ADVERTISEMENT

ಮೈಸೂರಿನಲ್ಲಿ ಮಳೆ ಕೊರತೆ- ಮುಂಗಾರಿನಲ್ಲೂ ಬೀಳದ ವಾಡಿಕೆ ಮಳೆ

ಹಿಂದಿನ ವರ್ಷಕ್ಕಿಂತಲೂ ಕಡಿಮೆ ವರ್ಷಧಾರೆ

ಡಿ.ಬಿ, ನಾಗರಾಜ
Published 20 ಜೂನ್ 2021, 3:34 IST
Last Updated 20 ಜೂನ್ 2021, 3:34 IST
–
   

ಮೈಸೂರು: ನೈರುತ್ಯ ಮುಂಗಾರು ಜಿಲ್ಲೆಯಾದ್ಯಂತ ಚುರುಕು ಪಡೆದಿದ್ದರೂ; ವಾಡಿಕೆಯ ಮಳೆ ಸುರಿದಿಲ್ಲ. ಪೂರ್ವ ಮುಂಗಾರಿನಲ್ಲೂ ಮಳೆಯ ಕೊರತೆ ಎದುರಾಗಿತ್ತು. ಮುಂಗಾರಿನಲ್ಲೂ ಇದು ಮುಂದುವರಿದಿದೆ.

ಮಳೆ ಕೊರತೆಯಿಂದಾಗಿ ಜಿಲ್ಲೆಯ ಗ್ರಾಮೀಣ ಜನರ ಜೀವನಾಡಿಯಾಗಿರುವ ಕೆರೆ–ಕಟ್ಟೆಗಳಿಗೆ ನೀರು ಹರಿದು ಬಂದಿಲ್ಲ. ಯಾವೂ ಸಹ ಭರ್ತಿಯಾಗಿಲ್ಲ. ಕೆಲವೊಂದು ಕೆರೆಗಳು ಈಗಲೂ ಖಾಲಿ ಖಾಲಿಯಿವೆ. ಇದು ಕೃಷಿಕರ ಚಿಂತೆ ಹೆಚ್ಚಿಸಿದೆ. ಈಗಾಗಲೇ ಬಿತ್ತಿದ್ದ ಪೈರಿಗಷ್ಟೇ ಇದೀಗ ಸುರಿಯುತ್ತಿರುವ ವರ್ಷಧಾರೆ ಪೂರಕವಾಗಿದೆ.

ಜಿಲ್ಲೆಯಾದ್ಯಂತ ಮಳೆ ಕೊರತೆಯ ನಡುವೆಯೂ ಪ್ರಮುಖ ಜಲಾಶಯಗಳಿಗೆ ಒಳ ಹರಿವಿದೆ. ನೆರೆ ಹೊರೆಯ ಜಿಲ್ಲೆಗಳಲ್ಲಿ, ಕೊಡಗು–ಕೇರಳದ ವಯನಾಡುವಿನಲ್ಲಿ ಮುಂಗಾರಿನ ವರ್ಷಧಾರೆ ರಭಸದಿಂದ ಸುರಿಯುತ್ತಿರುವ ಫಲವಿದು. ಈ ವಿದ್ಯಮಾನ ಜಿಲ್ಲೆಯ ರೈತರ ಪಾಲಿಗೆ ಆಶಾಕಿರಣವಾಗಿದೆ.

ADVERTISEMENT

ಶೇ 4ರಷ್ಟು ಕೊರತೆ: ಏಪ್ರಿಲ್‌ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ 6.19 ಸೆಂ.ಮೀ. ವಾಡಿಕೆ ಮಳೆ ಸುರಿಯಬೇಕು. ಆದರೆ 3.59 ಸೆಂ.ಮೀ. ಮಾತ್ರ ಮಳೆಯಾಗಿದೆ. 2.6 ಸೆಂ.ಮೀ.ನಷ್ಟು ಕೊರತೆ ಕಾಡಿದೆ ಎಂದು ಕೃಷಿ ಇಲಾ
ಖೆಯ ಮೂಲಗಳು ತಿಳಿಸಿವೆ.

