷ್ಟೆ’ ಎಂದರು.
‘ವಿಧಾನಸಭೆಗೆ ಮೈಸೂರಿನಿಂದಲೇ ಗೆದ್ದು ಬರ್ತೀನಿ. ಆಗ ನೀವು ಎಲ್ಲಿರುತ್ತೀರಾ ನೋಡ್ತಿನಿ. ನಿಮ್ಮಂತೆ ಈಗಿನಂತೆ ಹಿಂಬಾಗಿಲಿನಿಂದ ಬರುವ ಜಾಯಮಾನ ನನ್ನದಲ್ಲ. ಯತೀಂದ್ರ ಹೆಸರಿನ ಹಿಂದೆ ಸಿದ್ದರಾಮಯ್ಯ ಎಂದು ಇರದೇ ಇದ್ದಿದ್ದರೆ ನಿಮ್ಮನ್ನು ಯಾವ ಯಂಕಣ್ಣ, ಸೀನಣ್ಣನೂ ಕ್ಯಾರೆ ಎನ್ನುತ್ತಿರಲಿಲ್ಲ. ಅಪ್ಪನ ಹೆಸರಲ್ಲಿ ಅಸ್ತಿತ್ವ ಉಳಿಸಿಕೊಂಡ ನೀವು ನನಗೆ ಪಾಠ ಹೇಳಬೇಡಿ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.