ADVERTISEMENT

ಕೊಡಗು– ಕೇರಳಕ್ಕೆ ಶಾಂತಿ ಕೋರಿ ಪ್ರಾರ್ಥನೆ

ತ್ಯಾಗ, ಬಲಿದಾನದ ಸಂಕೇತವಾದ ಈದ್‌ ಉಲ್‌ ಅಝ್ಹಾ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 13:49 IST
Last Updated 22 ಆಗಸ್ಟ್ 2018, 13:49 IST
ಮೈಸೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಸಾವಿರಾರು ಮುಸ್ಲಿಮರು ಪ್ರಾರ್ಥಿಸಿದರು
ಮೈಸೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಸಾವಿರಾರು ಮುಸ್ಲಿಮರು ಪ್ರಾರ್ಥಿಸಿದರು   

ಮೈಸೂರು: ಕೊಡಗು ಹಾಗೂ ಕೇರಳದ ನೆರೆ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಶಾಂತಿ ಸಿಗಲಿ, ಬೇಗನೇ ಅವರು ಕಳೆದುಕೊಂಡಿರುವ ಸುಖವೆಲ್ಲ ಮರಳಿ ಸಿಗಲೆಂದು ಸರ್ಖಾಜಿ ಡಾ.ಮೌಲಾನಾ ಮಹಮದ್ ಉಸ್ಮಾನ್‌ ಷರೀಫ್ ಪ್ರಾರ್ಥಿಸಿದರು.

ತಿಲಕನಗರದ ಈದ್ಗಾ ಮೈದಾನದಲ್ಲಿ ಬುಧವಾರ ಬೆಳಿಗ್ಗೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಮರು ಈದ್ ಅಲ್ ಅಧಾ (ಬಕ್ರೀದ್) ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಂದೇಶ ನೀಡಿದ ಸರ್ಖಾಜಿ, ’ಸಮಾನತೆಯನ್ನು ಆಶಿಸುವುದೇ ಬಕ್ರೀದ್‌ ಆಚರಣೆ. ಆಹಾರ ಪವಿತ್ರವಾದುದು. ಅದು ಎಲ್ಲರಿಗೂ ಸಮಾನವಾಗಿ ಸಿಗಬೇಕು. ಅದಕ್ಕಾಗಿ ‍ಪ್ರತಿಯೊಬ್ಬರೂ ಮಾನವೀಯತೆಯನ್ನು ಅಪ್ಪಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಈ ವರ್ಷ ಅನೇಕರಿಗೆ ಸಿಹಿಯ ಬದಲಾಗಿ ಕಹಿಯನ್ನು ನೀಡಿದೆ. ಕೊಡಗು ಹಾಗೂ ಕೇರಳದಲ್ಲಿ ಅತಿವೃಷ್ಟಿಯಿಂದಾಗಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದಾರೆ. ಕೃಷಿಯನ್ನೇ ನಂಬಿದ್ದ ಅನೇಕರು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ಅವರಿಗಾಗಿ ನಾವು ಪ್ರಾರ್ಥಿಸಬೇಕು. ಅವರ ದುಃಖದಲ್ಲಿ ಭಾಗಿಯಾಗಬೇಕು. ಬಕ್ರೀದ್‌ ಹಬ್ಬದ ಪ್ರಯುಕ್ತ ಪ್ರತಿಯೊಬ್ಬ ಮುಸ್ಲಿಮರೂ ಸಂತ್ರಸ್ತರ ಶ್ರೇಯಸ್ಸಿಗಾಗಿ ದೇವರಲ್ಲಿ ಕೋರಿಕೆ ಸಲ್ಲಿಸಬೇಕು’ ಎಂದು ಕರೆ ನೀಡಿದರು.

ಮಾನವೀಯತೆಗಾಗಿ ಪಣ ತೊಡಿ:ನೋವಿನಲ್ಲಿರುವ ಎಲ್ಲರೂ ನಮ್ಮ ಅಣ್ಣ ತಮ್ಮಂದಿರೇ. ಅವರಿಗಾಗಿ ಬದುಕಬೇಕು ಎನ್ನುವುದು ದೇವರ ಇಚ್ಛೆ. ಕಷ್ಟದಲ್ಲಿ ಹೆಗಲು ಜೋಡಿಸುವುದು ಸುಖದಲ್ಲಿ ನಕ್ಕು ನಲಿಯುವುದಕ್ಕಿಂತ ಪವಿತ್ರವಾದುದು. ಇದನ್ನು ಎಲ್ಲರೂ ಆದ್ಯತೆಯ ಮೇಲೆ ಜೀವನದಲ್ಲಿ ಅಳವಡಿಸಿಕೊಂಡರೆ ಸುಖೀ ಸಮಾಜ ಸೃಷ್ಟಿಯಾಗುತ್ತದೆ ಎಂದು ಆಶಿಸಿದರು.

ಮಂಗಳೂರು ಹಾಗೂ ಗೋವಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಷೇಕ್‌ ಅಲಿ ಮಾತನಾಡಿ, ‘ಬಕ್ರೀದ್‌ನ ತ್ಯಾಗ ಹಾಗೂ ಬಲಿದಾನ ಎಲ್ಲರ ಶ್ರೇಯಸ್ಸಿಗೆ ಮಾದರಿಯಾಗಲಿ. ಸುಖೀ ಜೀವನಕ್ಕಾಗಿ ಈ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ’ ಎಂದು ಸಲಹೆ ನೀಡಿದರು.

ಮುಖಂಡರಾದ ಸುಹೇಲ್‌ ಬೇಗ್‌, ಮುಮ್ತಾಜ್‌ ಖಾನ್, ಶೌಖತ್‌ ಅಲಿ ಖಾನ್‌, ಶೌಖತ್ ಪಾಷಾ ಭಾಗವಹಿಸಿದ್ದರು.

ವಿವಿಧೆಡೆ ಆಚರಣೆ: ನಗರದ ವಿವಿಧೆಡೆ ಸಂಭ್ರಮದಿಂದ ಹಬ್ಬ ಆಚರಣೆಯಾಯಿತು. ರಾಜೀವ ನಗರ 3ನೇ ಹಂತ ಹಾಗೂ ಗೌಸಿಯಾ ನಗರದ ಈದ್ಗಾ ಮೈದಾನದಲ್ಲೂ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.