ADVERTISEMENT

ಮೈಸೂರು: ಕ್ರಿಸ್‌ಮಸ್‌ ಹಬ್ಬದ ಸಡಗರದಲ್ಲಿ ಸೇಂಟ್‌ ಫಿಲೋಮಿನಾ ಚರ್ಚ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 6:56 IST
Last Updated 21 ಡಿಸೆಂಬರ್ 2023, 6:56 IST
<div class="paragraphs"><p>ಮೈಸೂರಿನ ಸೇಂಟ್‌ ಫಿಲೋಮಿನಾ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ನಿರ್ಮಾಣವಾಗುತ್ತಿರುವ ಗೋದಲಿ (ಕ್ರಿಬ್‌)</p></div>

ಮೈಸೂರಿನ ಸೇಂಟ್‌ ಫಿಲೋಮಿನಾ ಚರ್ಚ್ ಆವರಣದಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ನಿರ್ಮಾಣವಾಗುತ್ತಿರುವ ಗೋದಲಿ (ಕ್ರಿಬ್‌)

   

ಮೈಸೂರು: ಕ್ರಿಸ್‌ಮಸ್‌ ಎಂದಾಗ ಎಲ್ಲ ಕ್ರೈಸ್ತರಿಗೂ ನೆನಪಾಗುವುದು ನಕ್ಷತ್ರದ ಬೆಳಕಿನಲ್ಲಿ ಮಿನುಗುವ ಮನೆ, ವಿವಿಧ ತಿಂಡಿಗಳ ಪರಿಮಳದಲ್ಲಿ ಮುಳುಗೇಳುವ ವಾತಾವರಣ, ಇಂಪಾದ ಕ್ಯಾರಲ್ಸ್‌ ಗೀತೆಗಳ ಗಾಯನ. ಆದರೆ, ಕ್ಯಾಥೋಲಿಕ್‌ ಕ್ರೈಸ್ತರಿಗೆ ‘ಗೋದಲಿ’ (ಕ್ರಿಬ್‌) ನಿರ್ಮಾಣದ ಆನಂದವೂ ಜತೆಯಾಗುತ್ತದೆ.

ನಗರದ ಕ್ರಿಸ್‌ಮಸ್‌ ಸಡಗರದಲ್ಲಿ ಗೋದಲಿಯನ್ನು ನೋಡುವ ಕುತೂಹಲವೂ ಬೆರೆತುಹೋಗಿದೆ. ಕ್ಯಾಥೋಲಿಕ್‌ ಸಮುದಾಯದ ಪ್ರಮುಖ ಚರ್ಚ್‌ ಸೇಂಟ್‌ ಫಿಲೋಮಿನಾ ಆವರಣ ಈ ಬಾರಿ ವಿಶಿಷ್ಟವಾದ ಗೋದಲಿ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿದೆ.

ADVERTISEMENT

ಒಂದೆಡೆ ಮರುಭೂಮಿ, ಮತ್ತೊಂಡೆದೆ ಹುಲ್ಲುಗಾವಲಿನ ಪ್ರದೇಶ, ನಡುವೆ ಮಂಜು ಬೀಳುತ್ತಿರುವ ಬೆತ್ಲೆಹೆಮ್‌ ಊರು, ಎದುರಿನಲ್ಲಿ ಜೆರುಸಲೇಮ್‌ ನಗರ ಹಾಗೂ ಅಲ್ಲಿನ ಪವಿತ್ರ ಗೋಡೆ... ಹೀಗೆ ಕ್ರಿಸ್ತನ ಜನ್ಮಭೂಮಿಯನ್ನು ಯಥಾವತ್ತಾಗಿ ಸೃಷ್ಟಿಸುವ ಪ್ರಯತ್ನ ನಡೆದಿದೆ. 15 ದಿನಗಳಿಂದಲೂ ಕಲಾವಿದ ಶಿವಕುಮಾರ್‌ ನೇತೃತ್ವದ ತಂಡ ಅದ್ಭುತ ‘ಗೋದಲಿ’ ಸೃಷ್ಟಿಯಲ್ಲಿ ನಿರತರಾಗಿದ್ದು, ಬಾಲ ಯೇಸುವಿನ ಆಗಮನಕ್ಕೆ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ.

