ADVERTISEMENT

ಗೋಹಿಂಸೆ ಬೆಂಬಲಿಸುವವರು ನಿಜವಾದ ಅಸ್ವಸ್ಥರು: ಪ್ರತಾಪ ಸಿಂಹ

ಹಸುಗಳಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 14:12 IST
Last Updated 16 ಜನವರಿ 2025, 14:12 IST
ಜಲದರ್ಶಿನಿ ಅತಿಥಿಗೃಹದ ಮುಂಭಾಗ ಗುರುವಾರ ಮಾಜಿ ಸಂಸದ ಪ್ರತಾಪ ಸಿಂಹ ಹಸುವಿಗೆ ಪೂಜೆ ಸಲ್ಲಿಸಿ ಹಾಲು ಕರೆದರು
ಜಲದರ್ಶಿನಿ ಅತಿಥಿಗೃಹದ ಮುಂಭಾಗ ಗುರುವಾರ ಮಾಜಿ ಸಂಸದ ಪ್ರತಾಪ ಸಿಂಹ ಹಸುವಿಗೆ ಪೂಜೆ ಸಲ್ಲಿಸಿ ಹಾಲು ಕರೆದರು   

ಮೈಸೂರು: ಬೆಂಗಳೂರಿ‌ನಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ಮಾಜಿ ಸಂಸದ ಪ್ರತಾಪ ಸಿಂಹ ನೇತೃತ್ವದಲ್ಲಿ ಸ್ಥಳೀಯರು ನಗರದ ಜಲದರ್ಶಿನಿ ಅತಿಥಿಗೃಹದ ಮುಂಭಾಗ ಗೋಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಿದರು.

ಪ್ರತಾಪ ಸಿಂಹ ಮಾತನಾಡಿ, ‘ಗೋಮಾತೆ ಕೆಚ್ಚಲು ಕೊಯ್ದಿರುವ ಘಟನೆ ಹಿಂದುಗಳ ಭಾವನೆಯನ್ನು ಕೆರಳಿಸಿದೆ. ನಂಜನಗೂಡಿನಲ್ಲಿ ಹಸುವಿನ ಬಾಲ ಕತ್ತರಿಸಲಾಗಿದೆ. ಇಂತಹ ದುಷ್ಕೃತ್ಯ ಎಸಗಿದವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ. ಅವನನ್ನು ಬೆಂಬಲಿಸುವ ಮನಸ್ಥಿತಿಯವರು ನಿಜವಾದ ಅಸ್ವಸ್ಥರು. ಅಧಿಕಾರಕೋಸ್ಕರ ಮುಸಲ್ಮಾನರ ತುಷ್ಟೀಕರಣ ಓಲೈಸಬೇಡಿ. ತಾಲಿಬಾನಿ ಆಡಳಿತ ತರಬೇಡಿ. ಘಟನೆ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದ್ದು, ಆರೋಪಿಯನ್ನು ಬಂಧಿಸಿ ಜೈಲಿಗೆ ಹಾಕಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಈ ರೀತಿ ಸರಣಿ ಘಟನೆಗಳು ನಡೆದಿದ್ದವು. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿ.ಎಂ. ಸ್ಥಾನದಿಂದ ಇಳಿಸಿದ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನ ಕೊಡದೇ ಇದ್ದರೆ ಅವರೇ ಕಾಂಗ್ರೆಸ್ ಅನ್ನು ಇಬ್ಭಾಗ ಮಾಡುತ್ತಾರೆ. ಹಸುವಿನ ಕೆಚ್ಚಲು ಕೊಯ್ಯುವುದನ್ನೇ ಪಕ್ಷದ ಚಿಹ್ನೆ ಮಾಡಿಕೊಳ್ಳುತ್ತಾರೆ' ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿನಲ್ಲೇ ಅವರ ಶಿಷ್ಯ ಮರೀಗೌಡ, ಅಂದಿನ ಜಿಲ್ಲಾಧಿಕಾರಿ ಸಿ. ಶಿಖಾ ಅವರನ್ನು ನಿಂದಿಸಿದ್ದರು. ಅವರ ಆಡಳಿತಾವಧಿಯಲ್ಲಿ ಗಣಪತಿ, ಡಿ.ಕೆ. ರವಿ ಅಂತಹ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಸಿದ್ದರಾಮಯ್ಯ ಅವರೇ ನೇರವಾಗಿ ಅಧಿಕಾರಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಇದು ಇಡೀ ಅಧಿಕಾರಿ ವರ್ಗಕ್ಕೆ ಮಾಡಿದ ಅವಮಾನ. ಐಎಎಸ್ ಅಧಿಕಾರಿಗಳು ತಮ್ಮ ಅಸೋಸಿಯೇಷನ್ ಮೂಲಕ ಘಟನೆಯನ್ನು ಖಂಡಿಸಬೇಕು’ ಎಂದು ಆಗ್ರಹಿಸಿದರು.

ರವಿಶಂಕರ್, ಉಮೇಶ್, ಸತೀಶ್, ಸುಬ್ಬಯ್ಯ, ಪರಮೇಶ್, ಶ್ರೀರಾಮ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.