ಮೇ ತಿಂಗಳಿನಲ್ಲಿ 12.8 ಸೆಂ.ಮೀ. ವಾಡಿಕೆ ಮಳೆಯಾಗಬೇಕಿದ್ದ ಜಾಗದಲ್ಲಿ 7.25 ಸೆಂ.ಮೀ. ವರ್ಷಧಾರೆಯಾಗಿತ್ತು. 5.55 ಸೆಂ.ಮೀ. ಮಳೆ ಸುರಿಯದಿದ್ದರಿಂದ ಮುಂಗಾರು ಪೂರ್ವದಲ್ಲಿ ಸಾಕಷ್ಟು ಮಳೆ ಕೊರತೆ ಕಾಡಿತು ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗೌರಮ್ಮ ಅಗಸಿಬಾಗಿಲ ‘ಪ್ರಜಾವಾಣಿ’ಗೆ ಅಂಕಿ–ಅಂಶದ ಮಾಹಿತಿ ನೀಡಿದರು.

ಮುಂಗಾರು ಆರಂಭದ ಜೂನ್‌ ತಿಂಗಳು ಅರ್ಧ ಗತಿಸಿದರೂ, ಇಲ್ಲಿಯವರೆಗೂ ಈ ತಿಂಗಳಲ್ಲೇ ಸುರಿಯಬೇಕಿದ್ದ ವಾಡಿಕೆ ಮಳೆಯಾಗಿಲ್ಲ. ಶೇ 4ರಷ್ಟು ಕೊರತೆಯಿದೆ. ಪೂರ್ವ ಮುಂಗಾರಿನಲ್ಲಿನ ಮಳೆ ಕೊರತೆ ಮುಂದುವರಿದಿದೆ ಎಂದು ತಿಳಿಸಿದರು.

‘ಮೇ ತಿಂಗಳಿನಲ್ಲಿ ಶೇ 38ರಷ್ಟು ಮಳೆ ಕೊರತೆಯಾಗಿದ್ದರೆ, ಜೂನ್‌ನಲ್ಲಿ ಇಲ್ಲಿಯವರೆಗೂ ಶೇ 4ರಷ್ಟು ಕೊರತೆಯಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಈ ವರ್ಷ ಜಿಲ್ಲೆಯಲ್ಲಿ ವಾಡಿಕೆ ಮಳೆ ಬೀಳಲಿದೆ. ರೈತರು ಈಗಲೇ ಆತಂಕ ಪಡುವ ಅಗತ್ಯವಿಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ಹೇಳಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಕೊರತೆ

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಈ ವರ್ಷ ವಾಡಿಕೆ ಮಳೆಯ ಕೊರತೆಯಾಗಿದೆ. ಕಾಡಂಚಿನ ಸರಗೂರು ತಾಲ್ಲೂಕಿನಲ್ಲಿ ಶೇ 22ರಷ್ಟು ಮಳೆ ಕೊರತೆಯಾಗಿದ್ದರೆ, ಮೈಸೂರು ತಾಲ್ಲೂಕಿನಲ್ಲಿ ಶೇ 21ರಷ್ಟು ಕೊರತೆಯಾಗಿದೆ.

ಪಿರಿಯಾಪಟ್ಟಣದಲ್ಲಿ ಶೇ 4ರಷ್ಟು ಕೊರತೆಯಾಗಿದ್ದರೆ, ತಿ.ನರಸೀಪುರದಲ್ಲಿ ಶೇ 7, ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಶೇ 11, ಹುಣಸೂರು ತಾಲ್ಲೂಕಿನಲ್ಲಿ ಶೇ 15, ನಂಜನಗೂಡು, ಕೆ.ಆರ್‌.ನಗರ ತಾಲ್ಲೂಕಿನಲ್ಲಿ ತಲಾ ಶೇ 19ರಷ್ಟು ಮಳೆ ಕೊರತೆಯಾಗಿದೆ ಎಂದು ಕೃಷಿ ಇಲಾಖೆಯ ಅಂಕಿ–ಅಂಶ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.