ಗೋದಲಿ ಶ್ರಮ, ಸಂತುಷ್ಟದ ಸಂಕೇತ: ‘ಯೇಸು ದೇವರು ಮನಸ್ಸು ಮಾಡಿದ್ದರೆ ಎಲ್ಲಿ ಬೇಕಾದರೂ ಹುಟ್ಟಬಹುದಿತ್ತು. ಆದರೆ, ಅವರು ಆಯ್ಕೆ ಮಾಡಿದ್ದು, ಮೇವು ತುಂಬಿಟ್ಟಿದ್ದ ದನದ ಕೊಟ್ಟಿಗೆಯನ್ನು. ಅಲ್ಲಿನ ಹುಲ್ಲುಹಾಸಿನ ಮೇಲೆ ಯೇಸುವಿನ ಜನನವಾಗುತ್ತದೆ. ಆ ಸ್ಥಳವನ್ನೇ ಗೋದಲಿ ಎನ್ನುವುದು. ಅದು ನಮ್ಮ ಹಸಿವನ್ನು ನಿವಾರಿಸಿ ಸಂತುಷ್ಟಗೊಳಿಸುವ ಸಂಕೇತ. ಗೋದಲಿ ನಮಗೆ ಯೇಸು ನೀಡುವ ಸಂತುಷ್ಟವನ್ನು ತೋರುತ್ತದೆ. ಅದನ್ನು ರಚಿಸುವ ಶ್ರಮ ನಮ್ಮನ್ನು ಪ್ರಕೃತಿಗೆ ಹತ್ತಿರವಾಗಿಸುತ್ತದೆ’ ಎಂದು ಫಿಲೋಮಿನಾ ಚರ್ಚ್‌ನ ಫಾದರ್‌ ಸ್ಟ್ಯಾನಿ ಡಿ ಅಲ್ಮೇಡಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೈಸೂರು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಕ್ರಿಸ್‌ಮಸ್‌ನಲ್ಲಿ ಎಲ್ಲ ಸಮುದಾಯದ ಜನರು ಚರ್ಚ್‌ಗೆ ಭೇಟಿ ನೀಡುತ್ತಾರೆ. ಪ್ರತಿ ಬಾರಿಯೂ ನಮ್ಮ ಚರ್ಚ್‌ನಲ್ಲಿ ವಿಭಿನ್ನ ರೀತಿಯಲ್ಲಿ ಗೋದಲಿ ನಿರ್ಮಾಣ ಮಾಡಲಾಗುತ್ತದೆ. ಯೇಸು ಜನನ ಸಂದರ್ಭದಲ್ಲಿದ್ದ ಜೆರುಸಲೇಮ್‌ ಮತ್ತು ಬೆತ್ಲೆಹೆಮ್‌ನ ಯಥಾವತ್ತಾಗಿ ರೂಪಿಸಲಾಗುವುದು. ಸ್ನೋ ವರ್ಲ್ಡ್‌ ರೀತಿಯಲ್ಲಿ ಮಂಜು ಬೀಳುತ್ತಿರುವ ವಾತಾವರಣ ಸೃಷ್ಟಿಸಿ, ಅಂದಿನ ಕಾಲದಂತೆಯೇ ನಿರ್ಮಿಸಿ ನೋಡುಗರಿಗೆ ಒಂದು ವಿಶೇಷ ಅನುಭವ ನೀಡಲಾಗುತ್ತದೆ’ ಎಂದರು.

