ಮೈಸೂರು: ‘ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡುವುದಾಗಿ ಹೇಳಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೊಂದು ಜಾತಿಗಣತಿಯ ಅಗತ್ಯವಿಲ್ಲ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಕೇಂದ್ರ ಸರ್ಕಾರ ರಾಜಕೀಯವಾಗಿ ಬಲ ತೋರಿಸಲು ಈ ಜಾತಿಗಣತಿ ಮಾಡುತ್ತಿಲ್ಲ. ಜನರ ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿಯಲು ಸರ್ವೇ ಮಾಡುತ್ತಿದೆ. ಹೀಗಾಗಿ ನೀವು ಸುಮ್ಮನೆ ಇರಿ. ನಿಮ್ಮ ಸರ್ವೆಯ ಅಗತ್ಯವಿಲ್ಲ’ ಎಂದರು.
‘ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ₹150 ಕೋಟಿ ವ್ಯಯ ಮಾಡಿ ಕಾಟಾಚಾರಕ್ಕೆ ಜಾತಿಗಣತಿ ಮಾಡಿಸಿದ್ದರು. ಇದು ಅವೈಜ್ಞಾನಿಕ ಅಂತ ಎಲ್ಲರಿಗೂ ಗೊತ್ತಿತ್ತು. ಈಗ ರಾಹುಲ್ ಗಾಂಧಿ ಭೇಟಿ ಮಾಡಿದ ಬಳಿಕ ಮತ್ತೊಂದು ಬಾರಿ ಸಮೀಕ್ಷೆ ಮಾಡುತ್ತೇವೆ ಅಂತ ಹೇಳಿದ್ದಾರೆ. ಇದರಿಂದ ಜನರ ₹150 ಕೋಟಿ ಹಣ ವ್ಯರ್ಥವಾಗಿದೆ. ಇದೆಲ್ಲ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಮಾಡುತ್ತಿರುವ ತಂತ್ರ ಅಷ್ಟೇ’ ಎಂದು ಟೀಕಿಸಿದರು.
‘ಜಾತಿಗಣತಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಏನು ಗೊತ್ತು? ಅವರೇ ಇನ್ನೂ ತಿಳಿದುಕೊಳ್ಳಬೇಕು. ತಮ್ಮ ಹುಳುಕು ಮುಚ್ಚಿಕೊಳ್ಳಲು ಏನೇನೋ ಹೇಳಬಾರದು’ ಎಂದು ಟೀಕಿಸಿದರು.
‘ಲಿಂಗಾಯತರು ವಿರೋಧ ಮಾಡಿದರು, ಹೀಗಾಗಿ ಮತ್ತೊಮ್ಮೆ ಜಾತಿಗಣತಿ ಮಾಡುತ್ತೇವೆ ಎಂದು ಹೇಳುತ್ತಾರೆ. ಒಟ್ಟು 39 ಲಿಂಗಾಯತ ಶಾಸಕರು ಇದ್ದಾರೆ. ಸಿದ್ದರಾಮಯ್ಯ ಕುರ್ಚಿ ಬಿಟ್ಟುಕೊಡುತ್ತಾರ?’ ಎಂದು ಪ್ರಶ್ನಿಸಿದರು.
‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರ ಎನ್ನುವುದನ್ನು ಡಿ.ಕೆ. ಶಿವಕುಮಾರ್ ಬಳಿ ಕೇಳಬೇಕು. ನವೆಂಬರ್‌ನಲ್ಲಿ ಬದಲಾವಣೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇನ್ನೂ 3 ವರ್ಷ ಇವರ ಕುರ್ಚಿ ಕಿತ್ತಾಟದ ಅಸಹ್ಯ ನಡೆಯುತ್ತಲೇ ಇರುತ್ತದೆ. ಜನ ಇದನ್ನು ಸಹಿಸಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.