ಮೈಸೂರಿನ ಸೇಂಟ್‌ ಫಿಲೋಮಿನಾ ಚರ್ಚ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಗೋದಲಿಯಲ್ಲಿ ಸಾಂತಾ ಕ್ಲಾಸ್‌ಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದರು
ಮನೆ ಹಾಗೂ ಚರ್ಚ್‌ಗಳಲ್ಲಿ ‘ಕ್ರಿಬ್‌’ ನಿರ್ಮಾಣ ಯೇಸು ಕಾಲಘಟ್ಟದ ಮರುಸೃಷ್ಟಿ ಯತ್ನ ಹಬ್ಬದ ತಯಾರಿಯಲ್ಲಿ ಕ್ರೈಸ್ತ ಸಮುದಾಯ
‘ಗೋದಲಿ ನಿರ್ಮಾಣಕ್ಕೂ ಸ್ಪರ್ಧೆ’
‘ಗೋದಲಿ ನಿರ್ಮಾಣ ಸಂಸ್ಕೃತಿ ಉಳಿಸಲು ಕೆಲ ಚರ್ಚ್‌ಗಳು ಗೋದಲಿ ನಿರ್ಮಾಣ ಸ್ಪರ್ಧೆ ಏರ್ಪಡಿಸಿ ಮಕ್ಕಳು– ಯುವಜನತೆಯನ್ನು ಹುರಿದುಂಬಿಸುತ್ತವೆ. ಸಾಕಷ್ಟು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ’ ಎಂದು ಮೇಟಗಳ್ಳಿ ಕ್ಲಿಂಟನ್ ತಿಳಿಸಿದರು. ‘ಹಿಂದೆಲ್ಲ ಗೋದಲಿ ನಿರ್ಮಿಸಲು ಕುಟುಂಬದವರೆಲ್ಲಾ ಸಹಕರಿಸುತ್ತಿದ್ದರು. ಇಂದು ಎಲ್ಲೆಡೆ ಚಿಕ್ಕ ಕುಟುಂಬಗಳಿದ್ದು ಶ್ರಮ ವಹಿಸಿ ಯಾರೂ ಗೋದಲಿ ನಿರ್ಮಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್‌ ಗೋದಲಿ ತರುತ್ತಾರೆ. ಇಲ್ಲವೇ ಚರ್ಚ್‌ನಲ್ಲಿ ನೋಡಿ ಸುಮ್ಮನಾಗುತ್ತಾರೆ’ ಎಂದರು.
‘ಪ್ರತಿ ಮನೆಯಲ್ಲೂ ಯೇಸು ಜನನ’
‘ಗೋದಲಿ ನಿರ್ಮಿಸಿದ ಎಲ್ಲರ ಮನೆಯಲ್ಲೂ ಯೇಸು ಹುಟ್ಟುತ್ತಾನೆ ಎಂಬ ನಂಬಿಕೆ ಬಲವಾಗಿದೆ’ ಎಂದು ಗೋಕುಲಂನ ಮ್ಯಾಕ್ಸಿಮ್‌ ಹೇಳಿದರು. ‘ಮನೆ ಆವರಣದಲ್ಲಿ ಸೂಕ್ತ ಸ್ಥಳ ಗುರುತಿಸಿ ಮರದ ಕಂಬಗಳಿಂದ ಸಣ್ಣ ಮಂಟಪ ನಿರ್ಮಿಸಿ ಹೆಣೆದ ತೆಂಗಿನ ಗರಿ ಅಥವಾ ಹುಲ್ಲಿನಿಂದ ಚಾವಣಿಯನ್ನು ಮಾಡಿ ಒಳಗೆ ಹುಲ್ಲನ್ನು ಹಾಸಿದರೆ ಆಯ್ತು. ಗೋದಲಿ ಸಿದ್ಧ. ಈಗೆಲ್ಲಾ ಬೇಕಾದಷ್ಟು ಅಲಂಕಾರ ವಸ್ತುಗಳು ಸಿಗುತ್ತವೆ. ಡಿ.24ರ ರಾತ್ರಿ 12ರ ಬಳಿಕ ಅಲ್ಲಿ ಬಾಲ ಯೇಸುವನ್ನು ಇರಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.